ಸರ್ಕಾರಿ ಪ್ರಾಥಮಿಕ ಶಿಕ್ಷಕರಿಗೆ ಹಳೇ ಪಿಂಚಣಿ (OPS) ಯೋಜನೆ: ಅರ್ಹರ ಮಾಹಿತಿ ತುರ್ತಾಗಿ ಸಲ್ಲಿಸಲು ಡಿಡಿಪಿಐಗಳಿಗೆ ಆದೇಶ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ(Government primary school teachers) ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಯ (Old Pension Scheme- OPS) ಪ್ರಯೋಜನ ಕಲ್ಪಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. 2006ಕ್ಕಿಂತ ಮೊದಲಿನ ಅಧಿಸೂಚನೆ ಅನ್ವಯ ನೇಮಕಗೊಂಡು, ಇನ್ನೂ ಈ ಸೌಲಭ್ಯಕ್ಕೆ ಒಳಪಡದೇ ಉಳಿದಿರುವ ಅರ್ಹ ಶಿಕ್ಷಕರ ಮಾಹಿತಿಯನ್ನು ಸೂಕ್ತ ಶಿಫಾರಸಿನೊಂದಿಗೆ ತಕ್ಷಣವೇ ರವಾನಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರಿಗೆ (ಡಿಡಿಪಿಐ-ಆಡಳಿತ) ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯ ಆದೇಶ ನೀಡಿದೆ.

2006 ಪೂರ್ವ ಅಧಿಸೂಚನೆ ಶಿಕ್ಷಕರಿಗೆ ಅನ್ವಯ

2005-06 ಹಾಗೂ 2006-07ನೇ ಶೈಕ್ಷಣಿಕ ಸಾಲಿನಲ್ಲಿ, ಅಂದರೆ 2006ರ ಏಪ್ರಿಲ್ 1ರ ಪೂರ್ವದಲ್ಲಿ ಹೊರಡಿಸಲಾದ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾಗಿ, ಆ ದಿನಾಂಕದಂದು ಅಥವಾ ತದನಂತರ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರನ್ನು ಹಳೇ ಪಿಂಚಣಿ ವ್ಯವಸ್ಥೆಗೆ ಸೇರಿಸಲು ಈಗಾಗಲೇ ನಿಯಮಾವಳಿ ರೂಪಿಸಲಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಸಮ್ಮತಿಯ ಮೇರೆಗೆ ಸರ್ಕಾರವು ಹಂತ-ಹಂತವಾಗಿ ಆದೇಶಗಳನ್ನು ಹೊರಡಿಸುತ್ತಾ ಬಂದಿದೆ.

ನಿಲ್ಲದ ಪ್ರಸ್ತಾವನೆಗಳ ಸಲ್ಲಿಕೆ; ಗೊಂದಲಕ್ಕೆ ತೆರೆ ಎಳೆಯಲು ಕ್ರಮ

ಸರ್ಕಾರದ ಮಟ್ಟದಲ್ಲಿ ಈ ಕುರಿತು ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ, ರಾಜ್ಯದ ಹಲವು ಜಿಲ್ಲೆಗಳಿಂದ ಇಂದಿಗೂ ಶಿಕ್ಷಕರ ಪ್ರಸ್ತಾವನೆಗಳು ಕಚೇರಿಗೆ ಬರುತ್ತಲೇ ಇವೆ. ಇದರಿಂದಾಗಿ ಅರ್ಹ ಶಿಕ್ಷಕರು ವಂಚಿತರಾಗುವುದನ್ನು ತಪ್ಪಿಸಲು ಮತ್ತು ಇಡೀ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಇಲಾಖೆ ಮುಂದಾಗಿದೆ.

ವಿಳಂಬವಿಲ್ಲದೆ ಪೂರ್ಣ ವಿವರ ನೀಡಲು ಸೂಚನೆ

ತಮ್ಮ ವ್ಯಾಪ್ತಿಯಲ್ಲಿ ಇಂತಹ ಮಾನದಂಡಗಳಿಗೆ ಒಳಪಡುವ ಯಾವುದೇ ಅರ್ಹ ಶಿಕ್ಷಕರು ಬಾಕಿ ಉಳಿದಿದ್ದರೆ, ಅಂತಹವರ ಸಮಗ್ರ ವಿವರಗಳನ್ನು ಕಲೆಹಾಕಿ, ಅಗತ್ಯ ದಾಖಲೆಗಳೊಂದಿಗೆ ಸೂಕ್ತ ಶಿಫಾರಸು ಪತ್ರವನ್ನು ಲಗತ್ತಿಸಿ ವಿಳಂಬವಿಲ್ಲದೆ ಕೇಂದ್ರ ಕಚೇರಿಗೆ ತಲುಪಿಸಬೇಕು ಎಂದು ಸೂಚನಾ ಪತ್ರದಲ್ಲಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ

Share it :

Leave a Reply

Your email address will not be published. Required fields are marked *