ಭಾರತೀಯರು ‘ಶಾಂತಿಪ್ರಿಯ’ ಸಮುದಾಯವಾಗಿದ್ದು, ಅವರು ‘ರಸ್ತೆಗಿಳಿದು ಸಮಾಜಕ್ಕೆ ತೊಂದರೆ ಉಂಟುಮಾಡುವುದಿಲ್ಲ’ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಫ್ರಾನ್ಸ್, ಇಟಲಿ ಮತ್ತು ಯುರೋಪಿನ ಇತರ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಬರ್ಲಿನ್ನಲ್ಲಿ ಗೋಯಲ್ ಈ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲೂ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.ಬರ್ಲಿನ್ನಲ್ಲಿ ಭಾರತೀಯ ವಲಸಿಗರೊಂದಿಗಿನ ಸಂವಾದದಲ್ಲಿ ಮಾತನಾಡಿದ ಗೋಯಲ್, ವಿದೇಶದಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರು ಮಾರ್ಗದರ್ಶನ, ಡಿಜಿಟಲ್ ತರಬೇತಿ ಮತ್ತು ವೃತ್ತಿ ಮಾರ್ಗದರ್ಶನದ ಮೂಲಕ ಭಾರತದಲ್ಲಿರುವ ಮಕ್ಕಳಿಗೆ ಅವಕಾಶಗಳನ್ನು ವಿಸ್ತರಿಸಲು ಸಹಾಯ ಮಾಡಬಹುದು ಎಂದು ಹೇಳಿದರು.
ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ಕೈಗಾರಿಕಾ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ, ಕೇಂದ್ರ ಸಚಿವರು ಅಕ್ಟೋಬರ್ 22 ರಿಂದ 24ರವರೆಗೆ ಜರ್ಮನಿಗೆ ಅಧಿಕೃತ ಭೇಟಿ ನೀಡಿದ್ದರು.
ಫ್ರಾನ್ಸ್ನಲ್ಲಿ, ಜೀವನ ವೆಚ್ಚ ಏರಿಕೆ, ವೇತನಗಳು ಮತ್ತು ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಯುವಜನರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ರಾಯಿಟರ್ಸ್ ವರದಿ ಪ್ರಕಾರ, 70,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 1,314 ಜನರನ್ನು ಬಂಧಿಸಲಾಗಿದೆ; ಅಲ್ಲದೆ, ಸಂಘರ್ಷದ ವೇಳೆ ಸುಮಾರು 50 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಇದಲ್ಲದೆ, ಫ್ರೆಂಚ್ ಆಂತರಿಕ ಸಚಿವಾಲಯದ ಪ್ರಕಾರ, ಸರ್ಕಾರದ ವಿರುದ್ಧ ನಡೆದ ಪ್ರತಿಭಟನಾ ರ್ಯಾಲಿಗಳಲ್ಲಿ ಸುಮಾರು 4,10,000 ಜನರು ಭಾಗವಹಿಸಿದ್ದರು.
ಯುದ್ಧ ಮತ್ತು ಏರುತ್ತಿರುವ ಜೀವನ ವೆಚ್ಚಗಳ ಕುರಿತಾದ ಅಸಮಾಧಾನದ ಹಿನ್ನೆಲೆಯಲ್ಲಿ, ಅಕ್ಟೋಬರ್ 24 ರಂದು ಇಟಲಿಯಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದವು. ಟುರಿನ್, ರೋಮ್ ಮತ್ತು ಬೊಲೊಗ್ನಾಗಳಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ಸಂಭವಿಸಿದವು; ಆದರೆ ಮಿಲನ್ನಲ್ಲಿ ನಡೆದ ಪ್ರತಿಭಟನೆಗಳು ಶಾಂತಿಯುತವಾಗಿದ್ದವು.
‘ಒಂದು ಪ್ರಮುಖ ಅಂಕಿಅಂಶವೇನೆಂದರೆ, ಈ ದೇಶದಲ್ಲಿ ನಿಮಗೆ ಎಷ್ಟು ಗೌರವವಿದೆ ಎಂಬುದು… ಒಳ್ಳೆಯ ವಿಷಯವೇನೆಂದರೆ, ಇಲ್ಲಿ ನಿಮ್ಮನ್ನು ಬಹಳವಾಗಿ ಬಯಸಲಾಗುತ್ತದೆ ಮತ್ತು ಆತ್ಮೀಯವಾಗಿ ಸ್ವಾಗತಿಸಲಾಗುತ್ತದೆ. ನೀವು ಯಾವುದೇ ರೀತಿಯ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವುದಿಲ್ಲ ಎಂಬುದು ಅವರಿಗೆ ತಿಳಿದಿದೆ ಎಂದುಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಯುರೋಪಿನ ಇತರ ಭಾಗಗಳಲ್ಲಿ ನಾವು ನೋಡುತ್ತಿರುವಂತೆ, ನೀವು ಬೀದಿಗಿಳಿದು ಸಮಾಜಕ್ಕೆ ತೊಂದರೆ ಉಂಟುಮಾಡುವುದಿಲ್ಲ ಎಂಬುದು ಅವರಿಗೆ ಗೊತ್ತು. ಭಾರತೀಯರು ಮತ್ತು ಭಾರತೀಯ ಸಮುದಾಯದವರು ಶಾಂತಿಪ್ರಿಯರು ಎಂಬುದು ಅವರಿಗೆ ತಿಳಿದಿದೆ. ಅವರು ತಮ್ಮ ಕುಟುಂಬಗಳೊಂದಿಗೆ ವಾಸಿಸುತ್ತಾರೆ ಮತ್ತು ತಮ್ಮ ಕುಟುಂಬಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಜೊತೆಗೆ, ‘ನಮ್ಮ ನಿಯಂತ್ರಣಕ್ಕೆ ಮೀರಿದ’ ಕೆಲವು ಅಪವಾದಗಳು ಇರಬಹುದು ಎಂದೂ ಅವರು ತಿಳಿಸಿದರು.





