ಜನವರಿ.1ರಿಂದ ‘SIM ಬೈಂಡಿಂಗ್’ ಜಾರಿ: ಈ ಫೋನ್‌ಗಳಲ್ಲಿ ವಾಟ್ಸಾಪ್, ಟೆಲಿಗ್ರಾಂ ಸೇವೆ ಸ್ಥಗಿತ!

ನವದೆಹಲಿ: ಆನ್‌ಲೈನ್ ಆರ್ಥಿಕ ವಂಚನೆ ಹಾಗೂ ಡಿಜಿಟಲ್ ದಂಧೆಗಳಿಗೆ ಕಡಿವಾಣ ಹಾಕುವ ಮಹತ್ವದ ಭಾಗವಾಗಿ, ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯು (DoT) ವಾಟ್ಸ್‌ಆ್ಯಪ್ (WhatsApp) ಹಾಗೂ ಟೆಲಿಗ್ರಾಂ (Telegram) ಸೇರಿದಂತೆ ಪ್ರಮುಖ ಮೆಸೇಜಿಂಗ್ ಆ್ಯಪ್‌ಗಳಿಗೆ ಕಡ್ಡಾಯ ‘ಸಿಮ್-ಬೈಂಡಿಂಗ್’ (SIM-binding) ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೆವೈಸಿ (KYC) ಪರಿಶೀಲನೆ ಪೂರ್ಣಗೊಂಡಿರುವ ಸಕ್ರಿಯ ಸಿಮ್ ಕಾರ್ಡ್‌ಗಳೊಂದಿಗೆ ಆ್ಯಪ್ ಖಾತೆಗಳನ್ನು ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2026ರ ಡಿಸೆಂಬರ್ 31ರ ಗಡುವು ನಿಗದಿಪಡಿಸಲಾಗಿದೆ.

ಮೊಬೈಲ್ ಸಂಖ್ಯೆ ಹಾಗೂ ಅದರ ಮೂಲಕ ನೋಂದಾಯಿಸಲಾದ ಮೆಸೇಜಿಂಗ್ ಖಾತೆಯ ನಡುವಿನ ಸಂಬಂಧವನ್ನು ತಾಂತ್ರಿಕವಾಗಿ ಕಡ್ಡಾಯಗೊಳಿಸಿ, ನಕಲಿ ಸಂಖ್ಯೆಗಳ ಮೂಲಕ ಸಾರ್ವಜನಿಕರನ್ನು ವಂಚಿಸುವ ಕೃತ್ಯಗಳನ್ನು ತಡೆಯುವುದು ಈ ನಿಯಮಾವಳಿಯ ಪ್ರಮುಖ ಗುರಿಯಾಗಿದೆ.

ಯಾರಿಗೆ ಇದರಿಂದ ಪ್ರಭಾವ ಬೀರಲಿದೆ?

ಸಾಮಾನ್ಯವಾಗಿ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೋಂದಾಯಿತ ಸಿಮ್ ಕಾರ್ಡ್ ಇಲ್ಲದೆಯೇ ಕೇವಲ ವೈ-ಫೈ (Wi-Fi) ಸಂಪರ್ಕದ ಮೂಲಕ ವಾಟ್ಸ್‌ಆ್ಯಪ್ ಅಥವಾ ಟೆಲಿಗ್ರಾಂ ಬಳಸುವ ಬಳಕೆದಾರರು ಇನ್ಮುಂದೆ ಲಾಗಿನ್ ಹಾಗೂ ಪ್ರವೇಶದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆ್ಯಂಡ್ರಾಯ್ಡ್ ಮತ್ತು ಐಫೋನ್ ಎರಡೂ ಮಾದರಿಯ ಡಿವೈಸ್‌ಗಳಿಗೆ ಈ ನಿಯಮಗಳು ಅನ್ವಯವಾಗಲಿವೆ.

