170 ಜನರ ಜೀವ ಉಳಿಸಿದ ಭಾರತೀಯ ಪೈಲಟ್: ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಮೋದಿ ಮೆಚ್ಚುಗೆ

ನವದೆಹಲಿ: ನಡುಆಕಾಶದಲ್ಲಿ ಸಂಭವಿಸಬಹುದಾಗಿದ್ದ ಭೀಕರ ವಿಮಾನ ದುರಂತ ಹಾಗೂ ಸಂಭಾವ್ಯ ಉಗ್ರ ಕೃತ್ಯವನ್ನು ಅತ್ಯಂತ ಸಾಹಸದಿಂದ ಹಿಮ್ಮೆಟ್ಟಿಸಿ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವೀಡಿಯೊ ಸಂವಾದ ನಡೆಸಿದ್ದಾರೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಅವರ ಸಮಯಪ್ರಜ್ಞೆ ಮತ್ತು ಅದಮ್ಯ ಧೈರ್ಯವನ್ನು ಪ್ರಧಾನಿ ಕೊಂಡಾಡಿದ್ದು, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಇಡೀ ದೇಶಕ್ಕೆ ನಿಮ್ಮ ಬಗ್ಗೆ ಹೆಮ್ಮೆಯಿದೆ: ಪ್ರಧಾನಿ ಮೋದಿ

ಸಂವಾದದ ವೇಳೆ ಮಾತನಾಡಿದ ಪ್ರಧಾನಿ ಮೋದಿ, “ಕ್ಷಣಾರ್ಧದಲ್ಲಿ ನೀವು ಕೈಗೊಂಡ ನಿರ್ಧಾರಗಳು ನೂರಾರು ಅಮೂಲ್ಯ ಜೀವಗಳನ್ನು ಉಳಿಸಿವೆ. ನಾವು ಜೀವ ತೆಗೆಯುವವರಲ್ಲ, ಬದಲಾಗಿ ಜೀವ ಉಳಿಸುವವರು ಎಂಬುದನ್ನು ಭಾರತೀಯರಾದ ನಾವು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿದ್ದೀರಿ. ನಿಮ್ಮ ಈ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತದೆ” ಎಂದು ಪ್ರಶಂಸಿಸಿದರು. ಅಲ್ಲದೆ, ಪೈಲಟ್ ಅವರ ತಾಯಿ ಗೀತಾ ಬೆನ್ ಅವರ ಸಂಸ್ಕಾರವನ್ನು ಸ್ಮರಿಸಿದ ಪ್ರಧಾನಿ, ಅವರು ತಮ್ಮ ಮಗನಿಗೆ ಭಗವದ್ಗೀತೆಯ ಮೌಲ್ಯಗಳನ್ನು ಧಾರೆ ಎರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿ ನನ್ನ ಆದರ್ಶ ವ್ಯಕ್ತಿ: ಭಾವುಕರಾದ ಕ್ಯಾಪ್ಟನ್ ಸ್ಮಿತ್

ಪ್ರಧಾನಿಯವರ ಜೊತೆಗಿನ ಮಾತುಕತೆಯ ವೇಳೆ ಕ್ಯಾಪ್ಟನ್ ಸ್ಮಿತ್ ಭಾವುಕರಾದರು. ಪ್ರಧಾನಿ ಮೋದಿಯವರು ತಮ್ಮ ಜೀವಮಾನದ ದೊಡ್ಡ ಆದರ್ಶ ವ್ಯಕ್ತಿ ಎಂದ ಅವರು, ಈ ಕರೆ ತಮಗೆ ಅತ್ಯಂತ ಹೆಮ್ಮೆಯ ಮತ್ತು ಅವಿಸ್ಮರಣೀಯ ಕ್ಷಣ ಎಂದು ಹಂಚಿಕೊಂಡರು. ಸಂಕಷ್ಟದ ಸಂದರ್ಭಗಳಲ್ಲಿ ತಾನು ಸದಾ ಹನುಮಾನ್ ಚಾಲೀಸಾವನ್ನು ಜಪಿಸುವುದಾಗಿ ತಿಳಿಸಿದ ಸ್ಮಿತ್, ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್ ಕೊಡಲಿಯಿಂದ ಹಲ್ಲೆ ನಡೆಸಿದ ಆ ಭಯಾನಕ ಕ್ಷಣದಲ್ಲೂ ತಾವು ಹನುಮಾನ್ ಚಾಲೀಸಾವನ್ನೇ ಪಠಿಸುತ್ತಿದ್ದೆ ಎಂದು ಪ್ರಧಾನಿಗೆ ವಿವರಿಸಿದರು.

