ಕರ್ನಾಟಕದ ಅಪಾರ್ಟ್ಮೆಂಟ್ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು; ಬಲಿಷ್ಠ ಆಡಳಿತಕ್ಕೆ ಹೊಸ ಆರಂಭ- BAF

ಬೆಂಗಳೂರು : ಕರ್ನಾಟಕದ ಅಪಾರ್ಟ್ಮೆಂಟ್ ಸಮುದಾಯಗಳ ಆಡಳಿತ ಮತ್ತು ಮಾಲೀಕರ ಹಕ್ಕುಗಳ ರಕ್ಷಣೆಗೆ ಸಮಗ್ರ ಕಾನೂನು ಚೌಕಟ್ಟನ್ನು ಒದಗಿಸುವ ಕರ್ನಾಟಕ ಅಪಾರ್ಟ್ಮೆಂಟ್ ಓನರ್ಶಿಪ್ ಅಂಡ್ ಮ್ಯಾನೇಜ್ಮೆಂಟ್ ಆಕ್ಟ್ (KAOMA) 2026 ಜಾರಿಗೆ ಬಂದಿರುವುದನ್ನು ಬೆಂಗಳೂರು ಅಪಾರ್ಟ್ಮೆಂಟ್ಸ್ ಫೆಡರೇಷನ್ (BAF) ಸ್ವಾಗತಿಸಿದೆ.

ಐದು ದಶಕಗಳಿಗೂ ಹೆಚ್ಚು ಕಾಲದ ನಂತರ, ಅಪಾರ್ಟ್ಮೆಂಟ್ ಮಾಲೀಕತ್ವಕ್ಕೆ ಮಾತ್ರ ಸೀಮಿತವಾಗಿದ್ದ ಹಿಂದಿನ ಕಾನೂನು ಚೌಕಟ್ಟಿನಿಂದ ಹೊರಬಂದು, ಅಸೋಸಿಯೇಷನ್ ಆಡಳಿತ, ಪ್ರೊಮೋಟರ್ಗಳ ಹೊಣೆಗಾರಿಕೆ, ಕಾಮನ್ ಏರಿಯಾಗಳ ರಕ್ಷಣೆ, ಕಟ್ಟಡ ಸುರಕ್ಷತೆ, ನಿರ್ವಹಣೆ, ಪುನರ್ಅಭಿವೃದ್ಧಿ ಹಾಗೂ ವಿವಾದ ಪರಿಹಾರ ಸೇರಿದಂತೆ ಆಧುನಿಕ ಅಪಾರ್ಟ್ಮೆಂಟ್ ಸಮುದಾಯಗಳ ಅಗತ್ಯಗಳನ್ನು ಒಳಗೊಂಡ ಸಮಗ್ರ ವ್ಯವಸ್ಥೆಯತ್ತ ಕರ್ನಾಟಕ ಹೆಜ್ಜೆ ಇಟ್ಟಿದೆ ಎಂದು BAF ತಿಳಿಸಿದೆ.

ಈ ಮಹತ್ವದ ಕಾನೂನನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಅಂಗೀಕಾರಗೊಳ್ಳುವಂತೆ ಮುನ್ನಡೆಸಿದ 
ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ BAF ಕೃತಜ್ಞತೆ ಸಲ್ಲಿಸಿದೆ. ಅಪಾರ್ಟ್ಮೆಂಟ್ ಸಮುದಾಯಗಳ ದೀರ್ಘಕಾಲದ ಸಮಸ್ಯೆಗಳನ್ನು ಪರಿಗಣಿಸಿ, ಮಸೂದೆಯನ್ನು ಎರಡೂ ಸದನಗಳಲ್ಲಿ ಮಂಡಿಸಿ ಮುಂದುವರಿಸಲು ಸಹಕರಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಶ್ರೀ ಕೃಷ್ಣ ಬೈರೇಗೌಡ ಅವರಿಗೂ ಫೆಡರೇಷನ್ ಅಭಿನಂದನೆ ಸಲ್ಲಿಸಿದೆ.

