ಇತ್ತೀಚೆಗೆ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಹುಡುಗರೂ ಕೂಡ ನಿಂದನೆಯಲ್ಲಿ ತೊಡಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಕೇವಲ ಹುಡುಗಿಯರನ್ನು ಮಾತ್ರ ಗುರಿಯಾಗಿಸಿದರು ಎಂದು ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪುಣೆಯ ಎಸ್ಎಸ್ಪಿಎಂಎಸ್ ಮೈದಾನದಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಪಂಜರದೊಳಗೆ ಬಂಧಿಸಿಡಲು ಬಯಸುವ ಮನಸ್ಥಿತಿಯನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಹೊಂದಿವೆ ಎಂದು ಹೇಳಿದರು.
ದೊಡ್ಡ ಪರದೆ ಮೇಲೆ ಪ್ರದರ್ಶಿಸಲಾದ ಹಲವು ಸ್ಲೈಡ್ಗಳ ಮೂಲಕ, ಮಹಿಳೆಯರು ಎದುರಿಸುವ ಹಿಂಸೆಯ ಪರಿಣಾಮಗಳು, ಅವರಿಗೆ ಆಗುವ ಅವಮಾನ ಮತ್ತು ಸಮಯವನ್ನೇ ಅವರ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಬಗೆಯ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದರು.
ಈ ಅವಧಿಯಲ್ಲಿ, ಹಲವು ಮಹಿಳೆಯರು ಮುಖ್ಯವಾಗಿ ಕಾಲೇಜು ವಿದ್ಯಾರ್ಥಿನಿಯರು ವೇದಿಕೆಯನ್ನೇರಿ, ತಾವು ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಾಂಧಿಯವರೊಂದಿಗೆ ಮಾತನಾಡಿದರು.
ಭಾರತದಲ್ಲಿ ಪ್ರತಿವರ್ಷ 4.5 ಲಕ್ಷ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತವೆ. ಶೇ 80 ರಷ್ಟು ಮಹಿಳೆಯರು ಪ್ರತಿದಿನ ಕಿರುಕುಳ ಎದುರಿಸುತ್ತಾರೆ. ಶೇ 29ರಷ್ಟು ಮಹಿಳೆಯರು ದೈಹಿಕ ಹಿಂಸೆಗೆ ಒಳಗಾಗುತ್ತಾರೆ ಮತ್ತು ಶೇ 6ರಷ್ಟು ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಾರೆ ಎಂದು ತಿಳಿಸಿದರು.
ದೆಹಲಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ನಂತರ ಬಿಡುಗಡೆಯಾದ ವಿಡಿಯೋವೊಂದರ ಬಗ್ಗೆ ಅವರು ಪ್ರಸ್ತಾಪಿಸುತ್ತಿದ್ದರು; ಅದರಲ್ಲಿ ಪ್ರಧಾನಿ ಮೋದಿ, ಮಹಿಳೆಯರು ತಮ್ಮ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದು ಭಾರತಕ್ಕೆ ಒಂದು ‘ಸಾಂಸ್ಕೃತಿಕ ಆಘಾತ’ ಎಂದು ಹೇಳಿದ್ದರು ಮತ್ತು ಆ ಅವಮಾನಗಳನ್ನು ತಾವು ‘ಕ್ಷಮಿಸಿರುವುದಾಗಿ’ ತಿಳಿಸಿದ್ದರು.
ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳಬೇಕು. ಒಬ್ಬ ಮಹಿಳೆಗೆ ತಂದೆ, ಸಹೋದರ, ಪತಿ ಅಥವಾ ಮಗನೊಂದಿಗಿನ ಸಂಬಂಧಗಳಿರಬಹುದು. ಆದರೆ, ಅವಳು ಅವರ ಆಸ್ತಿಯಲ್ಲ — ಅವಳು ತನಗೆ ತಾನೇ ಸೇರಿರುವವಳು’ ಎಂದು ಹೇಳಿದರು.
