ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ: ಶೇ 74ರಷ್ಟು ಹಾಜರು

ಬೆಂಗಳೂರು: ಉಳಿಕೆ ಮೂಲ ವೃಂದದ ಒಟ್ಟು 505 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಲಿಖಿತ ಪರೀಕ್ಷೆ ಯಾವುದೇ ಸಮಸ್ಯೆ ಇಲ್ಲದೆ ಸುಸೂತ್ರವಾಗಿ ನಡೆಯಿತು. ಒಟ್ಟು‌ ಶೇ 74 ರಷ್ಟು ಮಂದಿ ಪರೀಕ್ಷೆ ಗೆ ಹಾಜರಾಗಿದ್ದರು.

ಅರ್ಜಿ ಸಲ್ಲಿಸಿದ್ದ ಒಟ್ಟು 4,11,656 ಅಭ್ಯರ್ಥಿಗಳ ಪೈಕಿ ಬೆಳಗಿನ ಸಾಮಾನ್ಯ ಜ್ಞಾನ ಪತ್ರಿಕೆಯನ್ನು 3,04,096 (ಶೇ 74ರಷ್ಟು) ಮಂದಿ ಬರೆದರು. ಮಧ್ಯಾಹ್ಮದ ನಿರ್ದಿಷ್ಟ ಪತ್ರಿಕೆಯನ್ನು 3,03,058 (ಶೇ 74ರಷ್ಟು) ಮಂದಿ ಬರೆದಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಹೇಳಿದರು.

ರಾಜ್ಯದ ಒಟ್ಟು 1,037 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಧಾರವಾಡದಲ್ಲಿ ಅತಿ ಹೆಚ್ಚು ಅಂದರೆ 60 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಬಿಗಿ ನಿಗಾ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ತೊಂದರೆಗಳು ಎದುರಾಗಿಲ್ಲ ಎಂದು ಅವರು ತಿಳಿಸಿದರು.

ಲಿಖಿತ ಪರೀಕ್ಷೆ ಮುಗಿದು, ಒಎಂಆರ್ ಉತ್ತರ ಪತ್ರಿಕೆಗಳು ತಲುಪಿದ ಕ್ಷಣದಿಂದಲೇ ಅವುಗಳನ್ನು ಸ್ಕ್ಯಾನ್ ಮಾಡಿ‌, ಕೆಇಎ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವ ಕೆಲಸ‌ ಆರಂಭಿಸಲಾಯತು. ಕಲ್ಬುರ್ಗಿ, ರಾಯಚೂರು, ಧಾರವಾಡ, ಬಳ್ಳಾರಿ, ವಿಜಯಪುರ, ದಾವಣಗೆರೆ ಮತ್ತು ‌ಮೈಸೂರಿನಲ್ಲಿ ಸ್ಕ್ಯಾನಿಂಗ್ ಕೇಂದ್ರಗಳನ್ನು ತೆರೆದಿದ್ದು, ಸ್ಥಳೀಯ ಜಿಲ್ಲಾಧಿಕಾರಿಗಳ‌ ನೇತೃತ್ವದಲ್ಲಿ ಸ್ಕ್ಯಾನಿಂಗ್ ನಡೆಯುತ್ತಿದೆ. ಬೆಂಗಳೂರಿನದು ಕೆಇಎ ಕಚೇರಿಯಲ್ಲಿ ನಡೆಯುತ್ತಿದೆ. ‌ನಾಳೆ ಸಂಜೆ ವೇಳೆಗೆ ಎಲ್ಲ ಅಭ್ಯರ್ಥಿಗಳ ಒಎಂಆರ್ ಪ್ರತಿಗಳು ಕೆಇಎ ವೆಬ್ ಸೈಟ್ ನಲ್ಲಿ ಲಭ್ಯ ಇರಲಿವೆ ಎಂದು ಅವರು ಹೇಳಿದರು.

Share it :

Leave a Reply

Your email address will not be published. Required fields are marked *