ಈ ತಾಂತ್ರಿಕ ಬದಲಾವಣೆಗೆ ಅನುಗುಣವಾಗಿ ಆ್ಯಪಲ್ (Apple) ಸಂಸ್ಥೆಯು ತನ್ನ ಐಒಎಸ್ (iOS) ಸಾಫ್ಟ್‌ವೇರ್‌ನಲ್ಲಿ ಈಗಾಗಲೇ ಬದಲಾವಣೆ ತಂದಿದ್ದು, ಡಿವೈಸ್‌ನಲ್ಲಿ ಸಿಮ್ ಕಾರ್ಡ್ ಇರುವುದನ್ನು ಪತ್ತೆಹಚ್ಚಲು ಕಳೆದ ಸೆಪ್ಟೆಂಬರ್‌ನಲ್ಲೇ ಅಪ್‌ಡೇಟ್ ಬಿಡುಗಡೆ ಮಾಡಿದೆ. ಹೆಚ್ಚಾಗಿ ವಿದೇಶ ಪ್ರವಾಸ ಮಾಡುವವರು, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಡಿವೈಸ್‌ಗಳಲ್ಲಿ ಖಾತೆ ನಿರ್ವಹಿಸುವವರು ಹಾಗೂ ಕೇವಲ ವೈ-ಫೈ ಆಧಾರಿತವಾಗಿ ಎರಡನೇ ಫೋನ್‌ನಲ್ಲಿ ಆ್ಯಪ್ ಬಳಸುವವರು ಈ ಹೊಸ ನಿಯಮಾವಳಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.

ನಿಯಮಾವಳಿಗಳಲ್ಲಿ ಮಾರ್ಪಾಡು

ದೂರಸಂಪರ್ಕ ಇಲಾಖೆಯು 2025ರ ನವೆಂಬರ್ 28 ರಂದು ಮೊದಲ ಬಾರಿಗೆ ಈ ಆದೇಶವನ್ನು ಹೊರಡಿಸಿತ್ತು. ಆರಂಭಿಕ ಕರಡಿನಲ್ಲಿ, ಕಂಪ್ಯೂಟರ್ ಅಥವಾ ಬ್ರೌಸರ್‌ನಲ್ಲಿ ಬಳಸುವ ವಾಟ್ಸ್‌ಆ್ಯಪ್ ವೆಬ್ (WhatsApp Web) ಖಾತೆಗಳು ಪ್ರತಿ 6 ಗಂಟೆಗೊಮ್ಮೆ ಸ್ವಯಂಚಾಲಿತವಾಗಿ (Auto-logout) ಲಾಗೌಟ್ ಆಗಬೇಕು ಎಂಬ ನಿಯಮವನ್ನು ಪ್ರಸ್ತಾಪಿಸಲಾಗಿತ್ತು. ಆದರೆ, ಸಾರ್ವಜನಿಕರ ಮತ್ತು ತಜ್ಞರ ಸಲಹೆಯ ಮೇರೆಗೆ ಈ 6 ಗಂಟೆಗಳ ಲಾಗೌಟ್ ನಿಯಮವನ್ನು ಸರ್ಕಾರ ಹಿಂಪಡೆದಿದೆ. ಅದರ ಬದಲಿಗೆ, ಶಂಕಾಸ್ಪದ ಚಟುವಟಿಕೆಗಳು ಅಥವಾ ವಂಚನೆಯ ಲಕ್ಷಣಗಳು ಕಂಡುಬಂದಾಗ ಮಾತ್ರ ಖಾತೆಯನ್ನು ತಕ್ಷಣ ರದ್ದುಗೊಳಿಸುವ/ಲಾಗೌಟ್ ಮಾಡುವ ಅಪಾಯ ಆಧಾರಿತ (Risk-based) ನಿಯಮವನ್ನು ಜಾರಿಗೆ ತರಲಾಗಿದೆ. ಆದಾಗ್ಯೂ, ಸ್ಮಾರ್ಟ್‌ಫೋನ್‌ನಲ್ಲಿ ಸಿಮ್-ಬೈಂಡಿಂಗ್ ಅಳವಡಿಕೆಯ ನಿಯಮವು ಬದಲಾಗದೆ ಮುಂದುವರಿದಿದೆ.

ಎಲ್ಲಾ ಆ್ಯಪ್‌ಗಳಿಗೂ ಇದು ಕಡ್ಡಾಯವೇ?

ದೂರಸಂಪರ್ಕ ಇಲಾಖೆಯ ಈ ಆದೇಶವು ಪ್ರಮುಖವಾಗಿ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಸೇವೆಗಳನ್ನು ಒಳಗೊಂಡಿದೆ. ಆದರೆ ಸ್ನ್ಯಾಪ್‌ಚಾಟ್‌ಗೆ (Snapchat) ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎನ್ನಲಾಗಿದೆ. ಮತ್ತೊಂದೆಡೆ, ಸಿಗ್ನಲ್ (Signal) ಮೆಸೆಂಜರ್ ಸರ್ಕಾರದ ನೋಟಿಸ್‌ಗೆ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others