ಜೆಡಿಎಸ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ಸಮೃದ್ಧ ಭಾರತ ನಿರ್ಮಾಣಕ್ಕೆ ಹೆಚ್.ಎಂ.ರಮೇಶ್ ಗೌಡ ಕರೆ

ಬೆಂಗಳೂರು: ಸ್ವಾತಂತ್ರ್ಯ ಬಂದು ಎಂಟು ದಶಕಗಳು ಆಗಿರುವ ಈ ಸುಸಂದರ್ಭದಲ್ಲಿ ನಾವೆಲ್ಲರೂ ಭ್ರಷ್ಟಾಚಾರ ಮುಕ್ತ, ಸ್ವಚ್ಛ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಜಾತಿ, ಮತ, ಧರ್ಮದ ಭೇದ ಮರೆತು ಒಂದಾಗಬೇಕಿದೆ. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಅತ್ಯಂತ ಮುಖ್ಯವಾಗಿದೆ ಎಂದು ಜೆಡಿಎಸ್ ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರು ಹೇಳಿದರು.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಭಾಷಣ ಮಾಡಿದ ಅವರು; ಕಳೆದ ಎಂಟು ದಶಕಗಳಲ್ಲಿ ನಮ್ಮ ಭಾರತ ದೇಶವು ಜಾಗತಿಕ ಮಟ್ಟದಲ್ಲಿ ಸಾಧಿಸಿರುವ ಪ್ರಗತಿ ಅಪಾರವಾದದ್ದು. ಕೃಷಿ, ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಆರ್ಥಿಕತೆಯಲ್ಲಿ ನಾವು ವಿಶ್ವವೇ ಬೆರಗಾಗುವಂತೆ ಬೆಳೆದಿದ್ದೇವೆ. ಇಂದು ನಾವು ಕೇವಲ ಸ್ವಾವಲಂಬಿಗಳಲ್ಲ, ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ ಎಂದರು.

ದೇವೇಗೌಡರ ಸ್ಮರಣೆ:

ನಾವು ಈ ಸಂದರ್ಭದಲ್ಲಿ ಅತ್ಯಂತ ಮುಖ್ಯವಾದ ಐತಿಹಾಸಿಕ ಘಟ್ಟ ಒಂದನ್ನು ಸ್ಮರಿಸಬೇಕಿದೆ. ಭಾರತದ 11ನೇ ಪ್ರಧಾನ ಮಂತ್ರಿಯಾಗಿದ್ದ ಹೆಚ್.ಡಿ.ದೇವೇಗೌಡರು 15 ಆಗಸ್ಟ್ 1996ರಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲಿಂದ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಿದರು. ನಮ್ಮೆಲ್ಲರ ಅಚ್ಚುಮೆಚ್ಚಿನ ಮಣ್ಣಿನಮಗ ಭಾರತದ ಸ್ವಾತಂತ್ರ್ಯದ 50ನೇ ವರ್ಷದ ಆಚರಣೆಯ (ಸುವರ್ಣ ಮಹೋತ್ಸವ) ಆರಂಭದ ಸಂದರ್ಭದಲ್ಲೇ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ್ದು ನಾವೆಲ್ಲರೂ ಹೆಮ್ಮೆಪಡುವಂತಹ ಸಂಗತಿಯಾಗಿದೆ ಎಂದು ರಮೇಶ್ ಗೌಡರು ಹೇಳಿದರು.

ಅಂದಿನ ತಮ್ಮ ಭಾಷಣದಲ್ಲಿ ದೇವೇಗೌಡರು ತಾವು ಒಬ್ಬ ಸಾಮಾನ್ಯ ರೈತನ ಕುಟುಂಬದಿಂದ ಬಂದಿರುವುದನ್ನು ಅತ್ಯಂತ ಹೆಮ್ಮೆಯಿಂದ ಸ್ಮರಿಸಿಕೊಂಡರು. ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿಯಿಂದಾಗಿ ಮಾತ್ರ ಒಬ್ಬ ಹಳ್ಳಿಯ ರೈತನ ಮಗ ದೇಶದ ಅತ್ಯುನ್ನತ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಯಿತು ಎಂದು ಅವರು ಪ್ರಜಾಪ್ರಭುತ್ವದ ಮಹತ್ವವನ್ನು ಈ ರಾಷ್ಟ್ರಕ್ಕೆ ಮನದಟ್ಟು ಮಾಡಿಕೊಟ್ಟರು. ಇಂದಿಗೆ ಸರಿಯಾಗಿ 30 ವರ್ಷಗಳ ಹಿಂದೆ ಮಾನ್ಯ ದೇವೇಗೌಡರು ಕೆಂಪುಕೋಟೆಯ ಮೇಲೆ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸಿದ ಕ್ಷಣವನ್ನು ನಾವೆಲ್ಲರೂ ಹೆಮ್ಮೆಯಿಂದ ಸ್ಮರಿಸೋಣ ಎಂದರು ಅವರು.

80ನೇ ಸ್ವಾತಂತ್ರ್ಯ ದಿನಾಚರಣೆ ಸುಸಂದರ್ಭದಲ್ಲಿ ಕೆಂಪುಕೋಟೆಯ ಮೇಲೆ ರಾಷ್ಟ್ರ ಧ್ವಜಾರೋಹಣವನ್ನು ನರೇಂದ್ರ ಮೋದಿಯವರು ನೆರವೇರಿಸುತ್ತಿದ್ದಾರೆ. ಆ ವೇದಿಕೆ ಮೇಲೆ ನಮ್ಮೆಲ್ಲರ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಬೃಹತ್ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಸಾಕ್ಷಿಯಾಗಿರುವುದು ಇತಿಹಾಸದಲ್ಲಿ ದಾಖಲಾಗುತ್ತಿರುವ ಮಹತ್ವದ ವಿಷಯವಾಗಿದೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಎಂ.ಕೃಷ್ಣಾರೆಡ್ಡಿ ಅವರು ಮಾತನಾಡಿದರು.

ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ಶಾಸಕ ಟಿ.ಎ.ಶರವಣ, ಮಾಜಿ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ, ಎಂ.ಎಸ್. ನಾರಾಯಣರಾವ್, ಗ್ರೇಟರ್ ಬೆಂಗಳೂರು ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್, ಜಿಬಿಎ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಆರ್.ಪ್ರಕಾಶ್, ಬೆಂಗಳೂರು ಪಶ್ಚಿಮ ಜಿಲ್ಲಾ ಅಧ್ಯಕ್ಷ ಟಿ.ತಿಮ್ಮೇಗೌಡ, ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ನಟರಾಜ್ ಗಂಗಾಧರ್, ಗ್ರೇಟರ್ ಬೆಂಗಳೂರು ಕಾರ್ಯಧ್ಯಕ್ಷ ಟಿ.ಆರ್. ತುಳಸಿರಾಮ್ ಮುಂತಾದವರು ಭಾಗಿಯಾಗಿದ್ದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others