ಈಗ KSRTC ಬಸ್ ಟಿಕೆಟ್ ಬುಕ್ಕಿಂಗ್ ಮತ್ತಷ್ಟು ಸರಳ: ವಾಟ್ಸ್ ಅಪ್ ನಲ್ಲೇ ಪಡೆಯಬಹುದು ಟಿಕೆಟ್

ಬೆಂಗಳೂರು: ಒಂದು ಕರ್ನಾಟಕ ಮೊಬಿಲಿಟಿ ಆಪ್ ಮೂಲಕ ಏಕೀಕೃತ ಸಾರಿಗೆ ಸೇವೆಗೆ ಕೆ ಎಸ್ ಆರ್ ಟಿಸಿ ನಾಂದಿ ಹಾಡಿದೆ. ಹೀಗಾಗಿ ವಾಟ್ಸಾಪ್ ಮೂಲಕವೂ KSRTC ಬಸ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಪರಿಚಯಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರಿಗೆ ಮತ್ತಷ್ಟು ಸುಲಭ, ಸರಳ ಹಾಗೂ ಅನುಕೂಲಕರ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಡಿಜಿಟಲ್ ಸೇವೆಗಳನ್ನು ವಿಸ್ತರಿಸುತ್ತಿದೆ. ಇದರ ಭಾಗವಾಗಿ ಒಂದು ಕರ್ನಾಟಕ ಮೊಬಿಲಿಟಿ ಆಪ್ ಮೂಲಕ ರಾಜ್ಯದ ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದ KSRTC, NWKRTC, KKRTC ಹಾಗೂ BMTC ಸಾರಿಗೆ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಒಗ್ಗೂಡಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು, ವಿಧಾನಸೌಧದಲ್ಲಿ ಆಯೋಜಿಸಲಾದ 100 ದಿನಗಳ ಕಾರ್ಯಕ್ರಮದ ಅಂಗವಾಗಿ ದಿನಾಂಕ 10-09-2026 ರಂದು ನವೀಕೃತ ಮೊಬೈಲ್ ಆಪ್‌ ಹಾಗೂ ವಾಟ್ಸಾಪ್ ಟಿಕೆಟಿಂಗ್ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಿದರು.

ಆಧುನಿಕ ಹಾಗೂ ಬಳಕೆದಾರ ಸ್ನೇಹಿ ಇಂಟರ್‌ಫೇಸ್ ಹೊಂದಿರುವ ಈ ವೇದಿಕೆಯು ಪ್ರಯಾಣಿಕರಿಗೆ ಏಕೀಕೃತ ಹಾಗೂ ಸುಗಮ ಪ್ರಯಾಣ ಅನುಭವವನ್ನು ಒದಗಿಸುವ ಉದ್ದೇಶ ಹೊಂದಿದೆ.

ಮೊಬೈಲ್ಆಪ್‌ನ ಪ್ರಮುಖ ಸೌಲಭ್ಯಗಳು:

ಸುರಕ್ಷಿತ ಲಾಗಿನ್ ವ್ಯವಸ್ಥೆಯ ಮೂಲಕ ಪ್ರಯಾಣಿಕರ ಗುರುತಿನ ದೃಢೀಕರಣ, ಹಿಂದಿನ ಬುಕ್ಕಿಂಗ್‌ಗಳ ವಿವರ ವೀಕ್ಷಣೆ ಹಾಗೂ ವಹಿವಾಟುಗಳ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಯಾಣಿಕರ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ದೂರುಗಳ ಸ್ಥಿತಿಯನ್ನು ಪರಿಶೀಲಿಸುವುದು, ಅಗತ್ಯವಿದ್ದಲ್ಲಿ ಮೇಲ್ದರ್ಜೆಗೆ ಕಳುಹಿಸುವುದು ಹಾಗೂ ಪರಿಹಾರದ ಪ್ರಗತಿಯನ್ನು ಟ್ರ್ಯಾಕ್ ಮಾಡುವ ಸೌಲಭ್ಯ ದೊರೆಯಲಿದೆ. ಮುಂದಿನ ದಿನಗಳಲ್ಲಿ ಜಾರಿಗೆ ತರಲಾಗುವ ಡಿಜಿಟಲ್ ಮಾಸಿಕ ಪಾಸ್ ವ್ಯವಸ್ಥೆಯ ಮೂಲಕ ಆನ್‌ಲೈನ್‌ನಲ್ಲಿ ಬಸ್ ಪಾಸ್ ಬುಕ್ಕಿಂಗ್, ವಿತರಣೆ ಹಾಗೂ ನಿರ್ವಹಣೆ ಮಾಡಲು ಸಾಧ್ಯವಾಗಲಿದೆ. QR ಕೋಡ್ ಆಧಾರಿತ ಡಿಜಿಟಲ್ ಪರಿಶೀಲನೆಗೂ ಅವಕಾಶ ಕಲ್ಪಿಸಲಾಗುತ್ತದೆ.

ವಾಟ್ಸಾಪ್ ಮೂಲಕ ಟಿಕೆಟ್ ಬುಕ್ಕಿಂಗ್ :

ಪ್ರಯಾಣಿಕರ ಅನುಕೂಲಕ್ಕಾಗಿ ವಾಟ್ಸಾಪ್ ಮೂಲಕ KSRTC, NWKRTC ಹಾಗೂ KKRTC ಬಸ್‌ಗಳ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಪ್ರಯಾಣಿಕರು +91 6364940880 ವಾಟ್ಸಾಪ್ ಸಂಖ್ಯೆಗೆ ಸಂದೇಶವನ್ನು ಕಳುಹಿಸುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಬಹುದು. ನಂತರ ವಾಟ್ಸಾಪ್‌ನಲ್ಲಿಯೇ ಲಭ್ಯವಾಗುವ ಸಂವಾದಾತ್ಮಕ ವ್ಯವಸ್ಥೆಯು ಟಿಕೆಟ್ ಕಾಯ್ದಿರಿಸುವಿಕೆಯ ಸಂಪೂರ್ಣ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲಿದೆ.

