ಚಿಕ್ಕಬಳ್ಳಾಪುರ: ಸಾರ್ವಜನಿಕರ ಕುಂದುಕೊರತೆ ಆಲಿಸುವ ಆಡಳಿತಾತ್ಮಕ ವೇದಿಕೆಯಲ್ಲಿ ಸಾಮಾನ್ಯವಾಗಿ ಮೂಲಸೌಕರ್ಯ, ಪಿಂಚಣಿ ಇಲ್ಲವೇ ಪಡಿತರ ಚೀಟಿ ಸಂಬಂಧಿತ ಅರ್ಜಿಗಳೇ ಹೆಚ್ಚು. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನಾ ಸಭೆಯ(Praja Seva Andolana) ಜನಸಂಪರ್ಕ ಸಭೆಯಲ್ಲಿ ಅಧಿಕಾರಿಯೊಬ್ಬರಿಗೆ ಎದುರಾದ ಮನವಿ ಇಡೀ ಸಭೆಯನ್ನೇ ಕ್ಷಣಕಾಲ ನಿಬ್ಬೆರಗಾಗಿಸಿತು. ರೈತಾಪಿ ಕುಟುಂಬದ ಯುವಕರಿಗೆ ಕನ್ಯೆ ಸಿಗುತ್ತಿಲ್ಲ, ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ರೈತ ಮುಖಂಡರೊಬ್ಬರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ರೈತನಾಗಿದ್ದೇ ತಪ್ಪಾಯಿತೇ?: ಸಭೆಯಲ್ಲಿ ಕೃಷಿಕರ ಅಳಲು
ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಪ್ರಜಾ ಸೇವಾ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತ ಮುಖಂಡ ಚಿಕ್ಕನರಸಿಂಹಪ್ಪ ಈ ವಿಷಯವನ್ನು ನೇರವಾಗಿ ಪ್ರಸ್ತಾಪಿಸಿದರು. “ಕಾನೂನು ಪ್ರಕಾರ ನಿಗದಿತ ವಯಸ್ಸು ಮೀರಿದರೂ ಗ್ರಾಮೀಣ ಪ್ರದೇಶದ ಕೃಷಿ ಅವಲಂಬಿತ ಯುವಕರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. 30ರ ಹರೆಯ ದಾಟಿದರೂ ಸಂಬಂಧಗಳು ಕೂಡಿಬರದೆ ಯುವಕರು ಅವಿವಾಹಿತರಾಗಿಯೇ ಉಳಿಯುತ್ತಿದ್ದಾರೆ. ಇದು ಕೇವಲ ಮದುವೆಯ ಪ್ರಶ್ನೆಯಾಗಿ ಉಳಿದಿಲ್ಲ, ಬದಲಿಗೆ ರೈತ ಕುಟುಂಬಗಳನ್ನು ತೀವ್ರ ಆತಂಕ ಹಾಗೂ ಕೀಳರಿಮೆಗೆ ತಳ್ಳಿರುವ ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ. ಹೀಗಾಗಿ ಸರ್ಕಾರವು ಈ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ರೈತ ಯುವಕರ ವಿವಾಹಕ್ಕೆ ನೆರವಾಗುವ ನೀತಿ ರೂಪಿಸಬೇಕು” ಎಂದು ಅವರು ಒತ್ತಾಯಿಸಿದರು.
ಸಾರ್ವಜನಿಕ ಸಮಸ್ಯೆಗಳ ಇತ್ಯರ್ಥಕ್ಕೆ ವೇದಿಕೆ:
ಇದಕ್ಕೂ ಮುನ್ನ ಚಾಲನೆ ಪಡೆದ ಆಂದೋಲನದಲ್ಲಿ ಕಂದಾಯ, ಆಹಾರ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರಿಂದ ನೇರವಾಗಿ ಅಹವಾಲು ಸ್ವೀಕರಿಸಿದರು. ವಿಶೇಷವಾಗಿ ಪಡಿತರ ಚೀಟಿಯ ಇ-ಕೆವೈಸಿ ತೊಡಕು, ತಾಂತ್ರಿಕ ಕಾರಣಗಳಿಂದ ನಿಂತುಹೋದ ಬಯೋಮೆಟ್ರಿಕ್ ದೃಢೀಕರಣ ಮುಂತಾದ ದಿನನಿತ್ಯದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕಾರ್ಯ ನಡೆಯಿತು. ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ರಾಜ್ಯಮಟ್ಟದಲ್ಲೂ ಸದ್ದು ಮಾಡಿದ್ದ ಸಮಸ್ಯೆ:
ಗ್ರಾಮೀಣ ಯುವಕರಲ್ಲಿ ಮದುವೆ ಸಂಬಂಧಗಳು ಸಿಗದಿರುವ ಸಮಸ್ಯೆ ದಿನೇದಿನೆ ಗಂಭೀರ ಸ್ವರೂಪ ಪಡೆಯುತ್ತಿರುವುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿದೆ. ಈ ಹಿಂದೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ’ ಜನಸಂಪರ್ಕ ಕಾರ್ಯಕ್ರಮದಲ್ಲೂ ಕೃಷಿಕ ಯುವಕನೊಬ್ಬ ವೇದಿಕೆಯಲ್ಲಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ “ನಾನು ಕೃಷಿ ಮಾಡುತ್ತಿರುವುದರಿಂದ ಹೆಣ್ಣು ಸಿಗುತ್ತಿಲ್ಲ, ನೀವೇ ಹುಡುಕಿಕೊಡಬೇಕು” ಎಂದು ಅರ್ಜಿ ಸಲ್ಲಿಸಿ ಗಮನ ಸೆಳೆದಿದ್ದ. ಇದೀಗ ಗುಡಿಬಂಡೆಯ ಸಾರ್ವಜನಿಕ ಸಭೆಯಲ್ಲೂ ಇದೇ ನೋವು ಪ್ರತಿಧ್ವನಿಸಿದೆ.





