SIR ನೋಟಿಸ್ ಪಡೆದವರಿಗೆ ರಿಲೀಫ್: ಕಚೇರಿ ಅಲೆದಾಟ ರದ್ದು, ದಾಖಲೆ ಸಂಗ್ರಹಕ್ಕೆ BLO ನಿಯೋಜನೆ

ನವದೆಹಲಿ: ಚುನಾವಣಾ ಆಯೋಗದ ಆಡಳಿತ ವೈಖರಿ, ಆಂತರಿಕ ಸಂವಹನಗಳು ಹಾಗೂ ದೇಶಾದ್ಯಂತ ಜಾರಿಯಲ್ಲಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಾಗಿ ಎದ್ದಿರುವ ಚರ್ಚೆಗಳ ಬೆನ್ನಲ್ಲೇ, ಕೇಂದ್ರ ಚುನಾವಣಾ ಆಯೋಗದ ಮಹತ್ವದ ಸಭೆ ನವದೆಹಲಿಯ ನಿರ್ವಾಚನ ಸದನದಲ್ಲಿ ಶನಿವಾರ ಜರುಗಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಚುನಾವಣಾ ಆಯುಕ್ತರಾದ ಡಾ. ಎಸ್.ಎಸ್. ಸಂಧು ಮತ್ತು ಡಾ. ವಿವೇಕ್ ಜೋಶಿ ಅವರ ಸಮ್ಮುಖದಲ್ಲಿ ನಡೆದ ಸಭೆಯ ಬಳಿಕ, ಆಯೋಗವು ಸುದೀರ್ಘ ಪತ್ರಿಕಾ ಪ್ರಕಟಣೆ ಮೂಲಕ ಹಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದೆ.

ಮತದಾರರಿಗೆ ಬಿಗ್ ರಿಲೀಫ್: ಮನೆ ಬಾಗಿಲಲ್ಲೇ ದಾಖಲೆ ಸಂಗ್ರಹ

ಪ್ರಸ್ತುತ ಜಾರಿಯಲ್ಲಿರುವ ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ‘ಮ್ಯಾಪ್ ಆಗದ’ (Unmapped) ಹಾಗೂ ತಾರ್ಕಿಕ ತಪ್ಪುಗಳ ಹಿನ್ನೆಲೆಯಲ್ಲಿ ನೋಟಿಸ್ ಪಡೆದಿರುವ ಮತದಾರರಿಗೆ ಚುನಾವಣಾ ಆಯೋಗ ದೊಡ್ಡ ಸಮಾಧಾನ ನೀಡಿದೆ. ಅಂತಹ ನಾಗರಿಕರು ಚುನಾವಣಾ ನೋಂದಣಿ ಅಧಿಕಾರಿಗಳ (ಇಆರ್‌ಒ ಅಥವಾ ಎಇಆರ್‌ಒ) ಕಚೇರಿಗೆ ಅಲೆದಾಡುವ ಅಗತ್ಯವಿರುವುದಿಲ್ಲ. ಬದಲಾಗಿ, ಬೂತ್ ಮಟ್ಟದ ಅಧಿಕಾರಿಗಳೇ (ಬಿಎಲ್‌ಒ) ಅಂತಹವರ ಮನೆಗಳಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿ, ಅವುಗಳನ್ನು ‘ಇಸಿಐನೆಟ್’ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಿದ್ದಾರೆ. ಇಆರ್‌ಒ ನಿರ್ಧಾರದ ಮೇರೆಗೆ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ವಿಚಾರಣೆ ನಡೆಯಲಿದ್ದು, ಅದನ್ನೂ ಆನ್‌ಲೈನ್ ಮೂಲಕ ನಡೆಸಲು ಆದ್ಯತೆ ನೀಡಲಾಗುತ್ತದೆ. ಅಲ್ಲದೆ ಮತದಾರರು ತಮ್ಮ ಪರವಾಗಿ ಕುಟುಂಬದ ವಯಸ್ಕ ಸದಸ್ಯರೊಬ್ಬರನ್ನು ಅಧಿಕೃತವಾಗಿ ನಿಯೋಜಿಸಬಹುದಾಗಿದೆ. ಇದೇ ವೇಳೆ ರಾತ್ರಿ ಆಶ್ರಯ ತಾಣಗಳಲ್ಲಿರುವವರು, ಕಾರ್ಮಿಕರು, ಬಡವರು ಹಾಗೂ ನಿರಾಶ್ರಿತರಿಗಾಗಿ ವಿಶೇಷ ಸಹಾಯ ಕೇಂದ್ರ ಮತ್ತು ಶಿಬಿರಗಳನ್ನು ಆಯೋಜಿಸಲು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಫಾರ್ಮ್ 6 ಡಿಕ್ಲರೇಶನ್ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಎಸ್‌ಐಆರ್ ಸಂಬಂಧಿಸಿದ ಫಾರ್ಮ್-6 ರ ಡಿಕ್ಲರೇಶನ್ ಅನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಆಯೋಗ ತಿಳಿಸಿದೆ. ಎಸ್‌ಐಆರ್ ನಡೆಯದ ಅವಧಿಯಲ್ಲಿ ಮತದಾರರ ನೋಂದಣಿ ನಿಯಮಗಳು 1960ರ ಅಡಿಯಲ್ಲಿ ನಿಗದಿತ ನಮೂನೆಗಳೇ ಬಳಕೆಯಲ್ಲಿರಲಿವೆ. ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಈಗಾಗಲೇ 20 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪಟ್ಟಿಯಿಂದ ಹೊರಗುಳಿದ ಮತದಾರರು ಅಥವಾ ಹೊಸ ಮತದಾರರ ಸೇರ್ಪಡೆಗಾಗಿ ನಿರಂತರ ನವೀಕರಣ (Continuous Updation) ವ್ಯವಸ್ಥೆಯಡಿ ತಕ್ಷಣವೇ ವಿಶೇಷ ಅಭಿಯಾನ ನಡೆಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಆದೇಶಿಸಲಾಗಿದೆ. ಗೋವಾದಲ್ಲಿ ಹೊರಗುಳಿದಿದ್ದ 97 ಮತದಾರರ ಪೈಕಿ ಈಗಾಗಲೇ 81 ಮಂದಿ ಫಾರ್ಮ್-6 ಸಲ್ಲಿಸಿದ್ದಾರೆ ಎಂದು ಇಸಿಐ ಉಲ್ಲೇಖಿಸಿದೆ.

