ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಖಡಕ್ ಎಚ್ಚರಿಕೆ ಕೊಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಇಳಿಸಿ ತಮ್ಮನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಹೈಕಮಾಂಡ್’ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಅತ್ಯಂತ ಗಂಭೀರ ಆರೋಪ ಮಾಡಿದರು.

ಈ ಟೌನ್ಶಿಪ್’ಗೆ ಭೂಮಿ ಕೊಡಲು ರೈತರು ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ. ಬಡರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಹೈಕಮಾಂಡ್ ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಬೇರೆ ಬೇರೆ ದಾರಿಗಳಿವೆ. ದಯಮಾಡಿ ಈ ಯೋಜನೆಯನ್ನು ಇಲ್ಲಿಗೇ ಕೈಬಿಡಿ. ಒಂದು ವೇಳೆ ಯೋಜನೆಯನ್ನು ನೀವು ಕೈ ಬಿಡದಿದ್ದರೆ ವಿಧಾನಸೌಧದ ಪಕ್ಕದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮುಂದೆ ಧರಣಿ ಕೂರುತ್ತೇನೆ. ಅಂತಹ ಪರಿಸ್ಥಿತಿಗೆ ನನ್ನನ್ನು ದೂಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು ಮಾಜಿ ಪ್ರಧಾನಿಗಳು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಕಿಕ್ಕಿರಿದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಯಾವ ಅಧಿಕಾರಿ ಕೂಡ ಸರ್ವೆ ಮಾಡುತ್ತೇವೆ ಎಂದು ಬಿಡದಿಗೆ ಹೋಗಲಿಲ್ಲ. ಹೊಸ ಮುಖ್ಯಮಂತ್ರಿ ಬಂದು ಒಂದು ತಿಂಗಳು ಕೂಡ ಆಗಲಿಲ್ಲ, ಆಗಲೇ ಅಧಿಕಾರಿಗಳನ್ನು ಬಿಟ್ಟು ಸರ್ವೆ ಮಾಡಿಸಿ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ. ಯಾವ ಕಾರಣದಿಂದ ನೀವು ಈ ಯೋಜನೆಗೆ ಕೈ ಹಾಕಿದ್ದೀರ ಎಂಬುದು ನನಗೆ ಗೊತ್ತಿದೆ ಎಂದು ದೇವೇಗೌಡರು ಸಿಡಿಮಿಡಿಯಾದರು.

ಸಿದ್ದರಾಮಯ್ಯ ಅವರನ್ನು ಇಳಿಸಲು ದೊಡ್ಡ ಪ್ಲಾನ್ ಮಾಡಿದರು. ಅದಕ್ಕಾಗಿ ಹೈಕಮಾಂಡ್ ಅನ್ನು ಒಲಿಸಿಕೊಳ್ಳಲು ನಾನಾ ಆಮಿಷಗಳನ್ನು ಒಡ್ಡಲಾಯಿತು. ಆ ಆಮಿಷಗಳನ್ನು ಪೂರೈಸಲು ಬಡರೈತರ ಭೂಮಿಗೆ ಕೈ ಹಾಕಿದ್ದೀರಿ. ಚುನಾವಣಾ ಫಂಡ್ ಬಗ್ಗೆ ಕೂಡ ಹೈಕಮಾಂಡ್’ಗೆ ಡಿ.ಕೆ. ಶಿವಕುಮಾರ್ ಆಶ್ವಾಸನೆ ಕೊಟ್ಟಿದ್ದಾರೆ. ಇದೆಲ್ಲವನ್ನು ಸರಿದೂಗಿಸಿಕೊಳ್ಳಲು ಬಿಡದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿಗಳು ಹಾಲಿ ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದರು.

