ನವದೆಹಲಿ: ವಿಮಾನದ ಕಾರಿಡಾರ್ನಲ್ಲಿ (Aisle) ಗುಂಪುಗೂಡಿ ನಿಲ್ಲುವುದು, ಸಾಲು ಸಾಲು ಸೀಟುಗಳ ನಡುವೆ ಪರಸ್ಪರ ಊಟದ ಡಬ್ಬಿಗಳನ್ನು ಕೈಬದಲಾಯಿಸುವುದು, ಜೋರಾಗಿ ಕೂಗಾಡುತ್ತಾ ಹರಟೆ ಹೊಡೆಯುವುದು… ಸಾಮಾನ್ಯವಾಗಿ ಲೋಕಲ್ ರೈಲುಗಳಲ್ಲಿ ಕಂಡುಬರುವ ಇಂತಹ ದೃಶ್ಯವೊಂದು ಇಂಡಿಗೋ (IndiGo) ವಿಮಾನದಲ್ಲಿ ನಡೆದಿದ್ದು, ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಥಾಯ್ಲೆಂಡ್ನ ಕ್ರಾಬಿಯಿಂದ (Krabi) ನವದೆಹಲಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ. ನೀರಜ್ ಪ್ರಿಯಾಂಕಾ ಚೌಧರಿ ಎಂಬ ಸಹ-ಪ್ರಯಾಣಿಕರು ಈ ದೃಶ್ಯವನ್ನು ಸೆರೆಹಿಡಿದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೊದಲ 1 ರಿಂದ 5 ಸಾಲುಗಳಲ್ಲಿ ಕುಳಿತಿದ್ದ ಪ್ರಯಾಣಿಕರ ಗುಂಪೊಂದು ಈ ರೀತಿಯ ಗದ್ದಲ ಸೃಷ್ಟಿಸಿ ಉಳಿದ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದೆ.
ಕ್ಯಾಬಿನ್ ಸಿಬ್ಬಂದಿ ಮನವಿಗೂ ಕ್ಯಾರೆ ಎನ್ನದ ಪ್ರಯಾಣಿಕರು
ವಿಮಾನವು ಗಾಳಿಯ ಒತ್ತಡಕ್ಕೆ ಸಿಲುಕಿ ಅಲುಗಾಡುತ್ತಿದ್ದ (Turbulence) ಕಾರಣ ‘ಸೀಟ್ಬೆಲ್ಟ್ ಧರಿಸಿ’ (Seatbelt sign on) ಎಂಬ ಸೂಚನಾ ಫಲಕ ಬೆಳಗುತ್ತಿದ್ದರೂ ಈ ಪ್ರಯಾಣಿಕರು ಸೀಟಿನಿಂದ ಎದ್ದು ನಿಂತು ಓಡಾಡುತ್ತಿದ್ದರು. ಕ್ಯಾಬಿನ್ ಸಿಬ್ಬಂದಿ ಪದೇಪದೇ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರೂ, ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
“ನಮ್ಮ ವಿಮಾನದಲ್ಲಿ ತೀರಾ ಅಸ್ತವ್ಯಸ್ತ ವಾತಾವರಣವಿತ್ತು. ಪ್ರಯಾಣಿಕರ ಗುಂಪು ಜೋರಾಗಿ ಕೂಗಾಡುತ್ತಾ, ಆಹಾರ ಹಂಚಿಕೊಳ್ಳುತ್ತಾ, ಸಿಬ್ಬಂದಿಯ ಸುರಕ್ಷತಾ ಸೂಚನೆಗಳನ್ನು ಗಾಳಿಗೆ ತೂರಿದೆ. ಕನಿಷ್ಠ ನಾಗರಿಕ ಪ್ರಜ್ಞೆ ಮತ್ತು ಸಹ-ಪ್ರಯಾಣಿಕರಿಗೆ ಗೌರವ ನೀಡುವುದು ಮುಖ್ಯ” ಎಂದು ನೀರಜ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪರಿಸ್ಥಿತಿ ನಿಯಂತ್ರಿಸಲು ಅಸಹಾಯಕರಾಗಿದ್ದ ಗಗನಸಖಿಯೊಬ್ಬರು, “ಸರ್, ಇವರು ನಾವು ಹೇಳುವುದನ್ನು ಕೇಳುತ್ತಲೇ ಇಲ್ಲ” ಎಂದು ಅಳಲು ತೋಡಿಕೊಂಡಿದ್ದಾಗಿ ನೀರಜ್ ತಿಳಿಸಿದ್ದಾರೆ.
ನೆಟ್ಟಿಗರ ಆಕ್ರೋಶ: ‘ನೋ-ಫ್ಲೈ ಲಿಸ್ಟ್’ಗೆ ಸೇರಿಸಲು ಆಗ್ರಹ
ಈ ವಿಡಿಯೋ ಹೊರಬರುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿಮಾನವನ್ನು ‘ಲೋಕಲ್ ಟ್ರೇನ್’ ರೀತಿಯಲ್ಲಿ ಪರಿವರ್ತಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ವಿಮಾನ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಇತರರಿಗೆ ತೊಂದರೆ ನೀಡುವ ಇಂತಹ ಬೇಜವಾಬ್ದಾರಿ ಪ್ರಯಾಣಿಕರನ್ನು ತಕ್ಷಣವೇ ‘ನೋ-ಫ್ಲೈ ಲಿಸ್ಟ್’ಗೆ (No-fly list) ಸೇರಿಸಿ ವಿಮಾನ ಪ್ರಯಾಣದಿಂದ ನಿಷೇಧಿಸಬೇಕು ಎಂದು ಹಲವರು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ಒತ್ತಾಯಿಸಿದ್ದಾರೆ.
ಆದರೆ, ಈ ಘಟನೆ ಹಾಗೂ ವೈರಲ್ ವಿಡಿಯೋ ಕುರಿತು ಇಂಡಿಗೋ ಸಂಸ್ಥೆಯು ಸದ್ಯಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.




