ನಮ್ಮ ಕೆಲಸಗಳನ್ನು ಪ್ರಶ್ನಿಸುವುದೇ ಬಿಜೆಪಿ ನಾಯಕರಿಗೆ ನಿತ್ಯದ ಉದ್ಯೋಗವಾಗಿದೆ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ನಮ್ಮ ಸಾಧನೆಗಳನ್ನು ನರೇಂದ್ರ ಮೋದಿ ಅವರು ಮೆಚ್ಚುತ್ತಿದ್ದರೂ, ರಾಜ್ಯದ ಬಿಜೆಪಿಯವರು ಅವುಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯವರ ಪ್ರಶ್ನೆಗಳಿಗೆ ತಾವು ಉತ್ತರಿಸುವುದಕ್ಕಿಂತ ಕೇಂದ್ರ ಸರ್ಕಾರವೇ ತಮ್ಮ ಕೆಲಸಗಳಿಗೆ ಪುರಾವೆ ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ಕಲಬುರಗಿಯ ವಿಶೇಷ ತೊಗರಿಯ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವ ಪ್ರಯತ್ನದಿಂದ ಜಿಲ್ಲೆಯ ರೈತರಿಗೆ ಶೇಕಡಾ 30ರಷ್ಟು ಹೆಚ್ಚಿನ ಬೆಲೆ ದೊರೆಯುವಂತಾಗಿದೆ. ಇದರ ಜೊತೆಗೆ, ಜಿಲ್ಲೆಯಲ್ಲಿ ಬೆಳೆಯುವ ಹೆಸರು, ತೊಗರಿ, ಉದ್ದು ಮತ್ತು ಹುರುಳಿ ಸೇರಿದಂತೆ ವಿವಿಧ ಬೇಳೆಕಾಳುಗಳನ್ನು ಸ್ಥಳೀಯವಾಗಿಯೇ ಮೌಲ್ಯವರ್ಧನೆ ಮಾಡುವ ಉದ್ದೇಶದಿಂದ ಅವುಗಳನ್ನು ಬಳಸಿ ಶಕ್ತಿ ನೀಡುವ ಆಹಾರ ಬಾರ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮವನ್ನೂ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ಪಲ್ಸ್, ಭೀಮಾ ಪಲ್ಸ್, ಕಲಬುರಗಿ ಖಡಕ್ ರೊಟ್ಟಿ ಮತ್ತು ಕಮಲಾಪುರ ಕೆಂಪು ಬಾಳೆ ಸೇರಿದಂತೆ ಜಿಲ್ಲೆಯ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತು ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಉಪಕ್ರಮಗಳ ಮೂಲಕ ರೈತರು ಮತ್ತು ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಕೊನೆಯಲ್ಲಿ ಬಿಜೆಪಿಯವರಿಗೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ ಅವರು, ತಮ್ಮನ್ನು ಪ್ರಶ್ನಿಸುವ ಮತ್ತು ಟೀಕಿಸುವ ಮೊದಲು ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕೇಳಲಿ. ಬಳಿಕ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ‘ದಿಲ್ ಕಿ ಬಾತ್’ ಮಾತನಾಡಲಿ ಎಂದು ಹೇಳಿದ್ದಾರೆ.

ನಮ್ಮ ಕೆಲಸಗಳನ್ನು ಪ್ರಶ್ನಿಸುವುದೇ ಬಿಜೆಪಿ ನಾಯಕರಿಗೆ ನಿತ್ಯದ ಉದ್ಯೋಗವಾಗಿದೆ. ಪ್ರಶ್ನೆಗಳಿಗೆ ಉತ್ತರ ನೀಡಿದರೂ ಮತ್ತೆ ಮತ್ತೆ ಅದೇ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕಲಬುರಗಿಯ ಅಭಿವೃದ್ಧಿ ಉಪಕ್ರಮಗಳ ಪ್ರಸ್ತಾಪವಾಗಿರುವುದನ್ನು ಉಲ್ಲೇಖಿಸಿರುವ ಅವರು, ಕಲಬುರಗಿಗೆ ಪ್ರಿಯಾಂಕ್ ಖರ್ಗೆ ಮಾಡಿದ್ದೇನು ಎಂದು ಕೇಳುವ ಬಿಜೆಪಿಯವರಿಗೆ ಮೋದಿ ಅವರ ‘ಮನ್ ಕಿ ಬಾತ್’ ಉತ್ತರ ನೀಡುತ್ತದೆ ಎಂದು ಹೇಳಿದ್ದಾರೆ.

ಕಲಬುರಗಿ ರೊಟ್ಟಿಯ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡ ಕ್ರಮಗಳಿಂದಾಗಿ ಈ ಉತ್ಪನ್ನಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತು ದೊರೆತಿದೆ. ಈ ಹಿಂದೆ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕಲಬುರಗಿ ರೊಟ್ಟಿಯ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿ, ಇದೀಗ ಭೌಗೋಳಿಕ ಸೂಚ್ಯಂಕ (ಜಿಐ) ಮಾನ್ಯತೆ ಪಡೆದ ಕಲಬುರಗಿ ತೊಗರಿಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡುತ್ತಿರುವ ಉಪಕ್ರಮದ ಬಗ್ಗೆಯೂ ಮಾತನಾಡಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others