ವೀಟೊ ಅಧಿಕಾರದ ಕುರಿತು ಭಾರತದ ನಿಲುವು ತತ್ವಬದ್ಧವಾಗಿದೆ , ಅರೆಬರೆ ಸದಸ್ಯತ್ವ ನಮಗೆ ಬೇಡ: ವಿಶ್ವಸಂಸ್ಥೆಗೆ ಭಾರತ ಸಂದೇಶ

ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ವೀಟೋ ಹಕ್ಕು ಇಲ್ಲದ ಖಾಯಂ ಸದಸ್ಯ ಸ್ಥಾನವನ್ನು ಸೃಷ್ಟಿಸುವುದು ಹೊಸದಾಗಿ ಸೇರ್ಪಡೆಯಾಗುವ ದೇಶಗಳನ್ನು ‘ಎರಡನೇ ದರ್ಜೆ’ಗೆ ತಳ್ಳಿದಂತೆ ಎಂದು ಭಾರತ ಹೇಳಿದೆ.

ವೀಟೊ ಅಧಿಕಾರದ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಹರೀಶ್ ಪರ್ವತನೇನಿ ಅವರು, ವೀಟೊ ಅಧಿಕಾರವಿಲ್ಲದ ದೀರ್ಘಾವಧಿಯ ಸದಸ್ಯರ ಪ್ರತ್ಯೇಕ ವರ್ಗವನ್ನು ಸೃಷ್ಟಿಸುವುದರಿಂದ ಈಗಿನ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇದರಿಂದ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ಎಂಬ ಐವರು ಖಾಯಂ ಸದಸ್ಯರು ಈಗ ಹೊಂದಿರುವ ಮೇಲುಗೈ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ನ್ಯಾಯಸಮ್ಮತತೆ ಮತ್ತು ಸಮಾನತೆಯ ದೃಷ್ಟಿಯಿಂದ ಎಲ್ಲ ಖಾಯಂ ಸದಸ್ಯರಿಗೂ ಸಮಾನ ಹಕ್ಕುಗಳು ಹಾಗೂ ಜವಾಬ್ದಾರಿಗಳು ಇರಬೇಕು ಎಂದು ಅವರು ಒತ್ತಿಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಭಾಗವಾಗಿ ವೀಟೊ ಅಧಿಕಾರವಿಲ್ಲದ ಹೊಸ ಖಾಯಂ ಸದಸ್ಯರ ವರ್ಗವನ್ನು ಸೃಷ್ಟಿಸಿದರೆ, ಅವರು ‘ಎರಡನೇ ದರ್ಜೆಯ’ ಸದಸ್ಯರಾಗಿಯೇ ಉಳಿಯಲಿದ್ದಾರೆ. ಇದರಿಂದ ಈಗಿರುವ ಐವರು ಖಾಯಂ ಸದಸ್ಯರ ಪ್ರಾಬಲ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಸುಧಾರಣೆಗೊಂಡ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಅಸ್ತಿತ್ವದಲ್ಲಿರುವವರೆಗೆ ಎಲ್ಲ ಖಾಯಂ ಸದಸ್ಯರಿಗೂ ಈ ಅಧಿಕಾರ ಇರಬೇಕು. ವೀಟೊ ಅಧಿಕಾರದ ಕುರಿತು ಭಾರತದ ನಿಲುವು ತತ್ವಬದ್ಧವಾಗಿದ್ದು, ಎಲ್ಲರಿಗೂ ತಿಳಿದಿದೆ. ವೀಟೊ ಅಧಿಕಾರ ಇರುವವರೆಗೆ, ಸುಧಾರಣೆಗೊಂಡ ಭದ್ರತಾ ಮಂಡಳಿಯ ಎಲ್ಲ ಖಾಯಂ ಸದಸ್ಯರೂ ಅದನ್ನು ಹೊಂದಿರಬೇಕು ಎಂಬ ನಮ್ಮ ನಿಲುವನ್ನು ಪುನರುಚ್ಚರಿಸುತ್ತೇವೆ ಎಂದು ತಿಳಿಸಿದ್ದಾರೆ.

15 ಸದಸ್ಯರನ್ನೊಳಗೊಂಡ ಭದ್ರತಾ ಮಂಡಳಿಯಲ್ಲಿ ಖಾಯಂ ಮತ್ತು ಖಾಯಂ ಅಲ್ಲದ ಎರಡೂ ವರ್ಗಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು ಭಾರತದ ಬಹುಕಾಲದ ಬೇಡಿಕೆಯಾಗಿದೆ. ಖಾಯಂ ಅಲ್ಲದ ಸದಸ್ಯರ ಸಂಖ್ಯೆಯನ್ನು ಮಾತ್ರ ಹೆಚ್ಚಿಸುವ ಪ್ರಯತ್ನಗಳಿಂದ ಅರ್ಥಪೂರ್ಣ ಸುಧಾರಣೆ ಸಾಧ್ಯವಿಲ್ಲ ಎಂದು ಭಾರತ ವಾದಿಸುತ್ತಿದೆ.

ಭದ್ರತಾ ಮಂಡಳಿಯ ಸುಧಾರಣೆಗೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯಲು ನಿರಂತರವಾಗಿ ಒತ್ತಾಯಿಸುತ್ತಿದೆ.

ಇದೇ ವೇಳೆ, 2028-29ರ ಅವಧಿಗೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ಸ್ಥಾನ ಪಡೆಯಲು ಭಾರತ ಪ್ರಯತ್ನಿಸುತ್ತಿದೆ. ಏಷ್ಯಾ–ಪೆಸಿಫಿಕ್ ಗುಂಪಿಗೆ ಮೀಸಲಾಗಿರುವ ಏಕೈಕ ಸ್ಥಾನಕ್ಕಾಗಿ ಭಾರತವು ತಜಿಕಿಸ್ತಾನದ ವಿರುದ್ಧ ಸ್ಪರ್ಧಿಸಲಿದೆ. ಈ ಚುನಾವಣೆಯು 2027ರ ಜೂನ್‌ನಲ್ಲಿ ನಡೆಯಲಿದೆ.

1945ರಲ್ಲಿ ಸ್ಥಾಪನೆಯಾದ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವ ಐವರು ಖಾಯಂ ಸದಸ್ಯರಿದ್ದಾರೆ. ಉಳಿದ 10 ಖಾಯಂ ಅಲ್ಲದ ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ ಮಂಡಳಿಯು ಇಂದಿನ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಪ್ರತಿಬಿಂಬಿಸುತ್ತಿಲ್ಲ ಮತ್ತು 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಮರ್ಥವಾಗಿಲ್ಲ ಎಂದು ಭಾರತ ಹಲವು ಬಾರಿ ಪ್ರತಿಪಾದಿಸಿದೆ.

Share it :

Leave a Reply

Your email address will not be published. Required fields are marked *