ಜೂನ್‌ನಲ್ಲಿ ಸಂಕಷ್ಟದ ಅವಧಿಯಲ್ಲೂ ದೇಶದ ಯಾವುದೇ ಭಾಗದಲ್ಲಿ ತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿಲ್ಲ – ಹರ್ದೀಪ್ ಸಿಂಗ್ ಪುರಿ

Hardeep Singh Puri

ನವದೆಹಲಿ: ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಸಂಕಷ್ಟದ ಅವಧಿಯಲ್ಲೂ ದೇಶದ ಯಾವುದೇ ಭಾಗದಲ್ಲಿ ತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲೂ ಪೆಟ್ರೋಲ್ ಬಂಕ್‌ಗಳು ಮುಚ್ಚಿಲ್ಲ ಅಥವಾ ಜನರು ಕ್ಯೂ ನಿಲ್ಲುವ ಪರಿಸ್ಥಿತಿ ಬರಲಿಲ್ಲ. ಬಿಕ್ಕಟ್ಟನ್ನು ಭಾರತ ಯಶಸ್ವಿಯಾಗಿ ನಿಭಾಯಿಸಿದೆ ಎಂದರು.

ಮಧ್ಯಪ್ರಾಚ್ಯ ಯುದ್ಧದ ವೇಳೆ ತೈಲ ಕಂಪನಿಗಳು ಅಸಲು ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಮಾರಾಟ ಮಾಡಿದ್ದರಿಂದ ಜೂನ್ 30 ರವರೆಗಿನ ಅವಧಿಗೆ ಒಟ್ಟು 74,781 ಕೋಟಿ ರೂ. ನಷ್ಟ ಅನುಭವಿಸಿವೆ ಎಂದು ಹೇಳಿದರು.

ಮುಂದಿನ 6 ರಿಂದ 12 ತಿಂಗಳುಗಳಲ್ಲಿ ದೇಶದ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ವಾರ್ಷಿಕ 300 ಮಿಲಿಯನ್ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿತಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಮುಂದಿನ ಕೆಲವು ವಾರಗಳ ಕಾಲ ಇದೇ ರೀತಿ ಇಳಿಕೆಯಲ್ಲೇ ಮುಂದುವರಿದರೆ, ದರ ಕಡಿತದ ಬಗ್ಗೆ ಕೇಳುವುದು ನ್ಯಾಯಸಮ್ಮತವಾದ ಪ್ರಶ್ನೆಯಾಗುತ್ತದೆ ಎಂದು ಹೇಳುವ ಮೂಲಕ ಮುಂಬರುವ ದಿನಗಳಲ್ಲಿ ಬೆಲೆ ಇಳಿಕೆಯಾಗುವ ಸುಳಿವು ನೀಡಿದರು.

ಜುಲೈ 1 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮತ್ತು ವಿತರಣೆಯ ಮೇಲಿದ್ದ ತಾತ್ಕಾಲಿಕ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಅಮೆರಿಕ ಮತ್ತು ಇರಾನ್ ನಡುವೆ ಬಿಕ್ಕಟ್ಟು ಕೊನೆಗೊಳಿಸಲು ಒಪ್ಪಂದ ಏರ್ಪಟ್ಟ ನಂತರ ಜೂನ್ ಕೊನೆಯ ವಾರದಲ್ಲಿ ಕಚ್ಚಾ ತೈಲ ಬೆಲೆಗಳು ಇಳಿಕೆಯಾಗಲು ಪ್ರಾರಂಭಿಸಿವೆ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಕಚ್ಚಾ ತೈಲ ಬೆಲೆಗಳು ಇಳಿಕೆಯಾಗಿದ್ದರೂ, ತೈಲ ಕಂಪನಿಗಳು ಇನ್ನೂ ನಷ್ಟದಲ್ಲೇ ಇವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಹೀಗೆಯೇ ಸ್ಥಿರವಾಗಿ ಮುಂದುವರಿದರೆ ಶೀಘ್ರದಲ್ಲೇ ಭಾರತದ ಗ್ರಾಹಕರಿಗೂ ಇಂಧನ ದರ ಇಳಿಕೆಯ ಲಾಭ ಸಿಗುವ ನಿರೀಕ್ಷೆಯಿದೆ.

ತೈಲ ಕಂಪನಿಗಳು ಸಾಮಾನ್ಯವಾಗಿ ತಮಗೆ ಬೇಕಾದ ಕಚ್ಚಾ ತೈಲವನ್ನು ಕನಿಷ್ಠ ಎರಡು ತಿಂಗಳು ಮುಂಚಿತವಾಗಿಯೇ ಖರೀದಿಸುತ್ತವೆ. ಅಂದರೆ ಈಗ ಕಂಪನಿಗಳು ಸಂಸ್ಕರಿಸುತ್ತಿರುವ ತೈಲವು ಏಪ್ರಿಲ್ ಅಥವಾ ಮೇ ತಿಂಗಳ ಆರಂಭದಲ್ಲಿ, ಅಂದರೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಉತ್ತುಂಗದಲ್ಲಿದ್ದಾಗ ದುಬಾರಿ ಬೆಲೆಗೆ ಖರೀದಿಸಿದ್ದಾಗಿದೆ. ಹೀಗಾಗಿ ಜಾಗತಿಕವಾಗಿ ದರ ಇಳಿಕೆಯಾಗಿದ್ದರೂ ಅದರ ಲಾಭ ತಕ್ಷಣಕ್ಕೆ ಸಿಗುತ್ತಿಲ್ಲ ಎಂದು ಸೂಚಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post