ಬೆಂಗಳೂರು: ಚುನಾವಣಾ ಆಯೋಗದ ಅಧಿಕಾರಿಗಳೇ, ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಲು ನಮ್ಮನ್ನು ಅಧಿಕಾರಿಗಳ ಹಿಂದೆ ಅಲೆಯುವಂತೆ ಮಾಡುತ್ತಿದ್ದೀರಿ ಎಂದು ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅವರು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ,ಚುನಾವಣಾ ಆಯೋಗ ಇಡೀ ದೇಶದ ಜನರಿಂದ ಪರೀಕ್ಷೆ ಬರೆಸುತ್ತಿದೆಯೇ? ರಾಜ್ಯದಲ್ಲಿರುವ 5.54 ಕೋಟಿ ಮತದಾರರ ಮಾಹಿತಿಯನ್ನು ಒಂದು ತಿಂಗಳಿನಲ್ಲಿ ಪಡೆದುಕೊಳ್ಳಲು ಸಾಧ್ಯವೇ? ಯಾಕೆ ಬಿಎಲ್ಒಗಳ ಮೇಲೆ ಒತ್ತಡ ಹೇರುತ್ತೀರಿ? ಎಂದು ಪ್ರಶ್ನಿಸಿದರು.
ಕೇವಲ ಬಾಡಿಗೆ ಮನೆ ಬದಲಿಸಿದ ಕಾರಣಕ್ಕೆ ಅವರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡುವುದು ಖಂಡನೀಯ ಸ್ಥಳಾಂತರಗೊಂಡವರಿಗೆ ವಿಳಾಸ ಬದಲಾವಣೆ ಮಾಡಲು ಫಾರಂ ನಂ. 8 ಕೊಡಬೇಕು. ಅದನ್ನು ಬಿಟ್ಟು ಹೆಸರನ್ನೇ ಡಿಲೀಟ್ ಮಾಡಿ ಮತ್ತೆ ಹೊಸದಾಗಿ ಫಾರಂ ನಂ. 6 ತುಂಬಲು ಹೇಳುವುದು ಯಾವ ನ್ಯಾಯ? ಜನರು ಬಾಡಿಗೆ ಮನೆ ಬದಲಾಯಿಸುವುದು ಅಥವಾ ಹೆಣ್ಣುಮಕ್ಕಳು ಮದುವೆಯಾಗಿ ತವರು ಮನೆಗೆ ಹೋಗುವುದು ಅಪರಾಧವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯ ಕ್ರಮವನ್ನು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಮುಂದಿನ ಎರಡು ವರ್ಷ ಯಾವುದೇ ಚುನಾವಣೆ ಇಲ್ಲದಿದ್ದರೂ ಇಷ್ಟೊಂದು ಅವಸರದಲ್ಲಿ ಪರಿಷ್ಕರಣೆ ಮಾಡುತ್ತಿರುವುದು ಏಕೆ? ಇದರ ಹಿಂದೆ ಎನ್ಆರ್ಸಿ ಹುನ್ನಾರ ಇದೆಯೇ? ದಲಿತರು, ಹಿಂದುಳಿದವರು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳನ್ನು ಗುರಿಯಾಗಿಸಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ನೋಟ್ ಬ್ಯಾನ್ ಮತ್ತು ಕೊರೋನಾ ಸಮಯದಲ್ಲಿ ಜನ ಕ್ಯೂ ನಿಂತು ಪರದಾಡಿದ್ದು ಸಾಕು, ಈಗ SIR ಹೆಸರಿನಲ್ಲಿ ಜನರಿಗೆ ಮತ್ತೆ ನೋವು ಕೊಡಬೇಡಿ. ಹಿಂದೆ ರಾಜಕೀಯ ನಾಯಕರು ವೋಟ್ ಹಾಕಿ ಎಂದು ಜನರ ಬಳಿ ಬೇಡಿಕೊಳ್ಳುತ್ತಿದ್ದರು. ಆದರೆ ಇಂದು ಮತದಾರ ತನ್ನ ವೋಟು ಉಳಿಸಿಕೊಡಿ ಎಂದು ಅಧಿಕಾರಿಗಳ ಮುಂದೆ ಬೇಡುವ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ನಡೆಯನ್ನು ಮತದಾನದಿಂದ ‘ಜನರನ್ನು ಹೊರಗಿಡುವ ಕುತಂತ್ರ’ ಎಂದು ವಾಗ್ದಾಳಿ ನಡೆಸಿದ್ದಾರೆ.





