ರಾಜ್ಯವನ್ನು ಹಾಳು ಮಾಡುತ್ತಿರುವ ಕೈ ಮುಗಿಸಲೆಂದೇ ನಾನು ಕಮಲ ಜತೆ ಇದ್ದೀನಿ: ಎಚ್‌ಡಿಕೆ

ಬೆಂಗಳೂರು: ರಾಜ್ಯವನ್ನು ಹಾಳು ಮಾಡುತ್ತಿರುವ ನಿಮ್ಮನ್ನು ಮುಗಿಸಲೆಂದೇ ನಾನು ಬಿಜೆಪಿ ಜತೆಗೆ ಕೈಜೋಡಿಸಿದ್ದೇನೆ ಎಂದು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಜವಾಗಿ ನನ್ನನ್ನು ದುರುಪಯೋಗ ಮಾಡಿಕೊಂಡವರು ನಿಮ್ಮ ಪಕ್ಷದವರು ಎಂದು ತಿರುಗೇಟು ಕೊಟ್ಟರು. ನನ್ನನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ನಿನ್ನಿಂದ ಕರ್ನಾಟಕದ ಜನರಿಗೆ ಒಳ್ಳೆಯ ಕೆಲಸ ಮಾಡಿಸುತ್ತೇನೆ. ಒಳ್ಳೊಳ್ಳೆ ಕಾರ್ಯಕ್ರಮ ಕೊಡುವಿಯಂತೆ ಎಂದಿದ್ದರು. ಆಗ ನಾನು ಹೋಗಲಿಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

2018ರಲ್ಲಿ ನಾನು ಕಾಂಗ್ರೆಸ್‌ನವರಿಗೆ ಬೆಂಬಲ ಕೊಟ್ಟ ನಂತರವೂ ಪ್ರಧಾನಿ ನರೇಂದ್ರ ಮೋದಿ ಅವರು ಒಂದೂವರೆ ಗಂಟೆ ಕೂರಿಸಿಕೊಂಡು ಗಿಳಿಗೆ ಹೇಳಿದಂತೆ ಹೇಳಿದರು. ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿ ನಿನಗೆ ಹೆಸರು ಸಿಗುತ್ತಿಲ್ಲ. ರಾಜೀನಾಮೆ ಕೊಟ್ಟು ಬಾ, ನಾಳೆಯೇ ಪ್ರಮಾಣವಚನ ಮಾಡು.

ಜನ ತಿರಸ್ಕಾರ ಮಾಡಿದ್ದರೂ ನಾವು ಬೆಂಬಲ ಕೊಟ್ಟೆವು. ಆದರೆ, ನಮ್ಮನ್ನು ಯಾವ ರೀತಿ ನಡೆಸಿಕೊಂಡರು? ಅಂದು ನಾನೇನು ಅನ್ಯಾಯ ಮಾಡಿದ್ದೆ? ಬಜೆಟ್‌ ಮಂಡನೆ ಬಗ್ಗೆ ಅವಹೇಳನ ಮಾಡಿದರೂ, ಇವರ ಸಹಕಾರ ಇಲ್ಲದಿದ್ದರೂ ರೈತರ ಸಾಲ ಮನ್ನಾ ಮಾಡಲು ಹಣ ಹೊಂದಿಸಿದ್ದೆ. ಇವರ್ಯಾರೂ ಬೆಂಬಲ ಕೊಡಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಹಲವು ಭಾಗ್ಯಗಳನ್ನು ಕೊಟ್ಟಿದ್ದರೂ 2018ರಲ್ಲಿ ರಾಜ್ಯದ ಜನರು ಕಾಂಗ್ರೆಸ್‌ ತಿರಸ್ಕಾರ ಮಾಡಿದ್ದರು. ಬಿಜೆಪಿ 117 ಅಥವಾ 118ರ ಆಸುಪಾಸಿನಲ್ಲಿತ್ತು. ಅಷ್ಟರಲ್ಲಿ ಗುಲಾಮ್ ನಬಿ ಆಜಾದ್, ಗೆಹ್ಲೋಟ್ ಸೇರಿದಂತೆ ಕಾಂಗ್ರೆಸ್‌ನ ಮೂವರು ವೀಕ್ಷಕರು ತರಾತುರಿಯಲ್ಲಿ ನಮ್ಮ ಮನೆಗೆ ಬಂದಿದ್ದರು. ಇಷ್ಟೊಂದು ಆತುರವೇಕೆ ಎಂದು ಪ್ರಶ್ನಿಸಿದ್ದೆ? ನಾವೆಲ್ಲ ಲೆಕ್ಕಾಚಾರ ಮಾಡಿಬಿಟ್ಟಿದ್ದೇವೆ, ನಮ್ಮ ಜತೆ ಕೈಜೋಡಿಸಿ, ಜಾತ್ಯತೀತತೆ ಉಳಿಸಬೇಕಿದೆ ಎಂದಿದ್ದರು. ಬಳಿಕ ದೇವೇಗೌಡರನ್ನೂ ಭೇಟಿ ಮಾಡಿದ್ದರು.