ಆಕಾಶದಲ್ಲಿ ನಡೆದಿದ್ದೇನು? ನಡುಗಿಸಿದ ಆ ಕ್ಷಣಗಳು

ಫ್ಲೈದುಬೈ ಸಂಸ್ಥೆಯ ‘ಎಫ್‌ಝಡ್ 1073’ ವಿಮಾನವು ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌‌ಗೆ 170ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಹಾರಾಟ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಮಾರ್ಗಮಧ್ಯೆ ವಿಮಾನವನ್ನು ಹೊಡೆದುರುಳಿಸಲು ಯತ್ನಿಸಿದ ಓಮನ್ ಮೂಲದ ಸಹ-ಪೈಲಟ್, ಮುಖ್ಯ ಪೈಲಟ್ ಸ್ಮಿತ್ ಮೇಲೆ ಅಗ್ನಿಶಾಮಕ ಕೊಡಲಿಯಿಂದ (ಫೈರ್ ಆಕ್ಸ್) ಭೀಕರ ಹಲ್ಲೆ ನಡೆಸಿದ್ದನು. ಆ ಹೊತ್ತಿನಲ್ಲಿ ವಿಮಾನವು ಸೌದಿ ಅರೇಬಿಯಾದ ಆಗಸದಲ್ಲಿ ಕೇವಲ 30 ಸೆಕೆಂಡುಗಳಲ್ಲಿ 14,000 ಅಡಿಗಳಷ್ಟು ಕೆಳಗೆ ಕುಸಿದಿತ್ತು.

ಗಾಯಗೊಂಡರೂ ಧೃತಿಗೆಡದೆ ಬಾಗಿಲು ತೆರೆದ ಪೈಲಟ್

ಮಾರಣಾಂತಿಕ ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಎದೆಗುಂದದ ಕ್ಯಾಪ್ಟನ್ ಸ್ಮಿತ್, ಹೇಗೋ ಕಾಕ್‌ಪಿಟ್‌ನ ಬಾಗಿಲನ್ನು ತೆರೆದು ಪ್ರಯಾಣಿಕರ ಹಾಗೂ ಸಿಬ್ಬಂದಿಯ ಸಹಾಯ ಕೋರಿದರು. ತಕ್ಷಣವೇ ಎಚ್ಚೆತ್ತ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಆಕ್ರಮಣಕಾರ ಸಹ-ಪೈಲಟ್‌ನನ್ನು ಹಿಡಿದು ನಿಯಂತ್ರಿಸಿದರು. ಬಳಿಕ ವಿಮಾನದಲ್ಲಿದ್ದ ಮೀಸಲು ಸಿಬ್ಬಂದಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಿದರು.

ಮುಂದುವರಿದ ಚಿಕಿತ್ಸೆ ಮತ್ತು ತನಿಖೆ

ಘಟನೆಯ ಬಳಿಕ ತಬೂಕ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಕ್ಯಾಪ್ಟನ್ ಸ್ಮಿತ್ ಅವರನ್ನು ಹೆಚ್ಚಿನ ವೈದ್ಯಕೀಯ ಆರೈಕೆಗಾಗಿ ಅಬುಧಾಬಿಗೆ ಸ್ಥಳಾಂತರಿಸಲಾಗಿದೆ. ದಾಳಿ ನಡೆಸಿದ ಸಹ-ಪೈಲಟ್‌ನನ್ನು ಸೌದಿ ಅಧಿಕಾರಿಗಳು ಯುಎಇ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸೌದಿ ಮತ್ತು ಯುಎಇ ಜಂಟಿಯಾಗಿ ತನಿಖೆ ಚುರುಕುಗೊಳಿಸಿವೆ. ಜಾಗತಿಕ ಮಟ್ಟದಲ್ಲೂ ಭಾರತೀಯ ಪೈಲಟ್ ಸ್ಮಿತ್ ಅವರ ಶೌರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others