ಬೆಂಗಳೂರು: ರಾಜ್ಯದ 178 ತಾಲೂಕುಗಳಲ್ಲಿ ಮಳೆಯ ಕೊರತೆ ಆಗಿದೆ 60 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಆಗಿದೆ ಎ೦ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ ಖಂಡ್ರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ ಖಂಡ್ರೆ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೀಗಾಗಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲು ಮತ್ತು ಯಾರೂ ಗುಳೆ ಹೋಗದಂತೆ ಗ್ರಾಮಗಳಲ್ಲೇ ಉದ್ಯೋಗ ನೀಡಲು ಸೂಚಿಸಲಾಗಿದೆ. ಯಾವುದೇ ಗ್ರಾಮದಲ್ಲಿ, ತಾಂಡಾದಲ್ಲಿ ನೀರು ಪೂರೈಸುವ ಕೊಳವೆ ಬಾವಿಗಳು ಬತ್ತಿ ಹೋಗಿದ್ದರೆ, ಖಾಸಗಿ ಬೋರ್‌ವೆಲ್, ಬಾವಿ ಬಾಡಿಗೆಗೆ ಪಡೆದು ಟ್ಯಾಂಕರ್ ಮೂಲಕ ನೀರು ಪೂರೈಸಲು ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಕೊಳವೆ ಬಾವಿ ಕೊರೆಯಲು ಅನುಮತಿಸಲಾಗಿದೆ ಎಂದು ತಿಳಿಸಿದರು.
. ಬ್ಯಾಂಕ್ ಸಾಲ ಬಾಕಿ ಇರುವ ರೈತರು ಮತ್ತು ಸಾಲವನ್ನ ಒಂದು ಬಾರಿ ಇತ್ಯರ್ಥ ಮಾಡಿಕೊಂಡಿರುವ ರೈತರು ಸಮುದಾಯ ಸೇವಾ ಕೇಂದ್ರದಲ್ಲಿ ಬೆಳೆ ವಿಮೆ ಕಂತು ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರೈತರು ತಾವು ಬಿತ್ತನೆ ಮಾಡಿರುವ ಬೆಳೆಗೆ ವಿಮೆ ಮಾಡಿಸಬೇಕು. ಇನ್ನೂ 3-4 ತಿಂಗಳು ಮಳೆಯೇ ಬಾರದಿದ್ದರೆ ಮುಂದಿನ ವರ್ಷ ಮುಂಗಾರು ಆರಂಭವಾಗುವವರೆಗೆ ನೀರಿನ ಕೊರತೆ ಆಗದಂತೆ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಕ್ರಮಗಳನ್ನು ಕೈಗೊಳ್ಳಲಾಗುವುದು, ಇದಕ್ಕೂ ಅಧ್ಯಯನ, ಸಿದ್ಧತೆ ನಡೆದಿದೆ ಎಂದರು.
ಕೇಂದ್ರ ಸರ್ಕಾರ ನರೇಗಾದಡಿ ನೀಡುತ್ತಿದ್ದ 90:10 ಅನುಪಾತ ಬದಲಿಸಿ 60:40 ಅನುಪಾತ ಮಾಡಿದ್ದು, ರಾಜ್ಯದ ಮೇಲೆ ಹೊರೆಯಾಗಿದ್ದರೂ ಕೂಡ ಬಡವರ, ಗ್ರಾಮೀಣರ, ದಲಿತರ, ವಂಚಿತರ ಹಿತದೃಷ್ಟಿಯಿಂದ ಜುಲೈ 1 ರಿಂದ ಯೋಜನೆ ಜಾರಿಗೆ ತಂದಿದ್ದು, ನಿನ್ನೆಯವರೆಗೆ 5 ಲಕ್ಷ ಮಾನವದಿನ ಉದ್ಯೋಗ ಸೃಷ್ಟಿಸಲಾಗಿದೆ. ರಾಜ್ಯದ ಗ್ರಾಮ ಪಂಚಾಯತಿಗೆ ಉದ್ಯೋಗ ಕೇಳಿ ಬಂದವರಿಗೆಲ್ಲಾ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.
ವಿಬಿ ಜಿ ರಾಮ್ ಜಿ ಅಡಿ 318 ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿದ್ದು, ಹೊಸದಾಗಿ ಹೆಚ್ಚುವರಿ ಕ್ರಿಯಾಯೋಜನೆ ಸಲ್ಲಿಸಲು ಪೋರ್ಟಲ್ ನಲ್ಲಿ ಅವಕಾಶವಿದೆ. ಜೊತೆಗೆ ಶಾಲಾ ಕೊಠಡಿ, ಆರೋಗ್ಯ ಕೇಂದ್ರ, ಸರ್ಕಾರಿ ಕಟ್ಟಡಗಳ ದುರಸ್ತಿ, ನಿರ್ವಹಣೆ, ಕೃಷಿ ಹೊಂಡ, ವಿತರಣಾ ಕಾಲುವೆ, ಹನಿ ನೀರಾವರಿ, ಕಿರು ಅರಣ್ಯದಂತಹ ಯೋಜನೆಗಳನ್ನೂ ಕೈಗೊಳ್ಳಲು ಅವಕಾಶವಿದ್ದು, ಗ್ರಾಮೀಣ ಜನರು ಇದರ ಸದುಪಯೋಗ ಪಡೆಯಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಆಗಬಾರದು ಎಂದು 117 ಕೋಟಿ ರೂ. ಮುಂಗಡವಾಗಿ ಬಿಡುಗಡೆ ಮಾಡಿದ್ದೇವೆ. 95 ಕೋಟಿ ರೂ. ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇನ್ನೂ 25 ಕೋಟಿ ರೂ. ವಿವಿಧ ಜಿಲ್ಲೆಗಳಲ್ಲಿ ಇದೆ ಎಂದು ಸ್ಪಷ್ಟಪಡಿಸಿದರು.





