ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಏನಾಗುತ್ತೆ?: ಅಸಲಿ ಸತ್ಯ ಬಿಚ್ಚಿಟ್ಟ ತಜ್ಞರು!

ನವದೆಹಲಿ: ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುವುದು ಆರೋಗ್ಯಕ್ಕೆ ಅತ್ಯುತ್ತಮ ಎಂಬ ನಂಬಿಕೆ ಬಹುತೇಕರಲ್ಲಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ತಿಂದರಷ್ಟೇ ಇದರ ಪೌಷ್ಟಿಕಾಂಶಗಳು ಮೈಗೂಡುತ್ತವೆ ಎಂಬುದಕ್ಕೆ ಯಾವುದೇ ದೃಢ ವೈದ್ಯಕೀಯ ಸಾಕ್ಷ್ಯಾಧಾರಗಳಿಲ್ಲ. ಆದಾಗ್ಯೂ, ಪಪ್ಪಾಯಿ ಅತ್ಯಂತ ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡ ಹಣ್ಣಾಗಿದ್ದು, ಇದನ್ನು ದಿನದ ಯಾವುದೇ ಸಮಯದಲ್ಲಿ ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೂ ದೇಹಕ್ಕೆ ಹತ್ತಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಆಹಾರ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಜೀರ್ಣಕ್ರಿಯೆ ಸುಧಾರಣೆ ಹಾಗೂ ಜಲಾಂಶ ವೃದ್ಧಿ

ಶೇ. 88ರಷ್ಟು ನೈಸರ್ಗಿಕ ನೀರಿನಂಶ ಹೊಂದಿರುವ ಪಪ್ಪಾಯಿ ದೇಹದ ನಿರ್ಜಲೀಕರಣವನ್ನು ತಪ್ಪಿಸಲು ನೆರವಾಗುತ್ತದೆ. ಪ್ರತಿ 100 ಗ್ರಾಂ ಹಣ್ಣಿನಲ್ಲಿ 1.7 ಗ್ರಾಂ ನಾರಿನಂಶವಿದ್ದು (Fibre), ಇದು ಕರುಳಿನ ಚಲನೆಯನ್ನು ಸುಗಮಗೊಳಿಸಿ ಮಲಬದ್ಧತೆ ನಿವಾರಣೆಗೆ ಪೂರಕವಾಗಿದೆ. ಆದರೆ ಮಲಬದ್ಧತೆಯ ಸಮಸ್ಯೆಗೆ ಕೇವಲ ಪಪ್ಪಾಯಿ ಮಾತ್ರವಲ್ಲದೆ ದಿನವಿಡೀ ಕುಡಿಯುವ ನೀರಿನ ಪ್ರಮಾಣ ಹಾಗೂ ದೈಹಿಕ ಚಟುವಟಿಕೆಯೂ ಅತ್ಯಗತ್ಯ.

ರೋಗನಿರೋಧಕ ಶಕ್ತಿ ಹಾಗೂ ಕಬ್ಬಿಣಾಂಶ ಹೀರಿಕೆಗೆ ಪೂರಕ

ಪ್ರತಿ 100 ಗ್ರಾಂ ಪಪ್ಪಾಯಿಯಲ್ಲಿ ಬರೋಬ್ಬರಿ 61 ಮಿಲಿಗ್ರಾಂ ವಿಟಮಿನ್ ‘ಸಿ’ ಇರಲಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸಲು ಸಹಕಾರಿ. ಸಸ್ಯಹಾರಿ ಆಹಾರಗಳಲ್ಲಿರುವ ಕಬ್ಬಿಣಾಂಶವನ್ನು (Iron) ದೇಹ ಹೀರಿಕೊಳ್ಳಲು ವಿಟಮಿನ್ ‘ಸಿ’ ಅತ್ಯಂತ ಅಗತ್ಯವಾಗಿದ್ದು, ಕಾಳುಗಳು ಅಥವಾ ಧಾನ್ಯಗಳ ತಿಂಡಿಯ ಜೊತೆಗೆ ಪಪ್ಪಾಯಿಯನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಕಣ್ಣಿನ ದೃಷ್ಟಿ ಹಾಗೂ ತ್ವಚೆಯ ಕಾಂತಿ

