ಭಾರತ್ ಟೆಕ್ಸ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಕರ್ನಾಟಕ: 2,821 ಕೋಟಿ ಹೂಡಿಕೆ, 11,000ಕ್ಕೂ ಹೆಚ್ಚು ಉದ್ಯೋಗ ಸೃಷ್ಠಿ

ನವದೆಹಲಿ : ವಿಶ್ವದ ಪ್ರಮುಖ ಟೆಕ್ಸ್‌ಟೈಲ್‌ ಸಮಾವೇಶವಾದ ‘ ಭಾರತ್ ಟೆಕ್ಸ್–2026 ‘ರಲ್ಲಿ ಕರ್ನಾಟಕ ರಾಜ್ಯವು ಉತ್ತಮ ಸಾಧನೆ ಮಾಡಿದ್ದು, ವಿವಿಧ ಸಂಸ್ಥೆಗಳೊಂದಿಗೆ ₹2,821 ಕೋಟಿ ಮೌಲ್ಯದ 12 ಹೂಡಿಕೆ ಒಪ್ಪಂದಗಳಿಗೆ (MoU) ಸಹಿ ಹಾಕಿದೆ. ಈ ಬೃಹತ್ ಹೂಡಿಕೆಯಿಂದ ರಾಜ್ಯದಲ್ಲಿ 11,020ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ನವದೆಹಲಿಯ ಭಾರತ್ ಮಂಡಪದಲ್ಲಿ ಆಯೋಜಿಸಲಾಗಿದ್ದ “Investment Opportunities in Karnataka & MoU Signing” ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹಾಗೂ ಜವಳಿ ಅಭಿವೃದ್ಧಿ ಆಯುಕ್ತ ಮತ್ತು ಕೈಮಗ್ಗ ಹಾಗೂ ಜವಳಿ ನಿರ್ದೇಶಕರಾದ ಎ.ಬಿ. ಬಸವರಾಜು ಅವರ ಸಮ್ಮುಖದಲ್ಲಿ ಈ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

‘ಫೈಬರ್ ಟು ಫ್ಯಾಷನ್’ – ಹೂಡಿಕೆಗೆ ಕರ್ನಾಟಕವೇ ಶ್ರೇಷ್ಠ ತಾಣ:

ಕಾರ್ಯಕ್ರಮದಲ್ಲಿ ಪ್ರಮುಖ ಜವಳಿ ಉದ್ಯಮಿಗಳು, ರಫ್ತುದಾರರು ಹಾಗೂ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ರೋಹಿಣಿ ಸಿಂಧೂರಿ ಅವರು , “ಜವಳಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಕರ್ನಾಟಕವು ದೇಶದಲ್ಲೇ ಅತ್ಯುತ್ತಮ ತಾಣವಾಗಿದೆ. ಕರ್ನಾಟಕ ಕೇವಲ ಗಾರ್ಮೆಂಟ್ ಉತ್ಪಾದನೆಯ ಮುಂಚೂಣಿಯ ರಾಜ್ಯವಲ್ಲ; ಕಚ್ಚಾ ನಾರಿನಿಂದ ಹಿಡಿದು ವಿಶ್ವಮಟ್ಟದ ಉಡುಪು ಉತ್ಪಾದನೆಯವರೆಗೆ ಸಂಪೂರ್ಣ ‘ಫೈಬರ್ ಟು ಫ್ಯಾಷನ್’ (Fiber to Fashion) ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಹೂಡಿಕೆ, ಉತ್ಪಾದನೆ ಮತ್ತು ಜಾಗತಿಕ ಮಾರುಕಟ್ಟೆ ವಿಸ್ತರಣೆಗೆ ರಾಜ್ಯವು ಉತ್ತಮ ತಾಣವಾಗಿದೆ,” ಎಂದು ಬಣ್ಣಿಸಿದರು.

