ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ, ಶಿಕ್ಷಣ ಸುಧಾರಣೆ ಹಾಗೂ ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್ಗೆ ಕೊಂಡೊಯ್ಯುವ ಬೃಹತ್ ಗುರಿಯೊಂದಿಗೆ ನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.
ಉದ್ಯೋಗ ಸೃಷ್ಟಿ ಮತ್ತು ಯುವಜನತೆಗೆ ಪ್ರೋತ್ಸಾಹ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿರುವ ಸರ್ಕಾರ, ಮುಂದಿನ ಆರು ತಿಂಗಳೊಳಗೆ 72,000 ಪ್ರಮುಖ ಖಾಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಿದೆ. ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’ ಯೋಜನೆಯಡಿ ಮುಂದಿನ ಎರಡು ವರ್ಷಗಳಲ್ಲಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದ್ದು, ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ‘ಉದ್ಯೋಗ ನಿಧಿ’ ಅಡಿಯಲ್ಲಿ ಪ್ರತಿ ಹೊಸ ಕೆಲಸಕ್ಕೆ ಮಾಸಿಕ ₹2,500 ಪ್ರೋತ್ಸಾಹಧನ ನೀಡಲಾಗುತ್ತದೆ. ಇದರ ಜೊತೆಗೆ ಖಾಸಗಿ ವಲಯದಲ್ಲಿ ಉದ್ಯೋಗ ಕಲ್ಪಿಸಲು ‘ಯುವ ಉದ್ಯೋಗ ಸೇತು’ ಜಾರಿಗೆ ತರಲಾಗುವುದು.
ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (AI) ಕ್ರಾಂತಿ ತಂತ್ರಜ್ಞಾನ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ AI ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಹಾಗೂ ರಾಜ್ಯದ ವಿವಿಧೆಡೆ AI ಹಬ್ಗಳು ತಲೆಯೆತ್ತಲಿವೆ. ಶಾಲಾ ಹಂತದಲ್ಲೇ ತಂತ್ರಜ್ಞಾನ ಕಲಿಕೆಗೆ ಒತ್ತು ನೀಡಲು 6ನೇ ತರಗತಿಯಿಂದಲೇ ‘ಎಐ ಅಕ್ಷರ ಅಭಿಯಾನ’ ಮತ್ತು ‘ಕೋಡಿಂಗ್ ಗುರುಕುಲ’ದ ಮೂಲಕ ಎಐ ಶಿಕ್ಷಣ ಪರಿಚಯಿಸಲಾಗುವುದು. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಹಿತದೃಷ್ಟಿಯಿಂದ ‘ಸಹಾಯ ಹಸ್ತ’ ಯೋಜನೆಯಡಿ ವೃತ್ತಿಪರ ಕೋರ್ಸ್ಗಳಲ್ಲಿ ಶೇ. 7.5 ರಷ್ಟು ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ.
ಅನ್ನದಾತರಿಗೆ ತಂತ್ರಜ್ಞಾನ ಮತ್ತು ಸಹಾಯಧನ ಆಸರೆ ಕೃಷಿ ಕ್ಷೇತ್ರದ ಉನ್ನತೀಕರಣಕ್ಕಾಗಿ ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆಯಡಿ ಡ್ರೋನ್ ಮತ್ತು ಉಪಗ್ರಹ ತಂತ್ರಜ್ಞಾನ ಬಳಸಿ ನೈಜ ಸಮಯದ ಬೆಳೆ ಸಮೀಕ್ಷೆ ನಡೆಸಲಾಗುವುದು. 3 ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ನೆರವಿಗಾಗಿ ‘ರೈತ ಮಿತ್ರ’ ಕಾರ್ಯಕ್ರಮವನ್ನು ಘೋಷಿಸಲಾಗಿದ್ದು, ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದ ಮೇಲೆ ಶೇ. 50 ರಷ್ಟು ಸಹಾಯಧನ ಒದಗಿಸಲಾಗುವುದು.
ಬೆಂಗಳೂರು ಅಭಿವೃದ್ಧಿ ಹಾಗೂ ಮೂಲಸೌಕರ್ಯ ವಿಸ್ತರಣೆ ದೊಡ್ಡಬಳ್ಳಾಪುರದಲ್ಲಿ ₹20,000 ಕೋಟಿ ಹೂಡಿಕೆಯೊಂದಿಗೆ ‘ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್’ ನಿರ್ಮಾಣ ಮಾಡಿ ಸುಮಾರು 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ 5 ಜಾಗತಿಕ ತಂತ್ರಜ್ಞಾನ ಕೇಂದ್ರಗಳು ಸ್ಥಾಪನೆಯಾಗಲಿದ್ದು, 117 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ) ಯೋಜನೆಗೆ ಚಾಲನೆ ನೀಡಲಾಗಿದೆ. ನಗರದ ಕಾನೂನು ಸುವ್ಯವಸ್ಥೆಗಾಗಿ 5 ಹೊಸ ಕಮಿಷನರೇಟ್ಗಳು, ರೌಡಿ ನಿಗ್ರಹ ಪಡೆ ರಚನೆ ಹಾಗೂ ಪರಿಸರ ಸಂರಕ್ಷಣೆಗಾಗಿ 5 ಬೃಹತ್ ಟ್ರೀ ಪಾರ್ಕ್ ಮತ್ತು 7 ಪ್ರಮುಖ ಕೆರೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು.
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಭದ್ರತೆ ಆಸ್ತಿ ಮಾಲೀಕತ್ವದ ಗೊಂದಲಗಳಿಗೆ ತೆರೆ ಎಳೆಯಲು ಇ-ಖಾತಾ ವ್ಯವಸ್ಥೆ ಮೂಲಕ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ‘ಭೂ-ಗ್ಯಾರಂಟಿ’ಯನ್ನು 6ನೇ ಗ್ಯಾರಂಟಿಯಾಗಿ ಜಾರಿಗೆ ತರಲಾಗಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ ಪರಿಹರಿಸಲು ‘ಪ್ರಜಾಸೇವೆ ಇಲಾಖೆ’ ಹಾಗೂ ವಾಹನ ಮಾಲೀಕರಿಗೆ ಸುಲಭ ವಿಮೆ ಒದಗಿಸಲು ‘ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ’ ಸ್ಥಾಪನೆಯಾಗಲಿದೆ. ಜತೆಗೆ ಕಾವೇರಿ ಕೊಳ್ಳದ ಹಿತದೃಷ್ಟಿಯಿಂದ ಮೇಕೆದಾಟು ಯೋಜನೆ ಆರಂಭಿಸುವ ಸಂಕಲ್ಪ ಮಾಡಲಾಗಿದ್ದು, ₹16,000 ಕೋಟಿ ಮೊತ್ತದ 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ.





