ಬೆಂಗಳೂರು: ರಾಜ್ಯದಲ್ಲಿ ಮೂಲಸೌಕರ್ಯ ವಿಸ್ತರಣೆ, ಆರೋಗ್ಯ ಸೇವೆಗಳ ಉನ್ನತೀಕರಣ ಹಾಗೂ ಗ್ರಾಮೀಣ ಸಂಪರ್ಕ ವ್ಯವಸ್ಥೆಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹತ್ವದ ಯೋಜನೆಗಳಿಗೆ ಅಸ್ತು ಎಂದಿದೆ. ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ(Karnataka Cabinet Meeting) ಹೆದ್ದಾರಿ ಕಾಮಗಾರಿಗಳು, ಪ್ರಮುಖ ಸೇತುವೆಗಳ ಮರುನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಪೂರೈಕೆ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆ ಮೂಲಕ ಮಹತ್ವದ ನಿರ್ಧಾರಗಳನ್ನು ಕರ್ನಾಟಕ ಸಂಪುಟ ಸಭೆಯಲ್ಲಿ(Karnataka Cabinet Meeting) ಕೈಗೊಳ್ಳಲಾಗಿದೆ.
ರಾಜ್ಯದೆಲ್ಲೆಡೆ ಹೆದ್ದಾರಿ ಮತ್ತು ರಸ್ತೆ ಜಾಲದ ನವನಿರ್ಮಾಣಕ್ಕೆ ₹20,000 ಕೋಟಿ ಮೀಸಲು
ರಾಜ್ಯದ ಸಾರಿಗೆ ಸಂಪರ್ಕವನ್ನು ಬಲಪಡಿಸಲು ಲೋಕೋಪಯೋಗಿ ಇಲಾಖೆ ಮೂಲಕ ಬರೋಬ್ಬರಿ ₹20,000 ಕೋಟಿ ವೆಚ್ಚದಲ್ಲಿ ಬೃಹತ್ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ 5ನೇ ಹಂತದ 2ನೇ ಘಟ್ಟದಲ್ಲಿ 1,897 ಕಿ.ಮೀ. ರಸ್ತೆ ಕಾಮಗಾರಿ, ವಿವಿಧ ವಿಧಾನಸಭಾ ಕ್ಷೇತ್ರಗಳ ಬೇಡಿಕೆಯಂತೆ ₹6,000 ಕೋಟಿ ಮೌಲ್ಯದ ರಸ್ತೆ-ಸೇತುವೆ ಕೆಲಸಗಳು ಮತ್ತು ₹3,000 ಕೋಟಿ ಹೆಚ್ಚುವರಿ ಅನುದಾನವನ್ನು ಒದಗಿಸಲಾಗಿದೆ. ಮುಖ್ಯವಾಗಿ, ಜಿಲ್ಲೆ ಮತ್ತು ತಾಲೂಕು ಕೇಂದ್ರಗಳನ್ನು ಪರಸ್ಪರ ಬೆಸೆಯುವ ಸುಮಾರು 3,986 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೇರಿಸಲು ₹6,000 ಕೋಟಿ ವ್ಯಯಿಸಲಾಗುತ್ತಿದೆ. ಇದಲ್ಲದೆ, ರಾಜಧಾನಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಕೈಗೆತ್ತಿಕೊಂಡಿರುವ 142.27 ಕಿ.ಮೀ. ರಸ್ತೆಗಳ ಪ್ಯಾಕೇಜ್ ಕಾಮಗಾರಿಗಳಿಗೆ ₹3,409.02 ಕೋಟಿ ಮೊತ್ತದ ಪರಿಷ್ಕೃತ ವೆಚ್ಚಕ್ಕೆ ಸಂಪುಟ ಮಂಜೂರಾತಿ ನೀಡಿದೆ.