‘ಇಸಿಐನೆಟ್’ ಪಾರದರ್ಶಕತೆಗೆ ತಜ್ಞರ ಸಮಿತಿ ನೇಮಕ

ಕ್ಷೇತ್ರ ಮಟ್ಟದ ಅಧಿಕಾರಿಗಳು ತಮ್ಮ ಶಾಸನಬದ್ಧ ಅಧಿಕಾರ ವ್ಯಾಪ್ತಿಯಲ್ಲಿ ಇಸಿಐನೆಟ್ ಪೋರ್ಟಲ್ ಪ್ರವೇಶ ಹೊಂದಿದ್ದಾರೆ. ಈ ಡಿಜಿಟಲ್ ವೇದಿಕೆಯು ಕಾಯ್ದೆ ಮತ್ತು ನಿಯಮಾವಳಿಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಿರಿಯ ಉಪ ಚುನಾವಣಾ ಆಯುಕ್ತರ ನೇತೃತ್ವದಲ್ಲಿ, ಐಐಟಿ ಅಥವಾ ಟ್ರಿಪಲ್ ಐಟಿಯ ಸ್ವತಂತ್ರ ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಅಧ್ಯಯನ ನಡೆಸಿ ಆಯೋಗಕ್ಕೆ ವರದಿ ನೀಡಲಿದೆ. ಇನ್ನು ಮುಂದೆ ಐಟಿ ಮಾಡ್ಯೂಲ್‌ಗಳು ಮತ್ತು ಪೋರ್ಟಲ್‌ಗಳಿಗೆ ಸಂಬಂಧಿಸಿದ ಯಾವುದೇ ಹೊಸ ಬದಲಾವಣೆಗಳನ್ನು ಅಧಿಕಾರಿಗಳ ಸಮಿತಿ (COO) ಚರ್ಚಿಸಿದ ನಂತರವೇ ಆಯೋಗದ ಅನುಮೋದನೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಎಸ್‌ಐಆರ್ ಗಡುವು ವಿಸ್ತರಣೆ

