ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜನರಿಗೆ ಅನುಕೂಲವಾಗಲು ಖಾಯಂ ನಿವಾಸ ಪ್ರಮಾಣಪತ್ರ ನೀಡುತ್ತೇವೆ: DCM ಡಾ. ಜಿ. ಪರಮೇಶ್ವರ್

ಬೆಂಗಳೂರು : ಚುನಾವಣಾ ಆಯೋಗದವರು ಎಸ್‌ಐಆರ್‌ ಪ್ರಕ್ರಿಯೆಯಲ್ಲಿ 13 ದಾಖಲೆಯನ್ನು ಕೇಳುತ್ತಾರೆ. ಅದರಲ್ಲಿ ʼನೀವು ಸ್ವಂತ ಮನೆಯಲ್ಲಿ ಇದ್ದೀರಾ?ʼ ಎಂಬ ಪ್ರಶ್ನೆಯೂ ಇದೆ. ಹಾಗಾಗಿ ನಾವು ಖಾಯಂ ನಿವಾಸ ಪ್ರಮಾಣಪತ್ರವನ್ನು ನೀಡಲು ಕ್ರಮ ವಹಿಸುವುದಾಗಿ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.

ಇಂದು ತಮ್ಮ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈವರೆಗೆ ಕೇಂದ್ರ ಸರ್ಕಾರ ಯಾವುದೇ ಪ್ರಮಾಣಪತ್ರಗಳನ್ನು ನೀಡಿಲ್ಲ. ಜಾತಿ ಪ್ರಮಾಣಪತ್ರವನ್ನು ಕೂಡ ರಾಜ್ಯ ಸರ್ಕಾರವೇ ನೀಡಿದೆ. ನಾವು ಆಧಾರ್‌ ಕಾರ್ಡ್‌ ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಖಾಯಂ ನಿವಾಸ ಪ್ರಮಾಣಪತ್ರ ನೀಡುತ್ತೇವೆ. ಅದರಲ್ಲಿ ತಪ್ಪೇನಿದೆ? ಎಲ್ಲದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಸುಮಾರು 50 ರಿಂದ 60 ಸಾವಿರ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ ಇಲ್ಲದೆ ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಮಸ್ಯೆಯಾಗಿದೆ. ಈಗ ನಾವು ಖಾಯಂ ಪ್ರಮಾಣ ಪತ್ರದಲ್ಲಿ ಜಾತಿಯನ್ನು ಉಲ್ಲೇಖಿಸಿದರೆ ಪರೀಕ್ಷೆ ಬರೆಯುವ ಮಕ್ಕಳಿಗೆ ಅನುಕೂಲವಾಗುತ್ತದೆ. ಬಿಜೆಪಿಗರು ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಹೇಳಿದರು.

ಬಾಂಗ್ಲಾದೇಶದವರಿಗೂ ಖಾಯಂ ನಿವೇಶನ ಪತ್ರ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದದ್ದು. ಬಾಂಗ್ಲಾದೇಶದ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಇದು ರಾಷ್ಟ್ರೀಯ ಸಮಸ್ಯೆ. ರಾಜ್ಯ ಸರ್ಕಾರ ಬಾಂಗ್ಲಾದೇಶವರಿಗೆ ಪೌರತ್ವ ಕೊಡಲು ಆಗುತ್ತದೆಯೇ? ಒಂದು ವೇಳೆ ಬಾಂಗ್ಲಾದೇಶದವರು ನಮ್ಮ ದೇಶದವರನ್ನು ಮದುವೆಯಾದರೆ, ಆಗ ಅದಕ್ಕೊಂದು ನಿಬಂಧನೆಯಿದೆ. ಅದು ಬಿಟ್ಟು ಬಾಂಗ್ಲಾದೇಶದವರಿಗಾಗಲಿ ಅಥವಾ ಬೇರೆ ದೇಶದವರಿಗಾಗಲಿ ಪೌರತ್ವವನ್ನು ರಾಜ್ಯ ಸರ್ಕಾರ ಕೊಡಲು ಆಗುವುದಿಲ್ಲ ಎಂದು ಈ ವೇಳೆ ಸ್ವಷ್ಟಪಡಿಸಿದರು.

ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿರುವಾಗಲೇ ಜಿಬಿಎ ಚುನಾವಣೆ ಮಾಡಬಹುದು. ಆದರೆ ಚುನಾವಣಾ ಆಯೋಗ ಅದಕ್ಕೆ ಅನುಮತಿ ನೀಡುವುದಿಲ್ಲ. ವಿಶೇಷ ಅನುಮತಿ ನೀಡಿದರೆ ನಾವು ಚುನಾವಣೆಯನ್ನು ಮಾಡಲು ಸಿದ್ಧರಿದ್ದೇವೆ ಎಂದರು.

ಇ-ಪೌತಿ, ಹಕ್ಕುಪತ್ರಗಳ ಕೆಲಸಗಳಿಗೆ ವೇಗ ನೀಡಲು ಜುಲೈ 12, ಭಾನುವಾರ ಎಲ್ಲಾ ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ ಎಂದ ಅವರು, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಹೈಕಮಾಂಡ್‌ ತೀರ್ಮಾನಿಸುವುದಾಗಿ ತಿಳಿಸಿದರು.

ನಿನ್ನೆ ನಡೆದ ದಸರಾ ಆಚರಣೆ ಪೂರ್ವಭಾವಿ ಸಭೆಯಲ್ಲಿ ಸರಳ ದಸರಾ ಆಚರಿಸುವ ಬಗ್ಗೆ ಅಭಿಪ್ರಾಯಗಳು ಬಂದವು. ಆದರೆ, ದಸರಾ ನಮ್ಮ ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಸಾರುವ ಹಬ್ಬ. ಇಂದಿನ ಮಕ್ಕಳಿಗೆ ಇತಿಹಾಸದ ಬಗ್ಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ನಾಡಿನ ಪರಂಪರೆಯನ್ನು ತಿಳಿಸಿಕೊಡುವ ಕೆಲಸ ನಮ್ಮಿಂದ ಆಗಬೇಕು. ನಮ್ಮ ಹಿಂದೂ ಸಂಸ್ಕೃತಿಯ ಆಚರಣೆ ಎಲ್ಲರಿಗೂ ತಿಳಿಯಬೇಕು. ಹಾಗಾಗಿ ದಸರಾವನ್ನು ಸರಳವಾಗಿ ಆಚರಿಸುವುದು ಬೇಡ, ವಿಜೃಂಭಣೆಯಿಂದ ಆಚರಿಸೋಣ ಎಂದು ಸಭೆಯಲ್ಲಿ ಸಲಹೆ ನೀಡಿರುವುದಾಗಿ ಹೇಳಿದರು.

ಮೈಸೂರು ದಸರಾದಲ್ಲಿ ಕಂಬಳ ನಡೆಸುವುದರ ಬಗೆಗಿನ ಪ್ರಶ್ನೆಗೆ ಉತ್ತರಿಸಿ, ಎಲ್ಲರೂ ಅವರವರ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others