ಕ್ಯಾನ್ಸರ್ ಮತ್ತು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗೆ ರೋಬೊಟಿಕ್ ಸರ್ಜರಿ ಉಪಕರಣಗಳ ಖರೀದಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೂ ವಿಶ್ವದರ್ಜೆಯ ಶಸ್ತ್ರಚಿಕಿತ್ಸಾ ಸೌಲಭ್ಯ ಒದಗಿಸಲು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಸಂಸ್ಥೆಗೆ ಒಟ್ಟು ₹40 ಕೋಟಿ ವೆಚ್ಚದಲ್ಲಿ ಸುಧಾರಿತ ರೋಬೊಟಿಕ್ ಸರ್ಜರಿ ಯಂತ್ರಗಳನ್ನು ತರಲು ಒಪ್ಪಿಗೆ ನೀಡಲಾಗಿದೆ. ಎರಡೂ ಸಂಸ್ಥೆಗಳಿಗೆ ತಲಾ ₹20 ಕೋಟಿ ನಿಗದಿಪಡಿಸಲಾಗಿದ್ದು, ಸರ್ಕಾರದಿಂದ ₹15 ಕೋಟಿ ಅನುದಾನ ಮತ್ತು ಸಂಸ್ಥೆಗಳ ಆಂತರಿಕ ಸಂಪನ್ಮೂಲದಿಂದ ₹5 ಕೋಟಿ ಭರಿಸಲಾಗುತ್ತದೆ. ಮುಂದಿನ ಆರು ತಿಂಗಳಲ್ಲಿ ಈ ತಂತ್ರಜ್ಞಾನ ಕಾರ್ಯಾರಂಭ ಮಾಡಲಿದ್ದು, ಕ್ಯಾನ್ಸರ್ ರೋಗಿಗಳಿಗೆ ಹಾಗೂ ಉತ್ತರ ಕರ್ನಾಟಕ ಭಾಗದ ಸಾರ್ವಜನಿಕರಿಗೆ ಅತ್ಯಾಧುನಿಕ ಚಿಕಿತ್ಸೆ ಸುಲಭವಾಗಿ ಸಿಗಲಿದೆ. ಇದರೊಂದಿಗೆ ಆರೋಗ್ಯ ಜಾಗೃತಿ ಮೂಡಿಸಲು ₹28.01 ಕೋಟಿ ವೆಚ್ಚದ ಪ್ರಚಾರ ಕ್ರಿಯಾ ಯೋಜನೆಗೂ ಹಸಿರು ನಿಶಾನೆ ತೋರಲಾಗಿದೆ.
ಮಲ್ಪೆ ಬಂದರಿನಲ್ಲಿ ವಾಹನ ದಟ್ಟಣೆಗೆ ಬ್ರೇಕ್: ತಲೆಯೆತ್ತಲಿದೆ ₹8.43 ಕೋಟಿ ವೆಚ್ಚದ ಪಾರ್ಕಿಂಗ್ ಕಾಂಪ್ಲೆಕ್ಸ್
ದಿನಂಪ್ರತಿ ಸಾವಿರಾರು ಪ್ರವಾಸಿಗರು ಮತ್ತು ಸಾವಿರಾರು ಮೀನುಗಾರಿಕಾ ದೋಣಿಗಳಿಂದ ಗಿಜಿಗುಡುವ ಕರಾವಳಿಯ ಮಲ್ಪೆ ಬಂದರಿನಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗಿದೆ. 1,800 ಚದರ ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (DBFOT) ತಳಹದಿಯ ಮೇಲೆ ₹8.43 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಾಣವಾಗಲಿದೆ. 31 ವರ್ಷಗಳ ರಿಯಾಯಿತಿ ಅವಧಿಯ ಈ ಯೋಜನೆಯಿಂದ ಮೀನು ಸಾಗಿಸುವ ವಾಹನಗಳ ಸಂಚಾರ ಸುಗಮವಾಗಲಿದ್ದು, ಪ್ರವಾಸಿಗರಿಗೂ ಪಾರ್ಕಿಂಗ್ ಕಿರಿಕಿರಿ ತಪ್ಪಲಿದೆ.
ಐತಿಹಾಸಿಕ ಬೌದ್ಧ ತಾಣದ ಅಭಿವೃದ್ಧಿಗೆ ‘ಸನ್ನತಿ ಪ್ರಾಧಿಕಾರ ವಿಧೇಯಕ 2026’
ಮೌರ್ಯ ಸಾಮ್ರಾಟ ಅಶೋಕನ ಅಪರೂಪದ ಶಿಲಾಶಾಸನಗಳು ಮತ್ತು ಬೌದ್ಧ ಸಂಸ್ಕೃತಿಯ ಕುರುಹುಗಳನ್ನು ಒಳಗೊಂಡಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿಯನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸಲು ಸರ್ಕಾರ ಹೆಜ್ಜೆ ಇಟ್ಟಿದೆ. ಈ ಪುರಾತತ್ವ ತಾಣದ ಸಮಗ್ರ ಸಂರಕ್ಷಣೆ ಮತ್ತು ಮೂಲಸೌಕರ್ಯ ಸುಧಾರಣೆಗೆ ಅಧಿಕಾರ ನೀಡುವ ‘ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2026’ರ ಕರಡಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಕಾಯ್ದೆ ರೂಪಿಸಲು ಮಂಡಿಸಲಾಗುವುದು.
