ಬೆಂಗಳೂರು ಬಿಲ್ಡರ್ಸ್‌ಗೆ ಭರ್ಜರಿ ಸಿಹಿ ಸುದ್ದಿ: ಸಡಿಲಗೊಂಡ ಫೈರ್ NOC ನಿಯಮ

ಬೆಂಗಳೂರು: ರಾಜ್ಯದಲ್ಲಿ ಸ್ವಂತ ಸೂರು ಕಟ್ಟಿಕೊಳ್ಳುವ ಸಾಮಾನ್ಯ ನಾಗರಿಕರಿಗೆ ಹಾಗೂ ಸಣ್ಣ-ಮಧ್ಯಮ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವ ಡೆವಲಪರ್‌ಗಳಿಗೆ ಸರ್ಕಾರ ಆಡಳಿತಾತ್ಮಕವಾಗಿ ದೊಡ್ಡ ಸಡಿಲಿಕೆ ನೀಡಿದೆ. ಗೃಹ ಹಾಗೂ ವಸತಿ ಸಮುಚ್ಚಯಗಳ ನಕ್ಷೆ ಮಂಜೂರಾತಿ ಪ್ರಕ್ರಿಯೆಯಲ್ಲಿನ ಅನಗತ್ಯ ವಿಳಂಬ ಮತ್ತು ಅಡೆತಡೆಗಳನ್ನು ನಿವಾರಿಸುವ ಸಲುವಾಗಿ, ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆಯುವ ನಿಯಮಾವಳಿಯನ್ನು ಪರಿಷ್ಕರಿಸಿ ನೂತನ ಕರಡು ಅಧಿಸೂಚನೆ ಹೊರಡಿಸಲಾಗಿದೆ.

‘ಎತ್ತರದ ಕಟ್ಟಡ’ಗಳ ವ್ಯಾಖ್ಯಾನ ಬದಲಾವಣೆ

ಇಲ್ಲಿಯವರೆಗೆ 21 ಮೀಟರ್ ಮೀರಿದ ಕಟ್ಟಡಗಳನ್ನು ‘ಅತಿ ಎತ್ತರದ ಕಟ್ಟಡ’ (High-Rise Building) ಎಂದು ವರ್ಗೀಕರಿಸಿ, ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರದ ನಿಯಮಾವಳಿ ಸಡಿಲಿಕೆ ಮಾರ್ಗಸೂಚಿ ಮತ್ತು ಅಗ್ನಿಶಾಮಕ ದಳದ ತಾಂತ್ರಿಕ ಶಿಫಾರಸುಗಳನ್ನು ಆಧರಿಸಿ, ಈ ಮಿತಿಯನ್ನು ಈಗ 24 ಮೀಟರ್‌ಗೆ ಏರಿಸಲಾಗಿದೆ. ಪರಿಣಾಮವಾಗಿ, ಸರಿಸುಮಾರು 7 ಅಂತಸ್ತಿನವರೆಗಿನ (24 ಮೀಟರ್ ಒಳಗಿನ) ಕಟ್ಟಡಗಳಿಗೆ ಇನ್ಮುಂದೆ ಅಗ್ನಿಶಾಮಕ ಇಲಾಖೆಯ ಎನ್‌ಒಸಿ ಅಗತ್ಯವಿರುವುದಿಲ್ಲ.

24 ಮೀಟರ್ ಮೀರಿದರೆ ಮಾತ್ರ ಕಠಿಣ ನಿಯಮ

ಯಾವ ಕಟ್ಟಡಗಳ ಒಟ್ಟು ಎತ್ತರ 24 ಮೀಟರ್‌ಗಿಂತ ಹೆಚ್ಚಿರುತ್ತದೆಯೋ ಅಂತಹ ಬೃಹತ್ ಯೋಜನೆಗಳಿಗೆ ಮಾತ್ರ ಫೈರ್ ಎನ್‌ಒಸಿ ಕಡ್ಡಾಯವಾಗಿರಲಿದೆ. ಈ ಮುನ್ನ ಪ್ರಕಟಿಸಲಾಗಿದ್ದ ಕರಡನ್ನು ಹಿಂಪಡೆದು ಈ ಹೊಸ ತಿದ್ದುಪಡಿಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ವಿನಾಯಿತಿಯಿಂದಾಗಿ ಅನುಮೋದನೆ ಪ್ರಕ್ರಿಯೆ ಚುರುಕುಗೊಳ್ಳಲಿದ್ದು, ಕಟ್ಟಡ ಮಾಲೀಕರಿಗೆ ಕಚೇರಿಗಳ ಅಲೆದಾಟ ಹಾಗೂ ಆರ್ಥಿಕ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ.

ಸಾರ್ವಜನಿಕರ ಪ್ರತಿಕ್ರಿಯೆಗೆ 30 ದಿನಗಳ ಕಾಲಾವಕಾಶ

ಈ ಪರಿಷ್ಕೃತ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆ, ತಕರಾರು ಅಥವಾ ಸಲಹೆಗಳಿದ್ದಲ್ಲಿ ಸಾರ್ವಜನಿಕರು ಹಾಗೂ ರಿಯಲ್ ಎಸ್ಟೇಟ್ ವಲಯದ ಸಂಘಟನೆಗಳು 30 ದಿನಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರ ಸಲಹೆಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರ ಅಂತಿಮ ಆದೇಶವನ್ನು ಜಾರಿಗೆ ತರಲಿದೆ.

Share it :

Leave a Reply

Your email address will not be published. Required fields are marked *