“ಅಪಾರ್ಟ್ಮೆಂಟ್ ಆಡಳಿತದಲ್ಲಿ ಮಹತ್ವದ ಸುಧಾರಣೆ”

BAF ಅಧ್ಯಕ್ಷ ಸತೀಶ್ ಮಲ್ಯ ಮಾತನಾಡಿ, “KAOMA 2026, 1972ರ ಕಾನೂನು ಚೌಕಟ್ಟಿಗಿಂತ ಮಹತ್ವದ ಸುಧಾರಣೆಯಾಗಿದೆ. ಇದು ದೇಶದ ಅತ್ಯಂತ ಬಲಿಷ್ಠ ಅಪಾರ್ಟ್ಮೆಂಟ್ ಆಡಳಿತ ಕಾನೂನುಗಳಲ್ಲಿ ಒಂದಾಗುವ ಸಾಮರ್ಥ್ಯ ಹೊಂದಿದೆ. ಕಾನೂನಿನ ಪರಿಣಾಮಕಾರಿ ಅನುಷ್ಠಾನವೇ ಮುಂದಿನ ಪ್ರಮುಖ ಹಂತ. ಅಪಾರ್ಟ್ಮೆಂಟ್ ಮಾಲೀಕತ್ವ ರಕ್ಷಣೆ, ಅಸೋಸಿಯೇಷನ್ಗಳ ಸಬಲೀಕರಣ, ಪ್ರೊಮೋಟರ್ಗಳ ಹೊಣೆಗಾರಿಕೆ, ಕಾಮನ್ ಏರಿಯಾಗಳ ರಕ್ಷಣೆ, ಕಟ್ಟಡ ಸುರಕ್ಷತೆ ಮತ್ತು ಪುನರ್ಅಭಿವೃದ್ಧಿಗೆ ಸ್ಪಷ್ಟ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ BAF ರಚನಾತ್ಮಕವಾಗಿ ಕೆಲಸ ಮಾಡಲಿದೆ,” ಎಂದರು.

BAF ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್ ಮಾತನಾಡಿ, “ಅಪಾರ್ಟ್ಮೆಂಟ್ಗಳ ನಿರ್ವಹಣೆ ಮತ್ತು ಆಡಳಿತವನ್ನು ಅಸೋಸಿಯೇಷನ್ಗೆ ಹಸ್ತಾಂತರಿಸಲು KAOMA ಹೆಚ್ಚು ಬಲಿಷ್ಠ ವ್ಯವಸ್ಥೆ ಒದಗಿಸುತ್ತದೆ. ಆದರೆ ನಿರ್ವಹಣೆಯ ಜತೆಗೆ ಮಾಲೀಕತ್ವದ ಹಕ್ಕುಗಳೂ ಸ್ಪಷ್ಟವಾಗಿ ಹಸ್ತಾಂತರವಾಗಬೇಕು. ಭೂಮಿ ಹಾಗೂ ಕಾಮನ್ ಏರಿಯಾ ಹಕ್ಕುಗಳ ಕಾನೂನುಬದ್ಧ ಮತ್ತು ಡೀಮ್ಡ್ ಕನ್ವೆಯನ್ಸ್ಗೆ ಕಾಲಮಿತಿಯ, ಸ್ಪಷ್ಟ ಹಾಗೂ ಜಾರಿಗೊಳಿಸಬಹುದಾದ ವ್ಯವಸ್ಥೆ ಅಗತ್ಯ,” ಎಂದು ಹೇಳಿದರು.

