ಗ್ಯಾರಂಟಿ ಗೋಲ್‌ಮಾಲ್: ಕರ್ನಾಟಕದ ಅಂಕಿಅಂಶಗಳು ತಾಳೆಯಾಗುತ್ತಿಲ್ಲ : ಆರ್ ಅಶೋಕ್ ಕೈ ಸರ್ಕಾರದ ವಿರುದ್ಧ ಕಿಡಿ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ನೀಡಿದ ಅಂಕಿಅಂಶಗಳು, ಅವರದೇ ಸರ್ಕಾರದ ಅಧಿಕೃತ ದಾಖಲೆಗಳಿಗೆ ವಿರುದ್ಧವಾಗಿವೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಗೋಲ್‌ಮಾಲ್: ಕರ್ನಾಟಕದ ಅಂಕಿಅಂಶಗಳು ತಾಳೆಯಾಗುತ್ತಿಲ್ಲ. ಸ್ವಾತಂತ್ರ್ಯ ದಿನದಂದೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮದೇ ಸರ್ಕಾರದ ಅಧಿಕೃತ ದಾಖಲೆಗಳಿಗೆ ವಿರುದ್ಧವಾದ ಅಂಕಿಅಂಶಗಳನ್ನು ನೀಡಿ ಕರ್ನಾಟಕದ ಜನರನ್ನು ದಾರಿ ತಪ್ಪಿಸಲು ಮುಂದಾಗಿದ್ದಾರೆ ಎಂದರು.

ಇದು ಇನ್ನು ರಾಜಕೀಯ ವಾಕ್ಚಾತುರ್ಯದ ಪ್ರಶ್ನೆಯಲ್ಲ. ಇದು ಸಾರ್ವಜನಿಕ ಹೊಣೆಗಾರಿಕೆ ಮತ್ತು ತೆರಿಗೆದಾರರ ಹಣಕ್ಕೆ ಸಂಬಂಧಿಸಿದ ಮೂಲಭೂತ ಪ್ರಶ್ನೆಯಾಗಿದೆ, ಎಂದು ಅಶೋಕ ಹೇಳಿದ್ದಾರೆ.

ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ. ನೆರವು ನೀಡುವ ಗೃಹಲಕ್ಷ್ಮಿ ಯೋಜನೆ ಕುರಿತು ಅಶೋಕ ಅವರು, ಕರ್ನಾಟಕ ಸರ್ಕಾರ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧಿಕೃತ ಮಾಹಿತಿಯ ಪ್ರಕಾರ ಫಲಾನುಭವಿಗಳ ಸಂಖ್ಯೆ 1.24 ಕೋಟಿ (1,24,48,000) ಎಂದು ತಿಳಿಸಿದ್ದಾರೆ.

2026ರ ಮೇ 25ರಂದು ಮುಖ್ಯಮಂತ್ರಿಗಳ ಕಚೇರಿಯೂ ಇದೇ ಅಂಕಿಅಂಶವನ್ನು ಉಲ್ಲೇಖಿಸಿತ್ತು. ಆದರೆ ನಿನ್ನೆ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಡಿ ಕೆ ಶಿವಕುಮಾರ್ ಅವರು 1.28 ಕೋಟಿ ಫಲಾನುಭವಿಗಳಿದ್ದಾರೆ ಎಂದು ಹೇಳಿದ್ದಾರೆ ಎಂದು ಅಶೋಕ ಆರೋಪಿಸಿದ್ದಾರೆ.

ಹಾಗಾದರೆ ಈ ಹೆಚ್ಚುವರಿ 4 ಲಕ್ಷ ಫಲಾನುಭವಿಗಳು ಏಕಾಏಕಿ ಎಲ್ಲಿಂದ ಬಂದರು? ಅವರು ಯಾರು? ಈ ಹೆಚ್ಚುವರಿ ಹಣ ಪಾವತಿಗೆ ಅನುಮತಿ ನೀಡಿದವರು ಯಾರು? ಮುಖ್ಯವಾಗಿ, ಯಾರ ಖಾತೆಗಳಿಗೆ ಈ ಹಣ ಜಮೆಯಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಡಿ ಇದುವರೆಗೆ ಖರ್ಚು ಮಾಡಿರುವ ಪ್ರತಿಯೊಂದು ರೂಪಾಯಿ ಹಾಗೂ ಫಲಾನುಭವಿಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಸರ್ಕಾರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸ್ವಾತಂತ್ರ್ಯ ದಿನವು ಜನರ ಮುಂದೆ ಸತ್ಯವನ್ನು ಹೇಳುವ ದಿನವಾಗಿದ್ದು, ಅನುಕೂಲಕರ ಅಂಕಿಅಂಶಗಳನ್ನು ಸೃಷ್ಟಿಸುವ ದಿನವಲ್ಲ ಎಂದು ಹೇಳಿರುವ ಬಿಜೆಪಿ ನಾಯಕರು, ಮುಖ್ಯಮಂತ್ರಿ ಕರ್ನಾಟಕದ ಜನರಿಗೆ ವಿವರಣೆ ನೀಡಬೇಕಿದೆ ಎಂದು ಆರೋಪಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others