ನವದೆಹಲಿ: ಗ್ರಾಹಕರಿಗೆ ಇನ್ನು ಸುಲಭ ಆಯ್ಕೆಯನ್ನು ಕೇಂದ್ರ ಸರ್ಕಾರ ನೀಡಿದ್ದು, ನಿತ್ಯ ಬಳಕೆಯ ಸೌಂದರ್ಯವರ್ಧಕಗಳ ಮೇಲೂ ಹಸಿರು-ಕೆಂಪು ಚುಕ್ಕೆ ಬರಲಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಬಿಗ್ ಅಪ್ಡೇಟ್ ಕೊಟ್ಟಿದ್ದು, ಪ್ಯಾಕ್ ಮಾಡಿದ ಸರಕುಗಳ ನಿಯಮಕ್ಕೆ ಮಹತ್ವದ ತಿದ್ದುಪಡಿ ಮಾಡಿದೆ. ಆಹಾರ ಪದಾರ್ಥಗಳ ಬೆನ್ನಲ್ಲೇ ಶೌಚಾಲಯ ವಸ್ತುಗಳಿಗೂ ಹೊಸ ರೂಲ್ಸ್ ನೀಡಿದ್ದು, ಸಸ್ಯಾಹಾರಿ, ಮಾಂಸಾಹಾರಿ ಮೂಲ ಪತ್ತೆ ಇನ್ನು ಸರಳವಾಗಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಲೀಗಲ್ ಮೆಟ್ರೋಲಜಿಯಮಗಳು, 2011 ಕ್ಕೆ ತಿದ್ದುಪಡಿ ತಂದಿದ್ದು, ಇನ್ಮುಂದೆ ಸೋಪು, ಶಾಂಪೂ, ಟೂತ್‌ಪೇಸ್ಟ್ ಸೇರಿದಂತೆ ಎಲ್ಲಾ ಸೌಂದರ್ಯವರ್ಧಕ ಹಾಗೂ ಶೌಚಾಲಯ ಉತ್ಪನ್ನಗಳ ಮೇಲೆಯೂ ವೆಜ್ ಅಥವಾ ನಾನ್‌ವೆಜ್ ಗುರುತುಗಳನ್ನು ಹಾಕುವುದು ಕಡ್ಡಾಯಗೊಳಿಸಿದೆ.
ಗ್ರಾಹಕರು ತಾವು ಬಳಸುವ ದಿನಬಳಕೆ ವಸ್ತುಗಳು ಸಸ್ಯಾಹಾರ ಮೂಲದ್ದೇ ಅಥವಾ ಮಾಂಸಾಹಾರ ಮೂಲದ್ದೇ ಎಂಬುದನ್ನು ಸುಲಭವಾಗಿ ಗುರುತಿಸಲು ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ
ಆಹಾರ ಪದಾರ್ಥಗಳ ಮಾದರಿಯಲ್ಲೇ ಇನ್ಮುಂದೆ ನಾವು ನಿತ್ಯ ಬಳಸುವ ಸೋಪು, ಶಾಂಪೂ, ಟೂತ್‌ಪೇಸ್ಟ್ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳ ಮೇಲೂ ಸಸ್ಯಾಹಾರಿ ಮತ್ತು ಮಾಂಸಾಹಾರಿ ಗುರುತು ಹಾಕುವುದು ಕಡ್ಡಾಯವಾಗಿದೆ. ಗ್ರಾಹಕರಿಗೆ ಉತ್ಪನ್ನಗಳ ನಿಖರ ಮಾಹಿತಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಾನೂನು ಮಾಪನಶಾಸ್ತ್ರ ನಿಯಮಗಳು, 2011ಕ್ಕೆ ತಿದ್ದುಪಡಿ ತಂದಿದ್ದು, ಈ ನಿಯಮ ಸೋಮವಾರದಿಂದಲೇ ಜಾರಿಗೆ ಬಂದಿದೆ.