ಬಿಡದಿಯ ಒಂದು ಗ್ರಾಮದಲ್ಲಿ ಜಂಟಿ ಸರ್ವೆ ಮಾಡಲು ಹೋದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತುರ್ತು ಮಾಧ್ಯಮಗೋಷ್ಠಿ ಕರೆದಿದ್ದೇನೆ. ಮಂಡಹಳ್ಳಿ ಎನ್ನುವ ಆ ಹಳ್ಳಿಯಲ್ಲಿ ಶೇಕಡ 40ರಷ್ಟು ಜನ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ. ಅಂತಹವರು ಜಮೀನು ಕೊಡಲು ಸಿದ್ಧ ಎಂದು ಹೇಳುತ್ತಿದ್ದಾರೆ. ಅವರಲ್ಲಿ ಅನೇಕರು ಹಳ್ಳಿಯಲ್ಲಿ ನೆಲೆಸಿಲ್ಲ. ಅಷ್ಟೂ ಜನರಿಗೆ ಸೇರಿ ಇರುವ ಭೂಮಿ ಕೇವಲ 17 ಎಕರೆ ಮಾತ್ರ. 500 ಎಕರೆ ಇರುವ ಜಾಗದ ರೈತರು ಭೂಮಿ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಅಲ್ಲಿ ಗಲಾಟೆಯಾಗಿದೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ತಮ್ಮ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಬಂದರೆ ಯಾರಿಗೆ ಆದರೂ ಕೋಪ ಬರುವುದು ಸಹಜ. ಅದರಂತೆಯೇ ರೈತರು ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಅವರು ಕಂದಾಯ ಅಧಿಕಾರಿಗಳ ಮನವಿಯ ಮೇರೆಗೆ ಅಲ್ಲಿಗೆ ಹೋದೆವು ಎಂದು ಹೇಳುತ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಯಾರಾದರೂ ಬೆಂಬಲ ಕೊಡುತ್ತಾರೆ. ಆದರೆ ಇಲ್ಲಿ ಸರ್ಕಾರವೇ ಕಾನೂನನ್ನು ಮೀರಿ ವರ್ತಿಸಿದೆ. ಕಂದಾಯ ಇಲಾಖೆ ಅಧಿಕಾರಿಗಳು ಕೊಟ್ಟಿರುವ ದೂರಿನ ಆಧಾರದ ಮೇಲೆ ಪೊಲೀಸರು ರೈತರ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿ ಹೇಳಿದಂತೆ ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಹೇಳಿದ್ದಾರೆ. ಇಷ್ಟು ಸಾಲದು ಎಂಬಂತೆ ಐಜಿ ಅವರು ಕೂಡ ಹೋಗಿ ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಹಾಗೆಯೇ ಹೆಣ್ಣುಮಕ್ಕಳು ಕೂಡ ತಮಗಾಗಿರುವ ನೋವು ಹೇಳಿಕೊಂಡಿದ್ದಾರೆ. ರೈತರು ಬದುಕಬೇಕಲ್ಲವೇ? ಇವತ್ತು ಐಜಿ, ಪೊಲೀಸ್ ವರಿಷ್ಟಾಧಿಕಾರಿ ಎಲ್ಲರೂ ರೈತರ ಮಕ್ಕಳೇ ಅಲ್ಲವೇ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಭೂಮಿ ಕೊಡಲ್ಲ ಎಂದು ಹೇಳಿದ ಮೇಲೆಯೂ ಸರ್ವೇ ಮಾಡಲು