BAF GC ಸದಸ್ಯೆ ಹಾಗೂ ಪಾಲಿಸಿ ವಿಭಾಗದ ಮುಖ್ಯಸ್ಥೆ CA ಸುಜಾತಾ ಜಿ. ಮಾತನಾಡಿ, “ಪ್ರತಿ ಅಪಾರ್ಟ್ಮೆಂಟ್ ಯೋಜನೆಗೆ ಒಂದು ಕಾನೂನುಬದ್ಧ ಅಸೋಸಿಯೇಷನ್ ಎಂಬ ಪರಿಕಲ್ಪನೆ ಅಪಾರ್ಟ್ಮೆಂಟ್ ಆಡಳಿತವನ್ನು ಮತ್ತಷ್ಟು ವ್ಯವಸ್ಥಿತಗೊಳಿಸುತ್ತದೆ. ನೋಂದಾಯಿತ ಅಸೋಸಿಯೇಷನ್ಗೆ ಬಾಡಿ ಕಾರ್ಪೊರೇಟ್ ಸ್ಥಾನಮಾನ ಹಾಗೂ ತನ್ನದೇ ಹೆಸರಿನಲ್ಲಿ ದಾವೆ ಹೂಡುವ ಮತ್ತು ಎದುರಿಸುವ ಕಾನೂನು ಸಾಮರ್ಥ್ಯ ನೀಡಿರುವುದು ಮಹತ್ವದ ಹೆಜ್ಜೆ,” ಎಂದರು.

BAF GC ಸದಸ್ಯ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವ ವೆಂಕಟ ರೆಡ್ಡಿ ಮಾತನಾಡಿ, “ಈಗಾಗಲೇ ಅಸ್ತಿತ್ವದಲ್ಲಿರುವ ಅಪಾರ್ಟ್ಮೆಂಟ್ ಸಮುದಾಯಗಳಿಗೆ ಪರಿವರ್ತನಾ ಅವಕಾಶ ನೀಡಿರುವುದು ಅತ್ಯಂತ ಮಹತ್ವದ್ದು. KAOA 1972 ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ರಚನೆಯಾಗಿರುವ ಅಸೋಸಿಯೇಷನ್ಗಳು ನಿಗದಿತ ಪ್ರಕ್ರಿಯೆಯಂತೆ ಹೊಸ ಕಾನೂನು ಚೌಕಟ್ಟಿಗೆ ಪರಿವರ್ತನೆಯಾಗಲು ಸಾಧ್ಯವಾಗುತ್ತದೆ. ಇದು ಸಾವಿರಾರು ಸಮುದಾಯಗಳಿಗೆ ನಿರಂತರತೆಯನ್ನು ಒದಗಿಸುತ್ತದೆ,” ಎಂದರು.

ಹೊಸ ಕಾಯ್ದೆಯಿಂದ ಅಪಾರ್ಟ್ಮೆಂಟ್ ಮಾಲೀಕರಿಗೆ ಆಗಿರುವ ಐದು ಪ್ರಮುಖ ಪ್ರಯೋಜನಗಳು

1. ಹಸ್ತಾಂತರದ ನಂತರವೂ ಪ್ರೊಮೋಟರ್ಗಳ ಹೊಣೆಗಾರಿಕೆ:
ಅಸೋಸಿಯೇಷನ್ಗೆ ನಿರ್ವಹಣೆ ಹಸ್ತಾಂತರವಾದರೂ RERA ಅಡಿಯಲ್ಲಿ ಪ್ರೊಮೋಟರ್ಗಳ ಹೊಣೆಗಾರಿಕೆ ಮುಂದುವರಿಯುತ್ತದೆ. ಕಾಮನ್ ಏರಿಯಾಗಳ ಮೇಲೆ ಪ್ರೊಮೋಟರ್ ನಿಯಂತ್ರಣ ಮುಂದುವರಿಸಲು ಅವಕಾಶವಿರುವುದಿಲ್ಲ.

2. ಅಸೋಸಿಯೇಷನ್ ರಚನೆಗೆ ಕಾಲಮಿತಿ:
ಬಹುಪಾಲು ಅಪಾರ್ಟ್ಮೆಂಟ್ಗಳು ಹಂಚಿಕೆಯಾದ ನಂತರ ಮೂರು ತಿಂಗಳೊಳಗೆ ಅಸೋಸಿಯೇಷನ್ ರಚನೆ ಮತ್ತು ನೋಂದಣಿಗೆ ಪ್ರೊಮೋಟರ್ ನೆರವು ನೀಡಬೇಕು. ವಿಫಲವಾದರೆ ಸಂಬಂಧಿತ ಪ್ರಾಧಿಕಾರ ಮಧ್ಯಪ್ರವೇಶಿಸಬಹುದು.