ಕಲ್ಯಾಣ ಹಾಗೂ ಉತ್ತರ ಕರ್ನಾಟಕದಲ್ಲಿ ಹೊಸ ಕೈಗಾರಿಕಾ ವಸಾಹತುಗಳ ನಿರ್ಮಾಣ
ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಹೊಸ ಉದ್ಯಮಗಳಿಗೆ ಉತ್ತೇಜನ ನೀಡಲು ಹಾಗೂ ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶ ಒದಗಿಸಲು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಹರಳಹಳ್ಳಿಯಲ್ಲಿ ₹26.10 ಕೋಟಿ ವೆಚ್ಚದಲ್ಲಿ ನೂತನ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಕೆಎಸ್ಎಸ್ಐಡಿಸಿ (KSSIDC) ನೇತೃತ್ವದಲ್ಲಿ ಈ ವಸಾಹತುಗಳು ತಲೆಯೆತ್ತಲಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅಗತ್ಯ ಭೂಮಿ ಮತ್ತು ಪೂರಕ ವ್ಯವಸ್ಥೆಯನ್ನು ಒದಗಿಸಲಿವೆ.
ಕಾಡಾನೆ ಹಾವಳಿ ನಿಯಂತ್ರಣಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ 10.60 ಕಿ.ಮೀ. ರೈಲ್ವೆ ಬ್ಯಾರಿಕೇಡ್
ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಮುಕ್ತಿ ಹಾಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಪಿ.ಜಿ. ಪಾಳ್ಯದಿಂದ ಕುಡುವಲೆ ಕ್ರಾಸ್ ವರೆಗೆ ₹16.83 ಕೋಟಿ ವೆಚ್ಚದಲ್ಲಿ 10.60 ಕಿ.ಮೀ. ಉದ್ದದ ಗಟ್ಟಿಮುಟ್ಟಾದ ರೈಲ್ವೆ ಹಳಿ ಬ್ಯಾರಿಕೇಡ್ ಅಳವಡಿಸಲು ಅನುಮೋದನೆ ದೊರೆತಿದೆ. ಇದರಿಂದ ಅರಣ್ಯದಂಚಿನಲ್ಲಿರುವ ಸುಮಾರು 2,942 ರೈತ ಕುಟುಂಬಗಳ ಬೆಳೆ ಹಾನಿ ಮತ್ತು ಜೀವ ಭಯ ತಪ್ಪಲಿದೆ.
ಮಳೆ-ಪ್ರವಾಹಕ್ಕೆ ಕೊಚ್ಚಿಹೋಗದಂತೆ ಪ್ರಮುಖ ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿ
ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ನೀರು ಬಿಟ್ಟಾಗ ಮುಳುಗಡೆಯಾಗಿ ಸಂಪರ್ಕ ಕಡಿತಗೊಳ್ಳುತ್ತಿದ್ದ ಭದ್ರಾವತಿ ನಗರದ ಕೆಎಸ್ಆರ್ಟಿಸಿ ನಿಲ್ದಾಣದಿಂದ ಸಿದ್ದಾರೂಢ ನಗರ ಸಂಪರ್ಕಿಸುವ ಸೇತುವೆಯನ್ನು ₹42 ಕೋಟಿ ವೆಚ್ಚದಲ್ಲಿ ಎತ್ತರಿಸಿ ಪುನರ್ ನಿರ್ಮಿಸಲು ನಿರ್ಧರಿಸಲಾಗಿದೆ. ಜತೆಗೆ ಶಿಥಿಲಗೊಂಡಿರುವ ಶಿವಮೊಗ್ಗ ನಗರದ ಹಳೆಯ ತುಂಗಾ ಸೇತುವೆಯನ್ನು ₹40 ಕೋಟಿ ವೆಚ್ಚದಲ್ಲಿ ಮರುನಿರ್ಮಾಣ ಮಾಡಲು, ಕಲಬುರಗಿಯ ಕಾಳಗಿ ತಾಲೂಕಿನಲ್ಲಿ ಬೆಣ್ಣೆತೊರಾ ನದಿಗೆ ಅಡ್ಡಲಾಗಿ ಕನ್ನೂರು ಬಳಿ ಪ್ರವಾಹಕ್ಕೆ ಸಿಲುಕದಂತೆ ₹21 ಕೋಟಿ ವೆಚ್ಚದಲ್ಲಿ ಎತ್ತರದ ಸಂಪರ್ಕ ರಸ್ತೆ-ಸೇತುವೆ ಕಟ್ಟಲು ಮತ್ತು ಚಿತ್ರದುರ್ಗದ ಜಿನಗಿಹಳ್ಳ ಸೇತುವೆಗೆ ₹12 ಕೋಟಿ ವೆಚ್ಚ ಮಾಡಲು ಸಮ್ಮತಿಸಲಾಗಿದೆ. ಇದೇ ವೇಳೆ ಹಾಸನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಹೆಚ್ಚುವರಿ ನ್ಯಾಯಾಲಯ ಕಟ್ಟಡಗಳ ನಿರ್ಮಾಣಕ್ಕೆ ₹12.40 ಕೋಟಿ ಪರಿಷ್ಕೃತ ಅನುದಾನ ಒದಗಿಸಲಾಗಿದೆ