ಬಂದಿದ್ದನ್ನು ಏನೆಂದು ಕರೆಯಬೇಕು? ಅತಿಕ್ರಮಣ ಮಾಡಲು ಬಂದರೆ ಸುಮ್ಮನಿರು ಸಾಧ್ಯವೇ? ಸರ್ಕಾರ ರೈತರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರು ಮೇಲೆ ಎಫ್ ಐಆರ್ ಹಾಕಿದರೆ ಅವರ ಬದುಕು ಹೇಗೆ ನಡೆಯುತ್ತದೆ? ಸರ್ಕಾರ ಸೂಕ್ಷ್ಮವಾಗಿ ವರ್ತಿಸಬೇಕಾಗುತ್ತದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಪತ್ರಕ್ಕೆ ಸಿಎಂ ಕಚೇರಿ ಹಿಂಬರಹವನ್ನೇ ನೀಡಿಲ್ಲ:

ಈ ರಾಜ್ಯದ ಮುಖ್ಯಮಂತ್ರಿಗಳಿಗೆ ನಾನು ಕಳೆದ ಜೂನ್ 25ರಂದು ಪತ್ರ ಬರೆದಿದ್ದೇನೆ. ಇವತ್ತು ಜುಲೈ 14. ಹೆಚ್ಚು ಕಮ್ಮಿ 20 ದಿನ ಆಗಿದೆ. ಅವರಿಗೆ ಪತ್ರ ತಲುಪಿರುತ್ತದೆ ಎಂದು ಭಾವಿಸಿದ್ದೇನೆ. ಆದರೂ ಅವರಿಗೆ ತಲುಪಿದೆಯೋ ಇಲ್ಲವೋ ಎಂಬ ಬಗ್ಗೆ ನನಗೆ ಈವರೆಗೆ ಹಿಂಬರಹವನ್ನು ಕೊಟ್ಟಿಲ್ಲ. ನಾನು ಒಬ್ಬ ರೈತರ ಮಗ. ಈಗ ನನಗೆ ಯಾವ ಅಧಿಕಾರ ಇಲ್ಲ. ರೈತನ ಮಗನಾಗಿ ನಾನು ಪತ್ರ ಬರೆದಿದ್ದೇನೆ. ಅದಕ್ಕೆ ಒಂದು ಹಿಂಬರಹ ಕೊಡುವ ಸೌಜನ್ಯ ಮುಖ್ಯಮಂತ್ರಿಗಳ ಕಚೇರಿಗೆ ಇಲ್ಲದಾಗಿದೆ ಎಂದು ಮಾಜಿ ಪ್ರಧಾನಿಗಳು ಬೇಸರ ವ್ಯಕ್ತಪಡಿಸಿದರು.

ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿ ಪ್ರತಿಮೆಯ ಮುಂದೆ ಧರಣಿ ಕೂರುತ್ತೇನೆ. ಈಗಲೂ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ, ಧರಣಿ ಕೂರುವ ಪರಿಸ್ಥಿತಿಗೆ ನನ್ನನ್ನು ದೂಡಬೇಡಿ. ರೈತರ ಮೇಲೆ ಹಾಕಿರುವ ಎಫ್’ಐಆರ್ ಅನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ವಿನಂತಿಸುತ್ತೇನೆ. ನೀವು ಕೂಡ ರೈತರ ಮಕ್ಕಳೇ ಅಲ್ಲವೇ? ರೈತರ ಕಷ್ಟ ನೋವು ಅರ್ಥ ಮಾಡಿಕೊಳ್ಳುವ ಶಕ್ತಿ ‌ಇದೆ. ಸದ್ಯಕ್ಕೆ ಏನೋ ಸರ್ವೆ ನಿಲ್ಲಿಸಿದ್ದಾರೆ. ಅದನ್ನು ನಾನು ಸ್ವಾಗತ ಮಾಡುತ್ತೇನೆ. ಬಿಡದಿ ಉಪನಗರ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲವಾದರೆ ಧರಣಿ ಕೂರುವ ನನ್ನ ನಿರ್ಧಾರ ಅಚಲ ಎಂದು ದೇವೇಗೌಡರು ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗೆ 11 ಪುಟಗಳ ಪತ್ರ ಬರೆದಿದ್ದೇನೆ:

