ಮೈಸೂರು: ಅಂಬಾರಿ ಆನೆ ಯಾವುದು ಎಂದು ಕಾನೂನು ಪ್ರಕಾರ ಅವರಿಗೆ ಹೇಳುವ ಅವಶ್ಯಕತೆ ಇಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಅವರೇನು ಸರ್ಕಾರಕ್ಕೆ ಪತ್ರ ಬರೆದಿಲ್ಲ. ಅಂಬಾರಿ ಆನೆ ಯಾವುದು ಎಂದು ಕಾನೂನು ಪ್ರಕಾರ ಅವರಿಗೆ ಹೇಳುವ ಅವಶ್ಯಕತೆ ಇಲ್ಲ. ಅಂಬಾರಿ ಆನೆ ತೀರ್ಮಾನ ಆಗಿದ್ದೇ ಕೊನೆ ಘಳಿಗೆಯಲ್ಲಿ. ಮೊದಲು ಮಹೇಂದ್ರ ಆಮೇಲೆ ಧನಂಜಯ ಎಂದರು, ಆಮೇಲೆ ಪ್ರಶಾಂತ ಎಂದರು. ಇಲ್ಲೇ ಸ್ವಲ್ಪ ಗೊಂದಲ ಇತ್ತು, ಹೀಗಾಗಿ ಆಯ್ಕೆ ತಡವಾಗಿದೆ. ಅವರಿಗೆ ಅಂಬಾರಿ ಆನೆ ಯಾವುದು ಎಂಬುದನ್ನು ಹೇಳುವ ಅಗತ್ಯ ಇಲ್ಲ.
ಜಟ್ಟಿ ಕಾಳಗ ರದ್ದಾದ ವಿಚಾರವಾಗಿ, ಪ್ರಮೋದಾದೇವಿಯವರು ಪತ್ರದಲ್ಲಿ ಉಲ್ಲೇಖ ಮಾಡಿರುವುದು ಒಂದು. ಪೊಲೀಸರು ಹೇಳುತ್ತಿರುವುದು ಒಂದು. ಜಟ್ಟಿಗಳ ತಡವಾಗಿ ಬಂದರೂ ನಮ್ಮದೇನು ತೊಂದರೆ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೇ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಎಲ್ಲಿ ತಪ್ಪಾಗಿದೆ ಎಂಬುದನ್ನು ನೋಡುತ್ತಿದ್ದೇವೆ ಎಂದರು.
ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು, ಅರಮನೆ ಸರ್ಕಾರದ್ದು, ಅವರಿಗೆ ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ ಅಷ್ಟೇ. ಅಗತ್ಯವಿದ್ದರೆ ನಾವು ಕೆಲವರನ್ನ ಸರ್ಕಾರದಿಂದ ಅವರ ಬಳಿಗೆ ಕಳಿಹಿಸುತ್ತೇವೆ. ಏನು ಸಮಸ್ಯೆಯಾಗಿದೆ ಎಂಬುದನ್ನ ಬೇಕಾದರೆ ಚರ್ಚೆ ಮಾಡುತ್ತೇವೆ. ಅವರು ಹೇಳಿರುವ ಸಮಸ್ಯೆ ಬಗೆಹರಿಸುತ್ತೇವೆ. ಆದರೆ ಅವರು ಹೇಳಿರುವುದನ್ನೆಲ್ಲ ಒಪ್ಪಲು ಆಗುವುದಿಲ್ಲ. ಅವರು ಹೇಳಿದ ರೀತಿ 7 ದಿನ ದಸರಾ ಮಾಡಲು ಸಾಧ್ಯವಿಲ್ಲ. ದಸರಾ ಸರ್ಕಾರದ್ದಲ್ಲ ಎಂಬ ಪದ ಬಳಕೆಯೂ ಸರಿಯಲ್ಲ. ಸರ್ಕಾರದ ದಸರಾಕ್ಕೂ ಇತಿಹಾಸ ಇದೆ. ಅದನ್ನ ದಸರಾ ಅಲ್ಲ ಎಂಬುದನ್ನ ನಾವು ಒಪ್ಪುವುದಿಲ್ಲ.
ಪ್ರಮೋದಾದೇವಿ ಒಡೆಯರ್ ಅವರು ಮಾಧ್ಯಮಗಳಿಗೆ ಬರೆದ ಪತ್ರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಅಂಬಾರಿಯನ್ನು ನಾವು ಉಚಿತವಾಗಿ ಪಡೆಯುತ್ತಿಲ್ಲ. ಅಂಬಾರಿಗೂ (Ambari) ಸರ್ಕಾರ ದುಡ್ಡು ಕೊಡುತ್ತದೆ. ಏನಾದರೂ ಸಮಸ್ಯೆ ಇದ್ದಿದ್ದರೆ, ಸರ್ಕಾರಕ್ಕೆ ನೇರವಾಗಿ ಹೇಳಬಹುದಿತ್ತು. ನಾವು ನಿರಂತರವಾಗಿ ಅವರ ಜೊತೆಯಲ್ಲಿ ಸಂಪರ್ಕದಲ್ಲಿದ್ದೆವು. ನಮ್ಮ ಗಮನಕ್ಕೆ ಏನೂ ತಂದಿಲ್ಲ. ಏಕಾಏಕಿ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.





