ಗೃಹಲಕ್ಷ್ಮಿ ಯೋಜನೆಗೆ ಇ-ಕೆವೈಸಿ ಕಡ್ಡಾಯವಲ್ಲ: ರಾಜ್ಯ ಸರ್ಕಾರದ ಸ್ಪಷ್ಟನೆ

ಶಿವಮೊಗ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಅಪ್ಡೇಟ್ ಮಾಡಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಸುಳ್ಳಾಗಿದ್ದು, ಸಾರ್ವಜನಿಕರು ಇವುಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ಅವರು ಸ್ಪಷ್ಟಪಡಿಸಿದ್ದಾರೆ.

ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯನ್ನು ನಂಬಿ, ಯೋಜನೆಯ ಲಾಭವನ್ನು ಮುಂದುವರೆಸಲು ಫಲಾನುಭವಿಗಳು ಖಾಸಗಿ ಸೈಬರ್ ಕೇಂದ್ರಗಳು, ಗ್ರಾಮ್ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ಮುಗಿಬೀಳುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿನಾಕಾರಣ ಸೈಬರ್ ಕೇಂದ್ರಗಳಿಗೆ ಅಲೆದಾಡಿ ತೊಂದರೆಗೆ ಒಳಗಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಅಧಿಕೃತ ಆದೇಶ ಬಂದಿಲ್ಲ:

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆ ಮಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದರೂ ಸಹ, ಈ ಪರಿಷ್ಕರಣೆ ಯಾವ ಮಟ್ಟದಲ್ಲಿ ನಡೆಯಬೇಕು ಮತ್ತು ಯಾವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾರ್ಗದರ್ಶನ ಅಥವಾ ಸೂಚನೆಗಳು ಸರ್ಕಾರದಿಂದ ಇನ್ನು ಹೊರಬಿದ್ದಿಲ್ಲ.

ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಎ.ಪಿ.ಎಲ್, ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ನೀಡಲಾಗುತ್ತಿದೆ. ಯೋಜನೆ ಆರಂಭವಾದಾಗಿನಿಂದ ಇದುವರೆಗೆ ಒಟ್ಟು 30 ಕಂತುಗಳಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ಡಿ.ಬಿ.ಟಿ ಮೂಲಕ ಯಶಸ್ವಿಯಾಗಿ ಜಮೆ ಮಾಡಲಾಗಿದೆ. ಪ್ರಸ್ತುತ ಯಾವುದೇ ಅಡಚಣೆಯಿಲ್ಲದೆ ಹಣ ಪಾವತಿಯಾಗುತ್ತಿದ್ದು, ಇ-ಕೆವೈಸಿ ನೆಪದಲ್ಲಿ ಸಾರ್ವಜನಿಕರು ಗೊಂದಲಕ್ಕೀಡಾಗಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post