ಹೆದ್ದಾರಿಯಲ್ಲೇ ನಾಡಬಾಂಬ್ ಸ್ಪೋಟಿಸಿಕೊಂಡು ಕಾರಿನಲ್ಲೇ ಯುವಕ ಆತ್ಮಹ*ತ್ಯೆ!

 ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಸೀಮೆಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಬೆಂಗಳೂರಿನಿಂದ ಯುವತಿಯೊಬ್ಬಳನ್ನು ಅಪಹರಿಸಿಕೊಂಡು ಬಂದಿದ್ದ ಎನ್ನಲಾದ ನಾಗೇಂದ್ರ ಎಂಬ ಯುವಕ, ಮಾರ್ಗಮಧ್ಯೆ ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.

ಮಧ್ಯಾಹ್ನ 1.30ರ ಸುಮಾರಿಗೆ ಚಲಿಸುತ್ತಿದ್ದ ವಾಹನದಲ್ಲೇ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾಗೇಂದ್ರ ಯುವತಿಗೆ ಚಾಕುವಿನಿಂದ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಕಂಗಾಲಾದ ಆಕೆ ತಕ್ಷಣವೇ ಚಲಿಸುವ ಕಾರಿನಿಂದ ಹೊರಕ್ಕೆ ಜಿಗಿದು ರಕ್ಷಣೆಗಾಗಿ ಕಿರುಚಾಡಿದ್ದಾಳೆ.

ಚಾಲಕ ಕೆಳಗಿಳಿಯುತ್ತಿದ್ದಂತೆ ಡೋರ್ ಲಾಕ್; ಸುಟ್ಟು ಕರಕಲಾದ ಯುವಕ

ರಸ್ತೆಗೆ ಬಿದ್ದ ಯುವತಿಯನ್ನು ಕಂಡು ಕಾರಿನ ಚಾಲಕ ಆಕೆಯ ಸಹಾಯಕ್ಕೆಂದು ತಕ್ಷಣವೇ ವಾಹನ ನಿಲ್ಲಿಸಿ ಕೆಳಗಿಳಿದಿದ್ದಾನೆ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ನಾಗೇಂದ್ರ ಒಳಭಾಗದಿಂದ ತಕ್ಷಣವೇ ಎಲ್ಲಾ ಬಾಗಿಲುಗಳನ್ನು ಲಾಕ್ ಮಾಡಿಕೊಂಡಿದ್ದಾನೆ. ಯಾರೂ ತಡೆಯುವ ಮುನ್ನವೇ ತಾನು ತಂದಿದ್ದ ನಾಡಬಾಂಬ್‌ಗೆ ಬೆಂಕಿ ಹಚ್ಚಿ, ಇಡೀ ಕಾರನ್ನು ಸ್ಫೋಟಿಸಿಕೊಂಡಿದ್ದಾನೆ.

ಕ್ಷಣಾರ್ಧದಲ್ಲಿ ಕಾರು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದ್ದು, ನಾಗೇಂದ್ರನ ದೇಹ ವಾಹನದೊಳಗೇ ಸುಟ್ಟು ಭಸ್ಮವಾಗಿದೆ. ಗಾಯಾಳು ಯುವತಿಯನ್ನು ಸದ್ಯ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ; ಮತ್ತೊಂದು ಬಾಂಬ್ ಪತ್ತೆಯಿಂದ ಆತಂಕ

ವಿಷಯ ತಿಳಿಯುತ್ತಿದ್ದಂತೆಯೇ ತುಮಕೂರು ಎಸ್ಪಿ ವೆಂಕಟ್ ಅವರು ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಟ್ಟು ಹೋಗಿರುವ ಕಾರಿನ ಅವಶೇಷಗಳು ಹಾಗೂ ನಾಗೇಂದ್ರನ ಮೃತದೇಹವನ್ನು ಪರಿಶೀಲಿಸಿ ಮಾಹಿತಿ ಕಲೆಹಾಕಿದ್ದಾರೆ.

ಪೊಲೀಸರು ಸ್ಥಳದಲ್ಲಿ ತಪಾಸಣೆ ನಡೆಸುತ್ತಿದ್ದಾಗ, ಕಾರಿನ ಸಮೀಪ ಮತ್ತೊಂದು ಸಜೀವ ನಾಡಬಾಂಬ್ ಪತ್ತೆಯಾಗಿರುವುದು ತನಿಖಾ ತಂಡವನ್ನು ಬೆಚ್ಚಿಬೀಳಿಸಿದೆ. ಈ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ತನಿಖೆ ತೀವ್ರಗೊಂಡಿದೆ.

Share it :

Leave a Reply

Your email address will not be published. Required fields are marked *