ಬೆಂಗಳೂರು: ರಾಜ್ಯ ಲೋಕಸೇವಾ ಆಯೋಗ ಜುಲೈ ತಿಂಗಳಲ್ಲಿ 400 ಗೆಜೆಟೆಡ್ ಪ್ರೊಬೇಷನರಿ ಹುದ್ದೆ, 115 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆ ಸೇರಿ ಒಂದು ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಕ್ಕೆ ಸರಣಿ ಅಧಿಸೂಚನೆ ಹೊರಡಿಸಲು ಸಿದ್ಧತೆ ಕೈಗೊಂಡಿದೆ.
ನಾಗರಿಕ ಸೇವಾ ಆಕಾಂಕ್ಷಿಗಳು, ಸರ್ಕಾರಿ ಸೇವೆಯ ಮಾಡುವ ಆಸಕ್ತಿ ಹೊಂದಿರುವ ಯುವ ಜನತೆ ಆಯೋಗದ ಪರೀಕ್ಷೆ ಎದುರಿಸಿ, ಉದ್ಯೋಗ ಗಿಟ್ಟಿಸಿಕೊಳ್ಳಲು ಅಗತ್ಯ ತಯಾರಿ ಮಾಡಿಕೊಳ್ಳಬಹುದಾಗಿದೆ. ನಿಗದಿತ ವೇಳಾಪಟ್ಟಿಯಂತೆ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವ ಮೂಲಕ ಕೆಪಿಎಸ್‌ಸಿ ತನಗೆ ಅಂಟಿರುವ ‘ವಿಳಂಬ ನೇಮಕಾತಿ’ಯ ಕಳಂಕವನ್ನೂ ತೊಡೆದುಕೊಳ್ಳಲು ಮುಂದಾಗಿದೆ.
ತ್ವರಿತವಾಗಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ನೀಲನಕ್ಷೆ ರೂಪಿಸಿಕೊಂಡಿರುವ ಆಯೋಗ, ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳ ಜತೆಗೆ ವಿವಿಧ ಸಚಿವಾಲಯ/ ಇಲಾಖೆಗಳಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಮತ್ತು ‘ಸಿ’ ಗುಂಪಿನ ಹುದ್ದೆಗಳೂ ಸೇರಿದಂತೆ ಸಾವಿರಾರು ಹುದ್ದೆಗಳಿಗೆ ಕಾಲಮಿತಿಯ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ರೆಡಿಯಾಗಿದೆ.
ಶೇ.50ರಷ್ಟು ಮೀಸಲು ಆದೇಶಕ್ಕೆ ಒಳಪಟ್ಟು ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲು ನ್ಯಾಯಾಲಯದಿಂದ ಸದ್ಯ ಯಾವುದೇ ತಡೆ ಇಲ್ಲದಿದ್ದು, ಆಯೋಗ ಈಗಾಗಲೇ ಯಾವ್ಯಾವ ಇಲಾಖೆಗಳ ಸಂಬಂಧ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದೆಂದು ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿ, ಈಗ ಅಂತಿಮ ವೇಳಾಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಬಿಜಿಯಾಗಿದೆ.
ಆಯೋಗ ಖಾಲಿ ಹುದ್ದೆಗಳನ್ನು ತುಂಬಲು ಮೂರು ವಿಧಾನಗಳ ಪರೀಕ್ಷಾ ಪದ್ಧತಿ ಅನುಸರಿಸಲು ತೀರ್ಮಾನಿಸಿದೆ. ಅದರಂತೆ ಮೊದಲನೆಯದಾಗಿ, ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಪ್ರಕ್ರಿಯೆಗಳನ್ನು ನಡೆಸಲಿದೆ. ಎರಡನೇಯದಾಗಿ, ಕೆಲವು ಇಲಾಖೆಗಳ ‘ಎ’ ವೃಂದದ ಹುದ್ದೆಗಳಿಗೆ ಕೇವಲ ಪರೀಕ್ಷೆಗಳನ್ನು ನಡೆಸಿ, ಜ್ಯೇಷ್ಠತೆ ಆಧಾರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಮೂರನೆಯದಾಗಿ ತಾಂತ್ರಿಕ ಪರಿಣತಿ ಅವಶ್ಯಕತೆ ಇರುವಂತಹ ಕೆಲವು ಗ್ರೂಪ್ ‘ಬಿ’ ಹುದ್ದೆಗಳಿಗೆ ಕೇವಲ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಪ್ರಕ್ರಿಯೆ ನಡೆಸಲು ಆಯೋಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಡಿಸ್ಕ್ರಿಪ್ಟೀವ್ ವಿಧಾನದ ಎಲ್ಲಾ ಪರೀಕ್ಷೆ ಆಯೋಗ ನಡೆಸಬೇಕು ಮತ್ತು ಒಎಂಆರ್ ಪದ್ಧತಿಯಲ್ಲಿ ಉತ್ತರಿಸುವಂತಹ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಬೇಕೆಂದು ಸರ್ಕಾರ ತಿಳಿಸಿದೆ.
