ಬೆಂಗಳೂರು: ನಾಗೇಂದ್ರ ರಾಜೀನಾಮೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.ನಿರ್ಗಮಿತ ಸಚಿವ ಬಿ. ನಾಗೇಂದ್ರ ರಾಜೀನಾಮೆ ಬಿಜೆಪಿ – ಜೆಡಿಎಸ್ ಹೋರಾಟದ ಫಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ವಿಪಕ್ಷ ನಾಯಕರು,ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಹೋರಾಟ ನಡೆಸಿದ್ದು, ನಮ್ಮ ಗುರಿ ಆರಂಭದಿಂದಲೂ ಸ್ಪಷ್ಟವಾಗಿತ್ತು ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ನಾಗೇಂದ್ರ ರಾಜೀನಾಮೆ ಪ್ರಕರಣ ಅಪರೂಪದ್ದು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ನಾಗೇಂದ್ರ ವಿಚಾರವನ್ನು ವಿಧಾನಸಭೆಯಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿವೆ. ಎಂದು ಆರ್. ಅಶೋಕ್ ಹೇಳಿದರು.
ನಿಗಮದ ಎಂಡಿ ಆಗಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು. ನಾಗೇಂದ್ರ ಕೂಡ ತಮ್ಮನ್ನು ದಲಿತ ಎಂದು ಹೇಳುತ್ತಾರೆ. ಹಾಗಾದರೆ ಚಂದ್ರಶೇಖರ್ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರ ನೀಡಿದ ನ್ಯಾಯವೇನು ಎಂದು ಪ್ರಶ್ನಿಸಿದರು.
ಚಂದ್ರಶೇಖರ್ ಅವರ ಕುಟುಂಬಕ್ಕೆ ಪಿಂಚಣಿ ಹಾಗೂ ಗ್ರಾಚ್ಯುಯಿಟಿ ನೀಡಿಲ್ಲ. ಅವರ ಮಗನಿಗೆ ಸರ್ಕಾರಿ ಉದ್ಯೋಗ ನೀಡಿಲ್ಲ. 187 ಕೋಟಿ ರೂ. ಹಣವನ್ನು ಉಳಿಸಿದ ಚಂದ್ರಶೇಖರ್ ಅವರಿಗೆ ಅನ್ಯಾಯವಾಗಿದೆ. ಆದರೆ ನಾಗೇಂದ್ರ ಅವರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದೇನಾ ಕಾಂಗ್ರೆಸ್ನ ದಲಿತ ಕಾಳಜಿ? ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಅಕ್ರಮದ ಬಗ್ಗೆ ಚರ್ಚೆಯಾಗಿತ್ತು. ಇದೀಗ ಎರಡನೇ ಬಾರಿ ನಾಗೇಂದ್ರ ರಾಜೀನಾಮೆ ನೀಡುವಂತಾಗಿದೆ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ನಾಗೇಂದ್ರ ಹೇಳಿದ್ದಾರೆ. ಹಾಗಾದ್ರೆ ಪಕ್ಷವೇ ಲೂಟಿ ಮಾಡುವಂತೆ ಹೇಳಿಕೊಡ್ತಾ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಾಗೇಂದ್ರ ಅಮಾಯಕರು ಎಂದು ಹೇಳುತ್ತಿದ್ದಾರೆ. ಆದರೆ, ತನಿಖಾ ಸಂಸ್ಥೆಗಳು ಪ್ರಕರಣದಲ್ಲಿ ಹಲವು ಆರೋಪಗಳನ್ನು ದಾಖಲಿಸಿವೆ. ಇಡಿ ನಾಲ್ಕು ಚಾರ್ಜ್ಶೀಟ್ಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ ನಾಗೇಂದ್ರ ವಿರುದ್ಧ ಆರೋಪಗಳಿವೆ ಎಂದು ಅಶೋಕ್ ಹೇಳಿದರು. ನಾಗೇಂದ್ರ ರಾಜೀನಾಮೆ ಪ್ರಕರಣದ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.





