ವಾಷಿಂಗ್ಟನ್: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್‌ಗಳಷ್ಟು ಪೆಟ್ರೋಲಿಯಂ ನಿಕ್ಷೇಪಗಳ ಮೇಲೆ ಅಮೆರಿಕಕ್ಕೆ ಬಹುಪಾಲು ನಿಯಂತ್ರಣ ನೀಡುವ ಬೃಹತ್ ತೈಲ ಒಪ್ಪಂದವನ್ನು ತಮ್ಮ ಆಡಳಿತ ಮಾಡಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಈ ಮಹತ್ವದ ಒಪ್ಪಂದಕ್ಕಾಗಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಜುವೆಲಾದ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಹಾಗೂ ಈ ಒಪ್ಪಂದವು ಉಭಯ ದೇಶಗಳ ನಡುವಿನ ಸಂಬಂಧವನ್ನ ಮತ್ತಷ್ಟು ಬಲಪಡಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಐತಿಹಾಸಿಕ ಒಪ್ಪಂದ ಅಮೆರಿಕದ ತೈಲ ನಿಕ್ಷೇಪಗಳ ಸಾಮರ್ಥ್ಯವನ್ನ ದ್ವಿಗುಣಗೊಳಿಸಲಿದೆ, ನಮ್ಮ ತೈಲ ಪೂರೈಕೆ ಗಣನೀಯವಾಗಿ ಹೆಚ್ಚಿಸುವ ಜೊತೆಗೆ ಭವಿಷ್ಯದಲ್ಲಿ ಪ್ರತಿಯೊಬ್ಬ ಅಮೆರಿಕನ್ನರಿಗೆ ಕಡಿಮೆ ಬೆಲೆಯಲ್ಲಿ ತೈಲ ಮತ್ತು ಅನಿಲ ದೊರಕಿಸಿಕೊಡಲು ಸಹಾಯ ಮಾಡುತ್ತದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ವೆನೆಜುವೆಲಾವನ್ನು ಸಮೃದ್ಧಿಯತ್ತ ಸಾಗಿಸಲು ಸಹಾಯ ಮಾಡುತ್ತದೆ ಎಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.
ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲರ್ ಮಡುರೊ ಅವರ ಸರ್ಕಾರವನ್ನು ಅಮೆರಿಕ ಉರುಳಿದ ಬಹುದಿನಗಳ ನಂತರ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ.ವೆನೆಜುವೆಲಾದೊಂದಿಗಿನ ನಮ್ಮ ಒಪ್ಪಂದವು ವಿಶ್ವ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ತೈಲ ಒಪ್ಪಂದವಾಗಿದೆ ಎಂದು ಅವರು ಪುನರುಚ್ಛರಿಸಿದ್ದಾರೆ.
ಆದರೆ ಕಳಪೆ ಮೂಲಸೌಕರ್ಯದಿಂದಾಗಿ ವೆನೆಜುವೆಲಾ ವಿಶ್ವದ ತೈಲದ ಸುಮಾರು ಶೇ.1 ರಷ್ಟು ಮಾತ್ರ ಉತ್ಪಾದಿಸುತ್ತದೆ. ಇದೀಗ ಹೊಸ ಒಪ್ಪಂದಗಳ ಅಡಿಯಲ್ಲಿ ಅಮೆರಿಕವು ವೆನೆಜುವೆಲಾ ತೈಲ ನಿಕ್ಷೇಪಗಳನ್ನ ಅಭಿವೃದ್ಧಿಪಡಿಸಲು ಅವಕಾಶ ನೀಡಲಿದ್ದು, ಇದಕ್ಕೆ ಪ್ರತಿಯಾಗಿ ಹೆಚ್ಚಿನ ಪಾಲನ್ನು ಅಮೆರಿಕ ಪಡೆಯಲಿದೆ ಎಂದು ತಿಳಿದುಬಂದಿದೆ.
ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳಲ್ಲಿ ಒಂದಾಗಿದೆ. ಯುಎಸ್ ಇಂಧನ ಮಾಹಿತಿ ಆಡಳಿತದ ಅಂದಾಜಿನ ಪ್ರಕಾರ, ದಕ್ಷಿಣ ಅಮೆರಿಕಾದ ದೇಶವು ಸುಮಾರು 303 ಶತಕೋಟಿ ಬ್ಯಾರೆಲ್ ಕಚ್ಚಾ ತೈಲ ಹೊಂದಿದೆ. ಇದು ವಿಶ್ವದ ಒಟ್ಟು ಪೂರೈಕೆಯ ಸರಿಸುಮಾರು ಶೇ.17 ರಷ್ಟಿದೆ. ಇದರ ತೈಲ ನಿಕ್ಷೇಪಗಳನ್ನು ಸಹ ನಕ್ಷೆ ಮಾಡಲಾಗಿದೆ.