ಹೊಸ ಜವಳಿ ನೀತಿ 2026-31: 5 ಲಕ್ಷ ಉದ್ಯೋಗದ ಗುರಿ

ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರೂಪಿಸಲಾಗುತ್ತಿರುವ ‘ಕರ್ನಾಟಕ ಜವಳಿ ಮತ್ತು ಉಡುಪು ನೀತಿ–2026-31’ ರಾಜ್ಯದ ಜವಳಿ ಕ್ಷೇತ್ರಕ್ಕೆ ಹೊಸ ದಿಕ್ಸೂಚಿಯಾಗಲಿದೆ. “ಮುಂದಿನ ಐದು ವರ್ಷಗಳಲ್ಲಿ ₹20,000 ಕೋಟಿ ಹೂಡಿಕೆ ಆಕರ್ಷಿಸಿ, 5 ಲಕ್ಷ ಉದ್ಯೋಗ ಸೃಷ್ಟಿಸುವ ಬೃಹತ್ ಗುರಿಯನ್ನು ಸರ್ಕಾರ ಹೊಂದಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಸೇರಿದಂತೆ ದ್ವಿತೀಯ ಮತ್ತು ತೃತೀಯ ಹಂತದ (Tier-2 & Tier-3) ನಗರಗಳಲ್ಲಿ ಜವಳಿ ಕೈಗಾರಿಕೆಗಳ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ,” ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಉದ್ಯಮಿಗಳಿಗೆ ಏಕಗವಾಕ್ಷಿ (Single Window) ತ್ವರಿತ ಅನುಮೋದನೆ, ಪ್ಲಗ್-ಆ್ಯಂಡ್-ಪ್ಲೇ (Plug-and-Play) ಕೈಗಾರಿಕಾ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ, ವಲಯವಾರು ಪ್ರೋತ್ಸಾಹಧನ ಹಾಗೂ ಸುಸ್ಥಿರ ಉತ್ಪಾದನೆಗೆ ಸರ್ಕಾರವು ಸಂಪೂರ್ಣ ಉತ್ತೇಜನ ನೀಡುತ್ತಿದೆ ಎಂದು ಅವರು ಭರವಸೆ ನೀಡಿದರು.

ಪ್ರಮುಖ ಜವಳಿ ಪಾರ್ಕ್‌ಗಳ ವಿಸ್ತರಣೆ:

ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 1,000 ಎಕರೆ ವಿಸ್ತೀರ್ಣದ ‘ಪಿಎಂ ಮಿತ್ರ ಮೆಗಾ ಟೆಕ್ಸ್‌ಟೈಲ್ ಪಾರ್ಕ್’, ಜೊತೆಗೆ ದೊಡ್ಡಬಳ್ಳಾಪುರ, ಶಿಗ್ಗಾಂವಿ ಮತ್ತು ದಾವಣಗೆರೆಯಲ್ಲಿರುವ ಜವಳಿ ಪಾರ್ಕ್‌ಗಳು ಕರ್ನಾಟಕವನ್ನು ದೇಶದ ಪ್ರಮುಖ ಜವಳಿ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜವಳಿ ಕ್ಷೇತ್ರದ ಪ್ರಮುಖ ಉದ್ಯಮಿಗಳಾದ ಶಾಹಿ ಎಕ್ಸ್‌ಪೋರ್ಟ್ಸ್‌ನ ಆನಂದ ಪದ್ಮನಾಭನ್, ಟೆಕ್ಸ್‌ಪೋರ್ಟ್ ಇಂಡಸ್ಟ್ರೀಸ್‌ನ ನರೇನ್ ಗೋಯೆಂಕಾ, ಗೋಕಲ್ದಾಸ್ ಎಕ್ಸ್‌ಪೋರ್ಟ್ಸ್‌ನ ಪ್ರಭಾತ್ ಕುಮಾರ್ ಸಿಂಗ್ ಹಾಗೂ ಮಂಜುಶ್ರೀ ಸ್ಪಿನ್‌ಟೆಕ್‌ನ ವಿಮಲ್ ಕೇಡಿಯಾ ಸೇರಿದಂತೆ ಹಲವರು ಭಾಗವಹಿಸಿ, ಕರ್ನಾಟಕದಲ್ಲಿನ ಹೂಡಿಕೆ ಅವಕಾಶಗಳು ಹಾಗೂ ಸರ್ಕಾರದ ಹೊಸ ಜವಳಿ ನೀತಿಯ ಕುರಿತು ತಮ್ಮ ಮೆಚ್ಚುಗೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others