ಮುಖ್ಯ ಚುನಾವಣಾಧಿಕಾರಿಗಳ ಕೋರಿಕೆಯನ್ನು ಪರಿಗಣಿಸಿ, ಆಕ್ಷೇಪಣೆ ಹಾಗೂ ಹಕ್ಕುಗಳ ಸಲ್ಲಿಕೆ ದಿನಾಂಕವನ್ನು ಆಯೋಗ ವಿಸ್ತರಿಸಿದೆ. ದೆಹಲಿಯಲ್ಲಿ ಆಕ್ಷೇಪಣೆ ಸಲ್ಲಿಸಲು 2026ರ ಅಕ್ಟೋಬರ್ 30ರವರೆಗೆ ಹಾಗೂ ಅವುಗಳ ಇತ್ಯರ್ಥಕ್ಕೆ ನವೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಅರ್ಜಿ ಸಲ್ಲಿಕೆಯ ಗಡುವನ್ನು ಅಕ್ಟೋಬರ್ 12ರವರೆಗೆ ಹಾಗೂ ಇತ್ಯರ್ಥದ ದಿನಾಂಕವನ್ನು ನವೆಂಬರ್ 10ರವರೆಗೆ ವಿಸ್ತರಿಸಲಾಗಿದೆ.

ಆಂತರಿಕ ವಿವಾದಕ್ಕೆ ಸ್ಪಷ್ಟನೆ ಮತ್ತು ಆಡಳಿತ ಸುಧಾರಣೆ

ಕ್ಯಾಬಿನೆಟ್ ಕಾರ್ಯದರ್ಶಿಗೆ ರವಾನಿಸಲಾದ ಪತ್ರದ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ ಆಯೋಗ, ಅದು ಯಾವುದೇ ನೀತಿ ಅಥವಾ ಐಟಿ ವಿಭಾಗದ ವಿಚಾರಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಡೆಪ್ಯುಟೇಶನ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯ ಕಾರ್ಯವೈಖರಿಗೆ ಸಂಬಂಧಿಸಿದ್ದಾಗಿದೆ ಎಂದಿದೆ. ಇಬ್ಬರು ಆಯುಕ್ತರ ಆದೇಶದ ಮೇರೆಗೆ ಕಾರ್ಯ ಮರುವಿಂಗಡಣೆ ಜಾರಿಯಾಗಿರಲಿಲ್ಲ ಮತ್ತು ಐಟಿ ವಿಭಾಗದ ಮೇಲ್ವಿಚಾರಣೆಯನ್ನು ಎಂದಿಗೂ ಹಿಂಪಡೆದಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, 2025ರ ಜೂನ್ 24ರಂದು ಬಿಹಾರದಿಂದ ಆರಂಭಿಸಿ ದೇಶಾದ್ಯಂತ ಹೊರಡಿಸಲಾದ ಎಸ್‌ಐಆರ್ ಆದೇಶ ಮತ್ತು ವೇಳಾಪಟ್ಟಿಗಳು ಆಯೋಗದ ಸರ್ವಾನುಮತದ ಒಪ್ಪಿಗೆಯಿಂದಲೇ ಹೊರಬಂದಿದ್ದು, ಸುಪ್ರೀಂ ಕೋರ್ಟ್ ಸಹ ಇದನ್ನು 2026ರ ಮೇ 27ರಂದು ಎತ್ತಿಹಿಡಿದಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ದಿನಗಳಲ್ಲಿ ಆಯೋಗದ ಎಲ್ಲಾ ಸಭೆಗಳ ಅಜೆಂಡಾವನ್ನು ಮೊದಲೇ ಹಂಚಿಕೊಳ್ಳುವುದು, ನಡಾವಳಿಗಳನ್ನು ದಾಖಲಿಸುವುದು, ವಿದೇಶ ಪ್ರವಾಸಗಳಿಗೆ ಆಯೋಗದ ಪೂರ್ವಾನುಮತಿ ಕಡ್ಡಾಯ ಹಾಗೂ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು (APAR) ಪ್ರತಿವರ್ಷ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸಬೇಕು ಎಂದು ಶಿಸ್ತು ಕ್ರಮಗಳನ್ನು ಜಾರಿಗೊಳಿಸಲಾಗಿದೆ

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others