3. ಕಾಮನ್ ಏರಿಯಾಗಳಿಗೆ ಹೆಚ್ಚಿನ ರಕ್ಷಣೆ:
ಕಾಮನ್ ಏರಿಯಾಗಳನ್ನು ಖಾಸಗಿ ಅಥವಾ ಮಾರಾಟ ಮಾಡಬಹುದಾದ ಪ್ರದೇಶಗಳಾಗಿ ಪರಿವರ್ತಿಸುವುದನ್ನು ತಡೆಯಲು ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ.

4. ಭವಿಷ್ಯದ ಅಭಿವೃದ್ಧಿ ಸಾಮರ್ಥ್ಯ ಅಪಾರ್ಟ್ಮೆಂಟ್ ಮಾಲೀಕರ ಸಾಮೂಹಿಕ ಹಕ್ಕು:
ಭವಿಷ್ಯದಲ್ಲಿ ಯೋಜನಾ ನಿಯಮಗಳಲ್ಲಿ ಬದಲಾವಣೆಯಿಂದ ದೊರೆಯುವ ಹೆಚ್ಚುವರಿ FSI/FAR ಸೇರಿದಂತೆ ಅಭಿವೃದ್ಧಿ ಸಾಮರ್ಥ್ಯವನ್ನು ಅಪಾರ್ಟ್ಮೆಂಟ್ ಮಾಲೀಕರ ಸಾಮೂಹಿಕ ಹಕ್ಕಾಗಿ ಪರಿಗಣಿಸುವ ಮಹತ್ವದ ತತ್ವವನ್ನು ಒಳಗೊಂಡಿದೆ.

5. ಕಟ್ಟಡ ಸುರಕ್ಷತೆ ಮತ್ತು ಪುನರ್ಅಭಿವೃದ್ಧಿಗೆ ಕಾನೂನು ಚೌಕಟ್ಟು:
ಹಳೆಯ ಕಟ್ಟಡಗಳ ರಚನಾತ್ಮಕ ಸ್ಥಿರತೆ ಪರಿಶೀಲನೆ, ಪ್ರಮುಖ ದುರಸ್ತಿ, ಪುನರ್ನಿರ್ಮಾಣ ಮತ್ತು ಪುನರ್ಅಭಿವೃದ್ಧಿಗೆ ವ್ಯವಸ್ಥಿತ ಚೌಕಟ್ಟನ್ನು ಒದಗಿಸುತ್ತದೆ.

BAF ಮುಂದಿನ ದಿನಗಳಲ್ಲಿ ಸರ್ಕಾರ, ಅಪಾರ್ಟ್ಮೆಂಟ್ ಅಸೋಸಿಯೇಷನ್ಗಳು, ಪ್ರೊಮೋಟರ್ಗಳು ಹಾಗೂ ಇತರ ಎಲ್ಲ ಪಾಲುದಾರರೊಂದಿಗೆ ರಚನಾತ್ಮಕವಾಗಿ ಕಾರ್ಯನಿರ್ವಹಿಸಿ, KAOMA 2026ರ ಪರಿಣಾಮಕಾರಿ ಅನುಷ್ಠಾನದ ಮೂಲಕ ಕರ್ನಾಟಕದ ಅಪಾರ್ಟ್ಮೆಂಟ್ ಸಮುದಾಯಗಳಿಗೆ ಹೆಚ್ಚು ಪಾರದರ್ಶಕ, ಜವಾಬ್ದಾರಿಯುತ ಮತ್ತು ಸುಸ್ಥಿರ ಆಡಳಿತ ವ್ಯವಸ್ಥೆ ರೂಪಿಸುವ ಗುರಿ ಹೊಂದಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others