ಪಪ್ಪಾಯಿಯಲ್ಲಿರುವ ಕ್ಯಾರೊಟಿನಾಯ್ಡ್‌ಗಳು ದೇಹದಲ್ಲಿ ವಿಟಮಿನ್ ‘ಎ’ ಆಗಿ ಪರಿವರ್ತನೆಗೊಳ್ಳುವುದರಿಂದ ಕಣ್ಣಿನ ದೃಷ್ಟಿ ದೋಷಗಳನ್ನು ತಡೆಯಲು ನೆರವಾಗುತ್ತವೆ. ಟೊಮೆಟೊ ಮತ್ತು ಕ್ಯಾರೆಟ್‌ಗೆ ಹೋಲಿಸಿದರೆ ಪಪ್ಪಾಯಿಯಲ್ಲಿರುವ ಕ್ಯಾರೊಟಿನಾಯ್ಡ್‌ಗಳು ದೇಹಕ್ಕೆ ವೇಗವಾಗಿ ಹೀರಲ್ಪಡುತ್ತವೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಇದರ ಜೊತೆಗೆ, ಚರ್ಮದ ಆರೋಗ್ಯಕ್ಕೆ ಅಗತ್ಯವಿರುವ ಕೊಲಾಜೆನ್ ಉತ್ಪಾದನೆಗೆ ವಿಟಮಿನ್ ‘ಸಿ’ ಪ್ರೇರಣೆ ನೀಡಲಿದ್ದು, ತ್ವಚೆಯನ್ನು ಆರೋಗ್ಯವಾಗಿಡಲು ನೆರವಾಗುತ್ತದೆ.

ತೂಕ ನಿಯಂತ್ರಣಕ್ಕೆ ಸಹಕಾರಿ, ಹೊಟ್ಟೆಯ ಬೊಜ್ಜು ಕರಗಿಸುವುದಿಲ್ಲ!

ಪ್ರತಿ 100 ಗ್ರಾಂ ಪಪ್ಪಾಯಿಯಲ್ಲಿ ಕೇವಲ 43 ಕ್ಯಾಲೊರಿಗಳಿದ್ದು, ಕಡಿಮೆ ಕ್ಯಾಲೊರಿಯ ಆಹಾರವಾಗಿ ಇದು ತೂಕ ಇಳಿಸುವವರಿಗೆ ಉತ್ತಮ ಆಯ್ಕೆಯಾಗಿದೆ. ಆದರೆ ಪಪ್ಪಾಯಿ ತಿಂದ ತಕ್ಷಣ ಹೊಟ್ಟೆಯ ಬೊಜ್ಜು ತಾನಾಗಿಯೇ ಕರಗುತ್ತದೆ ಎಂಬುದು ತಪ್ಪು ಕಲ್ಪನೆ. ಕ್ಯಾಲೊರಿ ಅಧಿಕವಿರುವ ತಿಂಡಿಗಳ ಬದಲಿಗೆ ಇದನ್ನು ಸೇವಿಸಿದಾಗ ಮಾತ್ರ ತೂಕ ನಿಯಂತ್ರಣ ಸಾಧ್ಯ. ಇದಲ್ಲದೆ, ಜೀವಕೋಶಗಳ ಬೆಳವಣಿಗೆಗೆ ನೆರವಾಗುವ ಫೋಲೇಟ್ ಹಾಗೂ ಪೊಟ್ಯಾಸಿಯಮ್‌ನಂತಹ ಅಗತ್ಯ ಖನಿಜಾಂಶಗಳು ಇದರಲ್ಲಿ ಹೇರಳವಾಗಿವೆ.

ಖಾಲಿ ಹೊಟ್ಟೆಯಲ್ಲೇ ತಿನ್ನಬೇಕೆಂಬ ನಿಯಮವಿಲ್ಲ

ಪಪ್ಪಾಯಿಯ ಸಂಪೂರ್ಣ ಲಾಭ ಪಡೆಯಲು ಅದನ್ನು ಕಡ್ಡಾಯವಾಗಿ ಖಾಲಿ ಹೊಟ್ಟೆಯಲ್ಲೇ ತಿನ್ನಬೇಕು ಎಂದೇನಿಲ್ಲ. ಮೊಸರು, ಮೊಟ್ಟೆ ಅಥವಾ ಪ್ರೋಟೀನ್ ಯುಕ್ತ ಉಪಾಹಾರದೊಂದಿಗೆ ಇದನ್ನು ಸೇವಿಸುವುದು ಹೆಚ್ಚು ಆರೋಗ್ಯಕರ. ಹಣ್ಣಿನ ಜ್ಯೂಸ್ ಕುಡಿಯುವ ಬದಲು ಇಡೀ ಹಣ್ಣನ್ನು ಕತ್ತರಿಸಿ ತಿನ್ನುವುದರಿಂದ ನಾರಿನಂಶ ಪೂರ್ಣವಾಗಿ ದೊರೆಯುತ್ತದೆ. ಮಧುಮೇಹಿಗಳು ಅತಿಯಾಗಿ ತಿನ್ನದೆ ಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ. ಒಟ್ಟಾರೆಯಾಗಿ, ಸಮಯದ ಕಟ್ಟುಪಾಡಿಗಿಂತ ದಿನನಿತ್ಯದ ಸಮತೋಲಿತ ಆಹಾರದಲ್ಲಿ ಪಪ್ಪಾಯಿಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಲಾಭದಾಯಕವಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others