ಬಿಡದಿ ರೈತರ ಪರವಾಗಿ ನಾನು ದನಿ ಎತ್ತಿದ್ದೇನೆ. ಮುಖ್ಯಮಂತ್ರಿಗೆ 11 ಪುಟಗಳ ಪತ್ರವನ್ನು ಬರೆದಿದ್ದೇನೆ. ಎಲ್ಲಾ ಮಾಹಿತಿಯನ್ನು ಮತ್ತು ನನ್ನ ಕಳವಳವನ್ನು ಅವರ ಗಮನಕ್ಕೆ ತಂದಿದ್ದೇನೆ. ಶಿವಕುಮಾರ್ ಅವರು ಕೂಡ ರೈತನ ಮಗನೇ. ಅವರು ರೈತರ ಕುರಿತ ಹಿತಾಸಕ್ತಿಯನ್ನು ರಕ್ಷಣೆ ಮಾಡಬೇಕು. ಕುಮಾರಸ್ವಾಮಿ ಅವರು ಹಿಂದೆ ಬಿಡದಿ ಟೌನ್ಶಿಪ್ ಯೋಜನೆ ಮಾಡಲು ಹೊರಟಾಗ ಇವರದೇ ಕಾಂಗ್ರೆಸ್ ಪಕ್ಷ ವಿರೋಧ ಮಾಡಿದ್ದು. ಸತ್ಯಶೋಧನಾ ಸಮಿತಿ ಕೂಡ ಮಾಡಿದ್ದರು. ರೈತರು ಕೂಡ ಆ ಯೋಜನೆ ಬೇಡವೆಂದು ಪಟ್ಟು ಹಿಡಿದರು. ಈ ಕಾರಣಕ್ಕಾಗಿ ಅಂದು ಕುಮಾರಸ್ವಾಮಿ ಅವರು ಆ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟರು ಎಂಬುದನ್ನು ಈ ಸರ್ಕಾರ ಮರೆಯಬಾರದು. ಡಿಕೆ ಶಿವಕುಮಾರ್ ಅವರು ಸತ್ಯವನ್ನು ಮುಚ್ಚಿಟ್ಟು ಕುಮಾರಸ್ವಾಮಿ ಮಾಡಿದರು, ಅದನ್ನು ನಾನು ಮುಂದುವರಿಸುತ್ತಿದ್ದೇನೆ ಎಂದು ಸುಳ್ಳಿ ಹೇಳುತ್ತಿದ್ದಾರೆ. ಅಂದು ಪ್ರತಿಪಕ್ಷದಲ್ಲಿದ್ದು ನೀವೇ ವಿರೋಧಿಸಿ ಇವತ್ತು ಟೌನ್ ಶಿಪ್ ಯೋಜನೆಗೆ ಬಿಡದಿ ರೈತರ ಭೂಮಿಯ ಸ್ವಾಧೀನಕ್ಕೆ ನೋಟಿಫಿಕೇಶನ್ ಹೊರಡಿಸಿದ್ದೀರಿ. ಇದು ಯಾವ ಸೀಮೆಯ ನ್ಯಾಯ ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರು ಆ ಯೋಜನೆ ಕೈಬಿಟ್ಟ ಮೇಲೆ ವೃಷಭಾವತಿ ನೀರು ಬಳಸಿ ಜಾನುವಾರುಗಳಿಗೆ ಮೇವು ಬೆಳೆಯುವ ಹಾಗೆ ಮಾಡಿದರು. ಇವತ್ತು ಆ ಭಾಗದಲ್ಲಿ ತೋಟಗಾರಿಕೆ, ಹೈನುಗಾರಿಕೆ ಸಮೃದ್ಧವಾಗಿದೆ. ರೈತರು ಎರಡು ಕೈಗಳಿಂದ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಪತ್ರದಲ್ಲಿ ಇದೆಲ್ಲವನ್ನು ಸಂಪೂರ್ಣವಾಗಿ ಬರೆದಿದ್ದೇನೆ. ಸಣ್ಣ ಹಿಡುವಳಿದಾರರು; ಅಂದರೆ 1 ಗುಂಟೆಯಿಂದ 5 ಗುಂಟೆ ಜಾಗ ಇರುವವರು 2,555 ರೈತರು ಇದ್ದಾರೆ. 10-20 ಗುಂಟೆ ಹೊಂದಿರುವ ರೈತರು 1,653 ಮಂದಿ ಇದ್ದಾರೆ. 20ರಿಂದ 40 ಗುಂಟೆ ಜಮೀನು ಇರುವವರು 2,257 ರೈತರು ಇದ್ದಾರೆ. 1ರಿಂದ 2 ಎಕರೆ ಹೊಂದಿರುವ 1,342 ರೈತರು ಇದ್ದಾರೆ. ಇಂತಹ ಸಣ್ಣ, ಅತಿಸಣ್ಣ ರೈತರ ಭೂಮಿ ಕಿತ್ತುಕೊಂಡು ಅವರನ್ನು ಎಲ್ಲಿಗೆ ಕಳಿಸುತ್ತೀರಿ ಎಂದು ಅವರು ಪ್ರಶ್ನಿಸಿರು.