ಮಗಳಾಗಿ, ಪತ್ನಿಯಾಗಿ ಅಥವಾ ತಾಯಿಯಾಗಿರುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಇದಷ್ಟೇ ನಿಮ್ಮ ಏಕೈಕ ಗುರುತಾಗಬಾರದು. ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಮಹಿಳೆಯರಿಗೆ ಅವರ ಹಕ್ಕುಗಳು ಮತ್ತು ಸವಲತ್ತುಗಳನ್ನು ನಿರಾಕರಿಸಲಾಗಿದೆ. ಮಹಿಳೆಯರು ಸ್ವತಂತ್ರವಾಗಿರಬಾರದು ಎಂದು ಮನುಸ್ಮೃತಿ ಹೇಳುತ್ತದೆ; ಆದರೆ ಮಹಿಳೆಯರಿಗೆ ಸ್ವಾತಂತ್ರ್ಯವನ್ನು ನೀಡಲೇಬೇಕು, ಏಕೆಂದರೆ ಅವರಲ್ಲಿ ಅಪಾರ ಶಕ್ತಿಯಿದೆ ಎಂದರು.
‘ಬಿಜೆಪಿ ಮತ್ತು ಆರ್ಎಸ್ಎಸ್ ಮಹಿಳೆಯರು ಹಾಗೂ ಬಾಲಕಿಯರು ಪಂಜರಗಳಲ್ಲಿ ಬಂಧಿಯಾಗಿರಬೇಕು ಎಂಬ ಮನಸ್ಥಿತಿಯನ್ನು ಹೊಂದಿವೆ. ಆದರೆ ನಮಗೆ ಅಂತಹ ಭಾರತ ಬೇಕಾಗಿಲ್ಲ. ಎಲ್ಲರನ್ನೂ ಗೌರವದಿಂದ ಕಾಣುವ ವ್ಯವಸ್ಥೆಯನ್ನು ನಾವು ಬಯಸುತ್ತೇವೆ. ಮಹಿಳೆಯರನ್ನು ದಮನಿಸುವ ಮನಸ್ಥಿತಿಯು ಮನುಸ್ಮೃತಿಯಿಂದ ಬಂದಿದೆ ಮತ್ತು ಇಂದು ನಮ್ಮ ಹೋರಾಟವು ಇದೇ ಮನಸ್ಥಿತಿಯ ವಿರುದ್ಧವಾಗಿದೆ’ ಎಂದು ಗಾಂಧಿ ಹೇಳಿದರು.
ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ದೇಶದಲ್ಲಿ ಮಹಿಳೆಯರು ಎದುರಿಸುತ್ತಿರುವ ವಿವಿಧ ಬಗೆಯ ಹಿಂಸಾಚಾರಗಳ ಕುರಿತು ಮಾತನಾಡಿದರು. ‘ಯುವತಿಯಾಗಿರುವಾಗ ತಂದೆಯ ಅಧೀನದಲ್ಲಿಯೂ, ಮದುವೆಯಾದ ನಂತರ ಪತಿಯ ಅಧೀನದಲ್ಲಿಯೂ ಮತ್ತು ತರುವಾಯ ಮಗನ ಅಧೀನದಲ್ಲಿಯೂ ಮಹಿಳೆ ಇರಬೇಕು’ ಎಂದು ಹೇಳುವ ಮನುಸ್ಮೃತಿಯ ಉಲ್ಲೇಖದೊಂದಿಗೆ ಅವರು ತಮ್ಮ ಭಾಷಣ ಪ್ರಾರಂಭಿಸಿದರು.
ಹೆಚ್ಚಾಗಿ ರಾಜಕೀಯೇತರವಾಗಿದ್ದ ಸಂವಾದವೊಂದರ ವೇಳೆ ಗಾಂಧಿ, ‘ಜಂತರ್ ಮಂತರ್ನಲ್ಲಿ ಹುಡುಗರು ಮತ್ತು ಹುಡುಗಿಯರಿಬ್ಬರೂ ನಿಂದನಾತ್ಮಕ ಭಾಷೆಯನ್ನು ಬಳಸಿದರು. ಆದರೆ, ಹುಡುಗಿಯರು ನಿಂದನಾತ್ಮಕ ಭಾಷೆ ಬಳಸಿದ್ದನ್ನು ಕಂಡು ತಮಗೆ ‘ಸಾಂಸ್ಕೃತಿಕ ಆಘಾತ’ವಾಯಿತು ಎಂದು ಪ್ರಧಾನಿ ಹೇಳಿದರು. ಹುಡುಗರು ನಿಂದನಾತ್ಮಕ ಭಾಷೆ ಬಳಸಿದರೆ ಸಮಸ್ಯೆಯಿಲ್ಲವೇ? ಅವರಿಗೆ ಅದಕ್ಕೆ ಅನುಮತಿಯಿದೆಯೇ?’ ಎಂದು ಪ್ರಶ್ನೆ ಮಾಡಿದ್ದಾರೆ.





