ಬಿಎಲ್‌ಒಗಳು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Shobha Karandlaje

ಬೆಂಗಳೂರು: ಬೆಂಗಳೂರಿನ ಬಹಳಷ್ಟು ಮೂಲ ಮತದಾರರು ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಆದರೆ ಅವರ ಜಾಗಕ್ಕೆ ಅಕ್ರಮ ಮತದಾರರನ್ನು ತರಲು ಬಿಎಲ್‌ಒಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಸರ್ಕಾರ ನಮ್ಮ ಬೂತ್ ಮಟ್ಟದ ಏಜೆಂಟರನ್ನು ಹೆದರಿಸುತ್ತಿದ್ದು, ಕೇವಲ ಕಾಂಗ್ರೆಸ್‌ನ ಬಿಎಲ್‌ಎಗಳನ್ನು ಮಾತ್ರ ಕರೆದುಕೊಂಡು ಹೋಗುವಂತೆ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಸೀದಿ ಹಾಗೂ ಸಮುದಾಯ ಭವನಗಳಲ್ಲಿ ನಿಯಮ ಬಾಹಿರವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸರ್ಕಾರ ಸಂಚು ಮಾಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಹಲವು ಕಡೆಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯ ವಿಡಿಯೋಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ ಅವರು, ಕಾಂಗ್ರೆಸ್ ಕಳೆದ ಏಳೆಂಟು ವರ್ಷಗಳಿಂದಲೂ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಕಲಬುರ್ಗಿಯಲ್ಲಿ ಇದೇ ಅಕ್ರಮ ಕೆಲಸವನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.

ಬೂತ್ ಮಟ್ಟದ ಅಧಿಕಾರಿಗಳನ್ನು ಮಸೀದಿಗಳು, ಶಾದಿ ಮಹಲ್‌ಗಳು ಹಾಗೂ ಕಲ್ಯಾಣ ಮಂಟಪಗಳಲ್ಲಿ ಕೂಡಿ ಹಾಕಿ ಸಾಮೂಹಿಕವಾಗಿ ಗಣತಿ ನಮೂನೆ ಅರ್ಜಿಗಳನ್ನು ಕೊಡಿಸಲಾಗುತ್ತಿದೆ. ಚುನಾವಣಾ ನಿಯಮಾವಳಿಗಳ ಉಲ್ಲಂಘನೆಯನ್ನು ಪ್ರಸ್ತಾಪಿಸಿದ ಸಚಿವರು, ರಾಜ್ಯ ಸರ್ಕಾರದ ಮೌಖಿಕ ಆದೇಶದ ಮೇಲೆ ಅಧಿಕಾರಿಗಳು ಹಾಗೂ ಬಿಎಲ್‌ಒಗಳು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಹೊಸದಾಗಿ ಪರಿಷ್ಕರಣೆ ನಡೆಸಬೇಕು ಎಂದು ಸಚಿವರು ಒತ್ತಾಯಿಸಿದರು. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ಅತ್ಯಂತ ಶುದ್ಧವಾದ ಮತ್ತು ಕಠಿಣವಾದ ಮತಪಟ್ಟಿ ಪರಿಷ್ಕರಣೆ ಮಾಡಿದೆ. ಅದೇ ಮಾದರಿಯ ಕ್ರಮ ಈಗ ಕರ್ನಾಟಕದಲ್ಲೂ ಆಗಬೇಕು. ಈ ಇಡೀ ಅಕ್ರಮ ಪ್ರಕ್ರಿಯೆಯ ವಿರುದ್ಧ ಕೇಂದ್ರ ಚುನಾವಣಾ ಆಯೋಗವು ತಕ್ಷಣವೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಅಕ್ರಮ ವಲಸಿಗರಿಗೆ ಯಾವುದೇ ಸೂಕ್ತ ದಾಖಲೆಗಳಿಲ್ಲದಿದ್ದರೂ, ಸೈಬರ್ ಕೇಂದ್ರಗಳ ಮೂಲಕ ನಕಲಿ ಜನನ ಪ್ರಮಾಣ ಪತ್ರ ಸೃಷ್ಟಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಇವರಿಗೆ ಶಾಶ್ವತ ವಾಸದ ಪ್ರಮಾಣ ಪತ್ರ ನೀಡಲು ಸ್ವತಃ ಸಿಎಂ ತೀರ್ಮಾನಿಸಿದ್ದಾರೆ. ಇದೆಲ್ಲವೂ 2028ರ ವಿಧಾನಸಭಾ ಚುನಾವಣೆಯನ್ನು ಅಕ್ರಮವಾಗಿ ಗೆಲ್ಲಲು ನಡೆಸುತ್ತಿರುವ ಸಂಚು ಎಂದು ಸಿಟ್ಟು ಹೊರಹಾಕಿದರು.

ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಬಳಿಕ ಬಾಂಗ್ಲಾದೇಶಿಯರನ್ನು ಓಡಿಸಿದ ಮೇಲೆ ಅವರೆಲ್ಲಾ ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ. ಈಗ ಕರ್ನಾಟಕದಲ್ಲಿ ಆಶ್ರಯ ಪಡೆದಿರುವ ಅಕ್ರಮ ಬಾಂಗ್ಲಾದೇಶದ ಮತದಾರರನ್ನು ಸಕ್ರಮ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಮುಖ್ಯಮಂತ್ರಿಗಳೇ ನಿಮ್ಮ ಮೂಗಿನ ನೇರದಲ್ಲೇ ಅಧಿಕಾರಿಗಳು ಅಕ್ರಮ ಮತದಾರರನ್ನು ಪಟ್ಟಿಗೆ ಸೇರಿಸುತ್ತಿದ್ದಾರೆ ಎಂದು ದೂರಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others