ಟ್ರಂಪ್ ಜಂಬ ಕೊಚ್ಚಿಕೊಳ್ಳುವುದನ್ನು ಬಿಟ್ಟು, ನಿಮ್ಮ ಭದ್ರತೆಯ ಬಗ್ಗೆ ಗಮನಹರಿಸಿ : ಟ್ರಂಪ್‌ಗೆ ಇರಾನ್ ತಿರುಗೇಟು

ಟೆಹರಾನ್‌: ಎಲ್ಲರಿಗೂ ಧಮ್ಕಿ ಹಾಕುವ ದೊಡ್ಡಣ್ಣನಿಗೆ ಇವತ್ತು ಇರಾನ್‌ ತಿರುಗೇಟು ಕೊಟ್ಟಿದೆ. ಹಾರ್ಮುಜ್ ಜಲಸಂಧಿ ಕುರಿತು ನಿರಂತರವಾಗಿ ಬೆದರಿಕೆ ಹಾಕುವ ಬದಲು ಅಮೆರಿಕದ ಅಧ್ಯಕ್ಷ ಟ್ರಂಪ್ ಮೊದಲು ತಮ್ಮ ಸ್ವಂತ ಭದ್ರತೆಯ ಬಗ್ಗೆ ಗಮನಹರಿಸಲಿ ಎಂದು ಇರಾನ್‌ನ ಹಿರಿಯ ಸಂಸದರೊಬ್ಬರು ಟಾಂಗ್‌ ಕೊಟ್ಟಿದ್ದಾರೆ.

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜೀಜಿ ಈ ವಿಷಯ ಕುರಿತು ಎಕ್ಸ್ ಖಾತೆಯ ಮೂಲಕ ವಾಗ್ದಾಳಿ ನಡೆಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ರಾಜಕೀಯ ರ‍್ಯಾಲಿಯೊಂದರಲ್ಲಿ ಮಾತನಾಡಿದ್ದ ಟ್ರಂಪ್, “ಶೀಘ್ರದಲ್ಲೇ ನಾನು ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಭೂಪ್ರದೇಶ ಎಂದು ಘೋಷಿಸಲಿದ್ದೇನೆ, ಇದು ಸತ್ಯ,” ಎಂದು ಹೇಳಿಕೆ ನೀಡಿದ್ದರು.

ಅಂಕಾರಾದಲ್ಲಿ ನಡೆದ ನ್ಯಾಟೋ ಶೃಂಗಸಭೆಯಿಂದ ನಿರ್ಗಮಿಸುವಾಗ ಟ್ರಂಪ್ ರಹಸ್ಯವಾಗಿ ಸಣ್ಣ ಮಿಲಿಟರಿ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದರು. ಆದರೆ, ಪತ್ರಕರ್ತರು ಮತ್ತು ಶ್ವೇತಭವನದ ಕೆಲವು ಸಿಬ್ಬಂದಿಗೆ ಅವರು ಏರ್‌ಫೋರ್ಸ್ ಒನ್‌ನಲ್ಲೇ ಇದ್ದಾರೆ ಎಂದು ನಂಬಿಸಲಾಗಿತ್ತು.

ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿರುವ ಇರಾನ್ ಉಪ ವಿದೇಶಾಂಗ ಸಚಿವ ಕಾಜೆಮ್ ಗರಿಬಾಬಾದಿ, ಹಾರ್ಮುಜ್ ಜಲಸಂಧಿಯು ಇರಾನ್‌ಗೆ ಸೇರಿತ್ತು, ಈಗಲೂ ಇರಾನ್‌ಗೆ ಸೇರಿದೆ ಮತ್ತು ಮುಂದೆಯೂ ಇರಾನ್‌ನ ಭಾಗವಾಗಿಯೇ ಉಳಿಯಲಿದೆ. ಈ ಜಲಸಂಧಿಯನ್ನು ಮುಚ್ಚುವುದು ಅಥವಾ ತೆರೆಯುವುದು ಕೇವಲ ಇರಾನ್‌ನ ಆದೇಶದ ಮೇರೆಗೆ ಮಾತ್ರ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷರು ಆಹಾರ ಸರಬರಾಜು ಟ್ರಕ್‌ನಲ್ಲಿ ಅಡಗಿಕೊಳ್ಳುವ ಪರಿಸ್ಥಿತಿ ಬರುವ ಮುನ್ನ, ಹಾರ್ಮುಜ್ ಜಲಸಂಧಿಯ ಬಗ್ಗೆ ಅಂತ್ಯವಿಲ್ಲದ ಜಂಬ ಕೊಚ್ಚಿಕೊಳ್ಳುವುದನ್ನು ಬಿಟ್ಟು ತಮ್ಮ ಭದ್ರತೆಯ ಬಗ್ಗೆ ಚಿಂತಿಸುವುದು ಒಳಿತು ಎಂದು ಅಜೀಜಿ ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others