ಅಂದು ರೈತರ ಸಾಲ ಮನ್ನಾ ಮಾತ್ರವಲ್ಲದೆ, ಹಲವು ಕ್ಷೇತ್ರಗಳಿಗೆ ಅಂದು ನಾನು ಕೊಟ್ಟ ಅನುದಾನದಿಂದಲೇ ಅಭಿವೃದ್ಧಿ ಕಾಮಗಾರಿ ಆಗಿರುವುದು. ಇಂದು ಕಾಂಗ್ರೆಸ್‌ನವರು ಉದ್ಘಾಟಿಸುತ್ತಿರುವ ಕಾಮಗಾರಿಗಳಿಗೆ ಅಂದು ಭದ್ರಬುನಾದಿ ಹಾಕಿ, ಹಣ ಕೊಟ್ಟವನು ನಾನು. ಈ ಮೂರು ವರ್ಷದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ ಎಂದು ಹೇಳಿದ್ದಾರೆ.

ಜೆಡಿಎಸ್‌ ಕಾರ್ಯಕರ್ತರೇ ಬಂದುಬಿಡಿ, ಬಾಗಿಲು ತೆರೆದಿಟ್ಟಿದ್ದೇನೆ ಎಂದು ಸಿಎಂ ಕರೆ ಕೊಟ್ಟಿಲ್ಲವೇ? ನೀವು ಜೆಡಿಎಸ್‌ ಉಳಿಸುವವರಾ? ಬಿಜೆಪಿಯವರು ಜೆಡಿಎಸ್‌ ಮುಗಿಸುವವರಾ? ದ್ವೇಷಕ್ಕಲ್ಲ, ಈ ರಾಜ್ಯ ಹಾಳು ಮಾಡುತ್ತಿರುವ ನಿಮ್ಮನ್ನು ಮುಗಿಸಲೆಂದೇ, ಹಾಳಾಗುತ್ತಿರುವ ರಾಜ್ಯವನ್ನು ಸರಿಪಡಿಸಲೆಂದೇ ಬಿಜೆಪಿ ಜತೆ ಕೈಜೋಡಿಸಿದ್ದೇನೆ ಎಂದು ಎಚ್ಚರಿಕೆ ನೀಡಿದರು.

ನಾವು ವಿಧಾನಸಭೆಯಲ್ಲಿ 40 ರ ಆಸುಪಾಸಿನಲ್ಲಿ ಇದ್ದೆವು. 17ರಿಂದ 18 ಸ್ಥಾನಕ್ಕೆ ತಂದಿದ್ದು ಕಾಂಗ್ರೆಸ್‌ ಪಕ್ಷದ ಕಾಣಿಕೆ. 18ರಿಂದ ಯಾವ ಸಂಖ್ಯೆ ಏರುತ್ತೇವೆ ಎಂಬುದನ್ನು ಜನರು ತೋರಿಸುತ್ತಾರೆ. ಜೆಡಿಎಸ್ ಎಲ್ಲಿರುತ್ತದೆ? ಆ ಪಕ್ಷ ಉಳಿಯುವುದಿಲ್ಲ. ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಕರೆದುಕೊಂಡು ಹೋಗುತ್ತೇನೆ ಎಂದವರು ಯಾರು? ನಮ್ಮವರನ್ನು ಕರೆಯಿಸಿ ಮಾತನಾಡುತ್ತಿರುವುದು ನನಗೂ ಗೊತ್ತಿದೆ ಎಂದು ಹೇಳಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others