ಟಿಕೇಟ್‌ ಬುಕಿಂಗ್‌ ವಿಧಾನ:

  1. ಪ್ರಯಾಣ ಆರಂಭದ ಸ್ಥಳ, ಗಮ್ಯಸ್ಥಾನ ಹಾಗೂ ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಿ ಲಭ್ಯವಿರುವ ಬಸ್ ಸೇವೆಗಳನ್ನು ಹುಡುಕಬೇಕು.
  2. ತಮ್ಮ ಪ್ರಯಾಣದ ಆದ್ಯತೆಗೆ ಅನುಗುಣವಾಗಿ ಸೂಕ್ತವಾದ ಬಸ್ ಸೇವೆಯನ್ನು ಆಯ್ಕೆ ಮಾಡಬೇಕು.
  3. ಪ್ರಯಾಣಿಕರ ವಿವರಗಳನ್ನು ನಮೂದಿಸಬೇಕು.
  4. ಟಿಕೆಟ್ ವಿವರಗಳನ್ನು ಪರಿಶೀಲಿಸಿ ಪಾವತಿಯನ್ನು ಪೂರ್ಣಗೊಳಿಸಬೇಕು.

ಪಾವತಿಗಾಗಿ UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವಾಲೆಟ್‌ಗಳು ಸೇರಿದಂತೆ ವಿವಿಧ ಪಾವತಿ ವಿಧಾನಗಳನ್ನು ಬಳಸಬಹುದಾಗಿದೆ. ಪಾವತಿ ಯಶಸ್ವಿಯಾದ ನಂತರ ಬುಕ್ಕಿಂಗ್ ದೃಢೀಕರಣ ಹಾಗೂ ಇ-ಟಿಕೆಟ್ ಅನ್ನು ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಪ್ರಯಾಣಿಕರಿಗೆ ಹಂಚಿಕೊಳ್ಳಲಾಗುತ್ತದೆ.

ವಾಟ್ಸಾಪ್ ಮೂಲಕ ಟಿಕೆಟ್ ರದ್ದುಪಡಿಸುವಿಕೆ: ವಾಟ್ಸಾಪ್ ಮೂಲಕ ಬುಕ್ ಮಾಡಿರುವ ಟಿಕೆಟ್‌ಗಳನ್ನು ಇದೇ ವಾಟ್ಸಾಪ್ ಸಂಖ್ಯೆಯ ಮೂಲಕ ರದ್ದುಪಡಿಸಬಹುದಾಗಿದೆ. ಟಿಕೆಟ್ ರದ್ದುಪಡಿಸಲು ಪ್ರಯಾಣಿಕರು ವಾಟ್ಸಾಪ್‌ನಲ್ಲಿ ಯಾವುದೇ ಒಂದು ಸಂದೇಶವನ್ನು ಕಳುಹಿಸಿ “Ticket Cancellation” ಆಯ್ಕೆಯನ್ನು ಆಯ್ದುಕೊಳ್ಳಬೇಕು. ನಂತರ PNR ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಬುಕ್ಕಿಂಗ್ ಸಮಯದಲ್ಲಿ ಪಡೆದ Transaction Password ಅನ್ನು ನಮೂದಿಸಿ ಟಿಕೇಟ್ ರದ್ದುಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಭವಿಷ್ಯದ ಏಕೀಕೃತ ಮೊಬಿಲಿಟಿ ವ್ಯವಸ್ಥೆಗೆ ಬುನಾದಿ: ಒಂದು ಕರ್ನಾಟಕ ಮೊಬಿಲಿಟಿ ಆಪ್ ಭವಿಷ್ಯದಲ್ಲಿ ಇತರೆ ಸಾರ್ವಜನಿಕ ಸಾರಿಗೆ ಹಾಗೂ ಮೊಬಿಲಿಟಿ ಸೇವೆಗಳನ್ನು ಏಕೀಕರಿಸಲು ಅಗತ್ಯವಾದ ಬುನಾದಿಯನ್ನು ನಿರ್ಮಿಸಲಿದೆ. . ಇದರ ಮೂಲಕ ರಾಜ್ಯದಲ್ಲಿ ಏಕೀಕೃತ, ಸುಲಭವಾಗಿ ಲಭ್ಯವಾಗುವ ಹಾಗೂ ತಂತ್ರಜ್ಞಾನ ಆಧಾರಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ.

ಪ್ರಯಾಣಿಕರು ಈ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಬಳಸಿಕೊಳ್ಳುವಂತೆ ಕೋರಲಾಗಿದೆ. ಟಿಕೆಟ್ ಕಾಯ್ದಿರಿಸುವಿಕೆ ಅಥವಾ ಯಾವುದೇ ಸಹಾಯಕ್ಕಾಗಿ, ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಕರೆ ಕೇಂದ್ರವನ್ನು 080-26252625 (24×7) ಅಥವಾ AWATAR ಸೆಲ್ ಅನ್ನು 7760990034 / 7760990035 (ಬೆಳಿಗ್ಗೆ 7.00 ರಿಂದ ರಾತ್ರಿ 10.00 ಗಂಟೆವರೆಗೆ).                                                               

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others