ಈ ಒಪ್ಪಂದವು ಅಮೆರಿಕಾ ಫಸ್ಟ್ ನೀತಿಯಡಿ ಟ್ರಂಪ್ ಅವರ ಧೈರ್ಯಶಾಲಿ ವಿದೇಶಾಂಗ ನೀತಿಯು ಅಮೆರಿಕಕ್ಕೆ ಯಶಸ್ಸು ತಂದುಕೊಡುತ್ತಿರುವುದನ್ನು ತೋರಿಸುತ್ತದೆ. ನಮ್ಮ ಗೋಳಾರ್ಧದಲ್ಲಿ ಸ್ಥಿರ ತೈಲ ನಿಕ್ಷೇಪ ಮತ್ತು ಕಡಿಮೆ ದರದ ತೈಲವನ್ನು ಖಚಿತಪಡಿಸುವುದರ ಜೊತೆಗೆ, ದೇಶೀಯವಾಗಿ ಇಂಧನ ಬೆಲೆಗಳನ್ನು ಕಡಿಮೆ ಮಾಡಲು ಇದು ನೆರವಾಗಲಿದೆ” ಎಂದು ರುಬಿಯೊ ಹೇಳಿದ್ದಾರೆ.
ವೆನೆಜುವೆಲಾದ ಜನರಿಗೆ ಈ ಒಪ್ಪಂದವು ಸುಮಾರು 100 ಬಿಲಿಯನ್ ಡಾಲರ್‌ಗಳ ಖಾಸಗಿ ಹೂಡಿಕೆ, ಸಾವಿರಾರು ಉತ್ತಮ ವೇತನದ ಉದ್ಯೋಗಗಳು ಹಾಗೂ ವೆನೆಜುವೆಲಾ ಆರ್ಥಿಕತೆಯ ಪುನರ್‌ನಿರ್ಮಾಣಕ್ಕೆ ವೇಗ ನೀಡಲಿದೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿ ಎಕ್ಸ್‌ನಲ್ಲಿ ಬರೆದಿದ್ದು, ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಸುದ್ದಿ ತಾಣ ಆಕ್ಸಿಯೋಸ್ ಗುರುವಾರ ವರದಿ ಮಾಡಿರುವ ಪ್ರಕಾರ, ಎರಡೂ ದೇಶಗಳು 12 ಉತ್ಪಾದಕ ತೈಲ ಕ್ಷೇತ್ರಗಳ ಕುರಿತು ಮಾತುಕತೆ ನಡೆಸುತ್ತಿವೆ. ಈ ಕ್ಷೇತ್ರಗಳಲ್ಲಿ 90 ಬಿಲಿಯನ್ ಬ್ಯಾರೆಲ್‌ಗಳಷ್ಟು ಸಾಬೀತಾದ ತೈಲ ನಿಕ್ಷೇಪಗಳಿವೆ. ಇದು ವೆನೆಜುವೆಲಾದ ಒಟ್ಟು 300 ಬಿಲಿಯನ್ ಬ್ಯಾರೆಲ್‌ಗಳ ಸಾಬೀತಾದ ನಿಕ್ಷೇಪಗಳ ಪೈಕಿ ಸುಮಾರು ಮೂರನೇ ಒಂದು ಭಾಗವಾಗಿದೆ ಎಂದು ಇಬ್ಬರು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಆಕ್ಸಿಯೋಸ್ ವರದಿ ಮಾಡಿದೆ.
ಅಮೆರಿಕದ ಮಾಲೀಕತ್ವದ ಪಾಲಿಗೆ ಬದಲಾಗಿ, ಅಮೆರಿಕದ ಕಂಪನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ಈ ತೈಲ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಿದ್ದು, ತೈಲದಿಂದ ಬರುವ ಹೆಚ್ಚಿನ ಆದಾಯವನ್ನು ವೆನೆಜುವೆಲಾಕ್ಕೆ ಮರಳಿಸಲಿವೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.
ಅಮೆರಿಕನ್ನರಿಗೆ ಪೆಟ್ರೋಲ್ ಬೆಲೆ ಕಡಿಮೆಯಾಗಲಿದೆ ಎಂದು ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳಿಗೆ ಮುನ್ನ ಅವರ ಜನಪ್ರಿಯತೆ ಕುಸಿಯುತ್ತಿರುವ ಸಂದರ್ಭದಲ್ಲಿ ಇದು ಪ್ರಮುಖ ವಿಷಯವಾಗಿದೆ. ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಬಳಿಕ ಜಾಗತಿಕ ತೈಲ ಪೂರೈಕೆಗೆ ಅಡ್ಡಿಯಾಗಿದ್ದು, ಇಂಧನ ಬೆಲೆಗಳ ಮೇಲೂ ಪರಿಣಾಮ ಬೀರಿದೆ.
ಅಮೆರಿಕದ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು 40 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟದಲ್ಲಿರುವ ಸಂದರ್ಭದಲ್ಲಿ ಈ ಒಪ್ಪಂದವು ಅಮೆರಿಕದ ತೈಲ ನಿಕ್ಷೇಪಗಳನ್ನು ದ್ವಿಗುಣಕ್ಕಿಂತಲೂ ಹೆಚ್ಚಿಸಲಿದೆ ಎಂದು ಆಕ್ಸಿಯೋಸ್ ತಿಳಿಸಿದೆ.





