ಬೆಂಗಳೂರಲ್ಲಿ ಶೌಚಕ್ಕೆ ಹೋಗಬೇಕೆಂದು ಒಂಟಿ ಮಹಿಳೆ ಮನೆಗೆ ನುಗ್ಗಿ, ಗುಪ್ತಾಂಗ ತೋರಿಸಿದ್ದ ಡೆಲಿವರಿ ಬಾಯ್‌ ಅರೆಸ್ಟ್‌

ಬೆಂಗಳೂರು: ಇಲ್ಲಿನ ಮಾರತ್ತಹಳ್ಳಿಯಲ್ಲಿ ಆರ್ಡರ್ ತಲುಪಿಸಲು ಬಂದ ಡೆಲಿವರಿ ಬಾಯ್ ಒಬ್ಬ, ಒಂಟಿ ಮಹಿಳೆಯ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಮಾರತ್ತಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯ್ ಮಲ್ಲಿಕಾರ್ಜುನ್ ಕಾಮತ್ ಬಂಧಿತ ಡೆಲಿವರಿ ಬಾಯ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಮಾರತಹಳ್ಳಿಯ ಅಪಾರ್ಟ್‌ಮೆಂಟ್‌ ಒಂದಕ್ಕೆ ಪಾರ್ಸೆಲ್ ನೀಡಲು ಬಂದಿದ್ದ ಆರೋಪಿ, ಶೌಚಾಲಯ ಬಳಸಲು ಅನುಮತಿ ಕೇಳಿದ್ದಾನೆ. ಆದರೆ ಮನೆಯಲ್ಲಿ ತಾವು ಒಂಟಿಯಾಗಿರುವುದನ್ನು ಗಮನಿಸಿದ ಮಹಿಳೆ, ಅಪರಿಚಿತರಿಗೆ ಒಳಗೆ ಬರಲು ಅವಕಾಶವಿಲ್ಲ ಎಂದು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ತುರ್ತು ಅಗತ್ಯವಿದ್ದರೆ ನೆರೆಹೊರೆಯ ಪುರುಷರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ಆದರೆ, ಮಹಿಳೆಯ ಮಾತನ್ನು ಲೆಕ್ಕಿಸದ ಆರೋಪಿ, ಚಪ್ಪಲಿಗಳನ್ನು ಹೊರಗೆ ಬಿಟ್ಟು ಬಲವಂತವಾಗಿ ಫ್ಲಾಟ್‌ನೊಳಗೆ ನುಗ್ಗಿದ್ದಾನೆ. ಅನುಮತಿಯಿಲ್ಲದೆ ಶೌಚಾಲಯ ಬಳಸಿದ್ದಲ್ಲದೆ, ಮಹಿಳೆ ಒಬ್ಬರೇ ಇರುವುದನ್ನು ದುರುಪಯೋಗಪಡಿಸಿಕೊಂಡು ಆಕೆಯ ಮುಂದೆ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತವಾಗಿ ವರ್ತಿಸಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ಡೆಲಿವರಿ ಬಾಯ್‌ನ ಈ ವಿಕೃತ ನಡವಳಿಕೆಯಿಂದ ತೀವ್ರ ಆತಂಕ ಹಾಗೂ ಗಾಬರಿಗೊಂಡ ಮಹಿಳೆ, ಕಣ್ಣೀರು ಹಾಕುತ್ತಲೇ ಇಡೀ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಇಂಟರ್ನೆಟ್‌ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದಾದ ಬಳಿಕ ಸಂತ್ರಸ್ತೆ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಮುಕ ಡೆಲಿವರಿ ಬಾಯ್‌ನನ್ನು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇದೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post