ಬೆಂಗಳೂರು: ಚಲನಚಿತ್ರ ವಾಣಿಜ್ಯ ಮಂಡಳಿಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬುದನ್ನ ಆಲೋಚನೆ ಮಾಡುತ್ತೇವೆ. ಹೊಸ ಚಲನಚಿತ್ರ ನೀತಿ ತರಲು ಚರ್ಚಿಸುತ್ತೇವೆ. ಸಹಾಯಧನ ಹೆಚ್ಚಳ, ಪ್ರಾಚ್ಯಾಗಾರ ಪ್ರಾರಂಭಿಸಲು ಹಾಗೂ ಈ ವರ್ಷದ ಚಲನಚಿತ್ರ ಪ್ರಶಸ್ತಿ ಪ್ರಕ್ರಿಯೆ ಪ್ರಾರಂಭಿಸಿಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಉಳಿವಿಗೆ ರಾಜ್ಯ ಸರ್ಕಾರ ನೆರವು ನೀಡಲಿದೆ. ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಆಲೋಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಹಾಗೆಯೇ, ಚಿತ್ರನಗರಿ ಘೋಷಣೆ ಮಾಡಿರುವ ಅನುದಾನದ ಬಿಡುಗಡೆಗೆ ಕ್ರಮಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ.
ಜೊತೆಗೆ ಚಿತ್ರನಗರಿ ನಿರ್ಮಾಣಕ್ಕೆ ಘೋಷಣೆ ಮಾಡಿರುವ ಅನುದಾನದ ಬಿಡುಗಡೆಯ ಬಗ್ಗೆ ಹಣಕಾಸು ಇಲಾಖೆಯ ಎಸಿಎಸ್ ಅವರನ್ನು ಉಲ್ಲೇಖಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. 2011 ರಲ್ಲಿ ರೂಪಿಸಿದ್ದ ಚಲನಚಿತ್ರ ನೀತಿಯನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಕಳೆದ 15 ವರ್ಷದಲ್ಲಿ ತಂತ್ರಜ್ಞಾನ ವಿಚಾರವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಆದ ಕಾರಣ ಹೊಸ ನೀತಿಯಲ್ಲಿ ಓಟಿಟಿ ಮತ್ತು ಡಿಜಿಟಲ್ ವಿತರಣಾ ವ್ಯವಸ್ಥೆ, ಎಐ ಮತ್ತು ಹೊಸ ತಂತ್ರಜ್ಞಾನ ಬಳಕೆ, ಕನ್ನಡ ಚಿತ್ರರಂಗ ರಕ್ಷಣೆ, ಸಣ್ಣ ಚಿತ್ರಗಳಿಗೆ ಪ್ರೋತ್ಸಾಹ, ಚಿತ್ರಮಂದಿರಗಳ ಉಳಿವು, ಕಲಾವಿದರು ಮತ್ತು ಕಾರ್ಮಿಕರ ಕಲ್ಯಾಣ, ಚಲನಚಿತ್ರ ಶಿಕ್ಷಣ ಮತ್ತು ಆಕ್ರೈವ್, ಜಾಗತಿಕ ಮಾರುಕಟ್ಟೆ ವಿಸ್ತರಣೆ ಬಗ್ಗೆ ಬದಲಾವಣೆ ತರಬೇಕು ಎಂದರು.
ಪ್ರತಿವರ್ಷ 250 ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅನೇಕ ಓಟಿಟಿ ವೇದಿಕೆಗಳು ಬಹುರಾಷ್ಟ್ರೀಯ ಕಂಪನಿಗಳಾಗಿರುವ ಕಾರಣಕ್ಕೆ ಸಣ್ಣ ಮೊತ್ತದ ಸಿನಿಮಾಗಳು ಎಂದು ಖರೀದಿ ಮಾಡುತ್ತಿಲ್ಲ. ಆದ ಕಾರಣಕ್ಕೆ ಸರ್ಕಾರದಿಂದಲೇ ಓಟಿಟಿ ವೇದಿಕೆ ಪ್ರಾರಂಭಿಸಿ ಕನ್ನಡ ಚಿತ್ರರಂಗದ ಉಳಿವಿಗೆ ಸಹಕಾರಿಯಾಗಬಹುದು.
ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ ಮೂಲಕ ಚಿತ್ರಮಂದಿರಗಳ ಲೈಸೆನ್ಸ್ ನವೀಕರಣಕ್ಕೆ ಏಕಗವಾಕ್ಷಿ ಯೋಜನೆ ತರಬೇಕು. ಅನೇಕ ನಿಯಮಗಳು ಸೆಲ್ಯುಲಾಯ್ಡ್ ಕಾಲಕ್ಕೆ ಹೊಂದಿಕೆಯಾಗುವಂತಿದ್ದು ಡಿಜಿಟಲ್ ಯುಗಕ್ಕೆ ಅನ್ವಯವಾಗುವಂತೆ ಷರತ್ತುಗಳನ್ನ ರೂಪಿಸಬೇಕು. ಈ ಮೊದಲು 1,200 ಚಿತ್ರಮಂದಿರಗಳು ರಾಜ್ಯದಲ್ಲಿದ್ದವು. ಸದ್ಯಕ್ಕೆ ಅದರ ಸಂಖ್ಯೆ 400 ಕ್ಕೆ ಕುಸಿದಿದೆ. ಆದ ಕಾರಣ ಹೊಸ ಬಡಾವಣೆ, ಗ್ರಾಮೀಣ ಪ್ರದೇಶದಲ್ಲಿ ಹೊಸ ಚಿತ್ರಮಂದಿರಗಳನ್ನ ನಿರ್ಮಿಸುವುದಕ್ಕೆ ವಿಶೇಷ ಪ್ರೋತ್ಸಾಹ, ತೆರಿಗೆ, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು.
ಕನ್ನಡ ಚಿತ್ರರಂಗ ಉಳಿವಿಗಾಗಿ ʻಸಮಗ್ರ ಹೊಸ ಚಲನಚಿತ್ರ ನೀತಿʼ ಸೇರಿದಂತೆ ʻಚಲನಚಿತ್ರ ಪ್ರಾಚ್ಯಾಗಾರ ಸಹಾಯಧನ ಹೆಚ್ಚಳʼ, ʻಸರ್ಕಾರದ ಓಟಿಟಿ ವೇದಿಕೆ, ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿʼ, ʻಏಕಪರದೆ ಚಿತ್ರಮಂದಿರಗಳ ನವೀಕರಣʼ, ʻಆಧುನೀಕರಣಕ್ಕೆ ವಿಶೇಷ ನೆರವುʼ, ʻಚಿತ್ರರಂಗದವರಿಗೆ ಫ್ಲಾಟ್ ನಿರ್ಮಾಣಕ್ಕೆ ಬಿಡಿಎಯಿಂದ 5 ಎಕರೆ ಭೂಮಿʼ ನೀಡುವಂತೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲಾ ಅವರ ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಿದ್ದರು. ಈ ವಿಚಾರವಾಗಿ ಡಿಕೆಶಿ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.