ಈ ”ತಾತ್ಕಾಲಿಕ ವೇಳಾಪಟ್ಟಿಯಂತೆ ಜುಲೈ ತಿಂಗಳಲ್ಲಿ ಬಹುತೇಕ ಎಲ್ಲಾ ನೇಮಕಾತಿಗಳ ಅಧಿಸೂಚನೆ ಹೊರಬೀಳಲಿದ್ದು, ವಿವಿಧ ಇಲಾಖೆಗಳಿಂದ ಪ್ರಸ್ತಾವ ಸ್ವೀಕರಿಸಿದ ಕೂಡಲೇ ಆಯೋಗ ನಿರ್ದಿಷ್ಟ ಹುದ್ದೆ ಭರ್ತಿ ಮಾಡಲು ಪರೀಕ್ಷಾ ದಿನಾಂಕ ಸೇರಿ ಇಡೀ ನೇಮಕ ಪ್ರಕ್ರಿಯೆಯ ನಿರ್ದಿಷ್ಟ ವೇಳಾಪಟ್ಟಿಯ ಅಧಿಸೂಚನೆ ಪ್ರಕಟಿಸಲಿದೆ. ಅದಕ್ಕಾಗಿ ಆಯೋಗ ಏನೇನು ಸಿದ್ಧತೆಗಳು ಬೇಕೋ ಅವುಗಳನ್ನು ಮಾಡಿಕೊಳ್ಳುತ್ತಿದೆ,” ಎಂದು ಆಯೋಗದ ಕಾರ್ಯದರ್ಶಿ ಕೆ.ಜ್ಯೋತಿ ತಿಳಿಸಿದ್ದಾರೆ.
ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಇಲ್ಲಿದೆ ನೋಡಿ?
- ವಿವಿಧ ಇಲಾಖೆಗಳಲ್ಲಿನ ಪ್ರಥಮ ದರ್ಜೆ ಸಹಾಯಕರು
- ನಾನಾ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರು
- ಪದವಿ ವಿದ್ಯಾರ್ಹತೆಯ ಗ್ರೂಪ್ ‘ಸಿ’ ಹುದ್ದೆಗಳು
- 400 ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಹುದ್ದೆ
- 115 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
- ಲೆಕ್ಕ ಪರಿಶೋಧನಾ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧನಾಧಿಕಾರಿ
ಮೀಸಲು ವಿವಾದದ ಪ್ರಕರಣದಲ್ಲಿ ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್ ನಿರ್ಬಂಧ ವಿಧಿಸಿದ್ದು, ಕಳೆದ ವಾರ ಆಯೋಗ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮನವಿ ಮಾಡಿದರೂ ಅನುಮತಿ ನೀಡಿಲ್ಲ. 2024ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ ನೇಮಕ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ನಿಂತಿದ್ದು, ಸಂದರ್ಶನ ಪ್ರಕ್ರಿಯೆ ಮುಗಿದು ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧವಾಗಿದ್ದರೂ ಆಯೋಗ ಅದನ್ನು ಪ್ರಕಟಿಸಲಾಗುತ್ತಿಲ್ಲ. ನ್ಯಾಯಾಲಯದಿಂದ ಅನುಮೋದನೆ ಸಿಗದ ಹೊರತು ಆಯೋಗ ಸದ್ಯಕ್ಕೆ ಫಲಿತಾಂಶ ಪ್ರಕಟಿಸುವಂತಿಲ್ಲ. ಹಾಗಾಗಿ, ಆಯೋಗ ಸುಮ್ಮನೆ ಕೂರದೆ ಹೊಸ ನೇಮಕ ಪ್ರಕ್ರಿಯೆ ಕೈಗೆತ್ತಿಕೊಂಡಿದೆ ಎನ್ನು ಮಾಹಿತಿ ಬೆಳಕಿಗೆ ಬಂದಿದೆ.