ಬೆಂಗಳೂರನ್ನು 5 ಭಾಗ ಮಾಡಿ ಗ್ರೇಟರ್ ಬೆಂಗಳೂರು ಮಾಡಿದಾಗಲು ನಾನು ವಿರೋಧ ಮಾಡಲಿಲ್ಲ. ರೈತರಿಗೆ ನಿವೇಶನಗಳ ಕೊರತೆ ಇದ್ದರೆ ಅದಕ್ಕೆ ಪೂರಕವಾಗಿ ಈಗಾಗಲೇ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಇರುವ ನಿವೇಶನಗಳನ್ನು ನೀಡಿ. ಸಚಿವ ಸತೀಶ್ ಜಾರಕಿಹೊಳಿ ಹೇಳುವಂತೆ 20,000 ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಅವೆಲ್ಲವೂ ಮಾರಾಟವಾಗಿದೆ ಖಾಲಿ ಬಿದ್ದಿವೆ. ಖರೀದಿ ಮಾಡುವವರೇ ಇಲ್ಲ. ಹಾಗಿದ್ದ ಮೇಲೆ ಬಿಡದಿ ಯೋಜನೆ ಬೇಕಾ? ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದರು. ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆ ಸೇರಿ ಹಲವರು ಬಡಾವಣೆಗಳಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳು ಬೇಡಿಕೆ ಇಲ್ಲದೆ ಹಾಗೆಯೇ ಬಿದ್ದಿವೆ. ಇದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಬೇರೆ ಕಡೆ ಬೇಕಾದಷ್ಟು ಒಣ ಜಮೀನು ಇದ್ದರೂ ಬಿಡದಿ ಭೂಮಿ ಮೇಲೆ ಯಾಕೆ ಕಣ್ಣು ಎಂದು ದೇವೇಗೌಡರು ತೀಕ್ಷ್ಣವಾಗಿ ಪ್ರಶ್ನಿಸಿದರು.

ರಾಮನಗರಕ್ಕೂ ಕುಮಾರಸ್ವಾಮಿಗೂ ಸಂಬಂಧವಿಲ್ಲ ಇಂದಿನ ಸಿಎಂಗೆ ತಿರುಗೇಟು ಕೊಟ್ಟ ಮಾಜಿ ಪ್ರಧಾನಿಗಳು; 30 ವರ್ಷಗಳ ಹಿಂದೆಯೇ ಕುಮಾರಸ್ವಾಮಿ ಅವರು ರಾಮನಗರಕ್ಕೆ ಬಂದು ನೆಲೆಸಿದ್ದಾರೆ. ನೆನ್ನೆ ಮೊನ್ನೆ ಬಂದು ಹೋರಾಟ ಮಾಡುತ್ತಿಲ್ಲ. ಮುಖ್ಯಮಂತ್ರಿಗೆ ನೇರವಾಗಿ ಹೇಳುತ್ತೇನೆ, ದಯವಿಟ್ಟು ಬಡವರ ಭೂಮಿಯನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು ಒಬ್ಬರು ಅಲ್ಲಿಗೆ ಹೋಗಿದ್ದಾರೆ. ಅವರು ಯೋಜನೆ ಮಾಡಬಾರದು ಅಂತ ಹೇಳಿದ್ದಾರೆ. ಸರ್ಕಾರ ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಮುಂದುವರಿಸಬಾರದು. ಸರ್ಕಾರದ ತೀರ್ಮಾನವನ್ನು ನೋಡಿಕೊಂಡು ನಾನು ಮುಂದಿನ ಹೆಜ್ಜೆ ಇಡುತ್ತೇನೆ ಎಂದು ದೇವೇಗೌಡರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ಎ.ಮಂಜುನಾಥ್ ಹಾಗೂ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅನೇಕ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others