ಹೊಸ ನಿಯಮಗಳ ಪ್ರಮುಖ ಅಂಶಗಳು:ಹಸಿರು ಮತ್ತು ಕೆಂಪು/ಕಂದು ಗುರುತು: ಸಸ್ಯಾಹಾರಿ ಮೂಲದ ಅಂಶಗಳನ್ನು ಹೊಂದಿರುವ ಉತ್ಪನ್ನಗಳ ಪ್ಯಾಕೇಜ್ ಮೇಲೆ ಹಸಿರು ಬಣ್ಣದ ಚುಕ್ಕೆ (Green Dot) ಇರಬೇಕು. ಮಾಂಸಾಹಾರಿ ಮೂಲದ ಅಂಶಗಳನ್ನು ಹೊಂದಿದ್ದರೆ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆ (Red/Brown Dot) ಇರಬೇಕಾಗುತ್ತದೆ.
ಹೊಸ ನಿಯಮದಂತೆ, ಸಸ್ಯಾಹಾರಿ ಪದಾರ್ಥಗಳಿಗೆ ಹಸಿರು ಚುಕ್ಕೆ ಮತ್ತು ಪ್ರಾಣಿ ಅಥವಾ ಮಾಂಸಾಹಾರಿ ಅಂಶಗಳುಳ್ಳ ಉತ್ಪನ್ನಗಳಿಗೆ ಕೆಂಪು ಅಥವಾ ಕಂದು ಚುಕ್ಕೆ ಇರಲೇಬೇಕು. ಅಂಗಡಿಗಳಲ್ಲಿ ಶಾಪಿಂಗ್ ಮಾಡುವಾಗ ಗ್ರಾಹಕರು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ, ಪ್ಯಾಕೆಟ್‌ನ ಮುಂಭಾಗದ ಪ್ರಮುಖ ಪ್ರದರ್ಶನ ಫಲಕದ ಮೇಲ್ಭಾಗದಲ್ಲೇ ಈ ಚಿಹ್ನೆಯನ್ನು ಕಡ್ಡಾಯವಾಗಿ ಮುದ್ರಿಸಬೇಕೆಂದು ಸರ್ಕಾರ ಆದೇಶಿಸಿದೆ.
ಈ ಆದೇಶವು ಮೈ ಸೋಪುಗಳು, ಶಾಂಪೂ, ಬಾಡಿ ವಾಶ್, ಟೂತ್‌ಪೇಸ್ಟ್, ಫೇಸ್ ಕ್ರೀಮ್, ಲೋಷನ್ ಹಾಗೂ ಲಿಪ್‌ಸ್ಟಿಕ್ ಸೇರಿದಂತೆ ಎಲ್ಲಾ ಕಾಸ್ಮೆಟಿಕ್ಸ್ ಮತ್ತು ಟಾಯ್ಲೆಟ್ರಿ ಉತ್ಪನ್ನಗಳಿಗೆ ಸಮಗ್ರವಾಗಿ ಅನ್ವಯಿಸುತ್ತದೆ. ನಿಯಮ ಉಲ್ಲಂಘಿಸಿ ತಪ್ಪು ಮಾಹಿತಿ ನೀಡುವ ಅಥವಾ ಲೇಬಲ್ ಮರೆಮಾಚುವ ಉತ್ಪಾದಕರಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆ ಹಾಗೂ ಲೀಗಲ್ ಮೆಟ್ರಾಲಜಿ ಕಾಯ್ದೆಯಡಿ ಕಠಿಣ ದಂಡ ಮತ್ತು ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ತಿದ್ದುಪಡಿಯಿಂದಾಗಿ ಮಾರುಕಟ್ಟೆಯಲ್ಲಿ ಕಂಪನಿಗಳು ತಮ್ಮ ಉತ್ಪನ್ನಗಳ ನೈಜ ತಯಾರಿಕಾ ಮೂಲವನ್ನು ಪಾರದರ್ಶಕವಾಗಿ ಬಹಿರಂಗಪಡಿಸುವುದು ಅನಿವಾರ್ಯವಾಗಿದ್ದು, ಸಸ್ಯಜನ್ಯ ಉತ್ಪನ್ನಗಳ ಬೇಡಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.
ಗ್ರಾಹಕರು ಅಂಗಡಿಗಳಲ್ಲಿ ಖರೀದಿಸುವಾಗ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ, ಪ್ಯಾಕೆಟ್‌ನ ಮುಂಭಾಗದ ಪ್ರಮುಖ ಪ್ರದರ್ಶನ ಫಲಕದ ಮೇಲ್ಭಾಗದಲ್ಲೇ ಈ ಗುರುತು ಮುದ್ರಿಸಿರಬೇಕು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.





