120 ಕಿ.ಮೀ. ವೇಗದವರೆಗೆ ಯಾವುದೇ ನೋಟಿಸ್ ಕಳುಹಿಸಬಾರದು : ಸಚಿವ ನಿತಿನ್ ಗಡ್ಕರಿ

ನವದೆಹಲಿ: ದೇಶದ ಎಕ್ಸ್‌ಪ್ರೆಸ್‌ವೇಗಳಲ್ಲಿ ಗಂಟೆಗೆ 120 ಕಿ.ಮೀ. ವೇಗದ ಮಿತಿಯಲ್ಲಿ ಚಲಿಸುವ ವಾಹನಗಳಿಗೆ ಯಾವುದೇ ಸಂಚಾರ ದಂಡದ ಚಲನ್ ಜಾರಿ ಮಾಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಉದ್ಯಮ ಸಂಸ್ಥೆ ಸಿಐಐ ಆಯೋಜಿಸಿದ್ದ ಭಾರತೀಯ ಹೆದ್ದಾರಿಗಳ ಭವಿಷ್ಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆದ್ದಾರಿಗಳಲ್ಲಿ ವೇಗದ ಕಾರಣಕ್ಕೆ ಹಲವರಿಗೆ ನೋಟಿಸ್‌ಗಳು ತಲುಪುತ್ತಿವೆ. 120 ಕಿ.ಮೀ. ವೇಗದವರೆಗೆ ಯಾವುದೇ ನೋಟಿಸ್ ಕಳುಹಿಸಬಾರದು ಎಂದು ನಾನು ಸೂಚಿಸಿದ್ದೇನೆ. ಅಷ್ಟೇ ಅಲ್ಲದೆ, 120 ಕಿ.ಮೀ.ಗಿಂತ ಶೇ. 20ರಷ್ಟು ವೇಗ ಹೆಚ್ಚಿದ್ದರೂ ಅಂಥವರಿಗೆ ರಿಯಾಯಿತಿ ನೀಡಿ ಬಿಡಬೇಕು. ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವವರಿಗೆ ಮಾತ್ರ ಚಲನ್ ವಿಧಿಸಬೇಕು ಎಂದು ಗಡ್ಕರಿ ಸ್ಪಷ್ಟಪಡಿಸಿದರು.

ದೇಶದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಹೆದ್ದಾರಿ ಜಾಲದಲ್ಲಿ ಸಂಚಾರ ನಿಯಮಗಳ ಜಾರಿಯನ್ನು ಚುರುಕುಗೊಳಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು (ATMS) ಅಳವಡಿಸಿಕೊಳ್ಳಲು ಕೈಗಾರಿಕಾ ವಲಯದ ಸಹಕಾರವನ್ನು ಸಚಿವರು ಕೋರಿದರು. ಈ ಅತ್ಯಾಧುನಿಕ ತಂತ್ರಜ್ಞಾನವು ಲೇನ್ ಶಿಸ್ತು ಉಲ್ಲಂಘಿಸುವವರನ್ನು ಸುಲಭವಾಗಿ ಪತ್ತೆಹಚ್ಚಲು ಮತ್ತು ಹೆದ್ದಾರಿ ಸುರಕ್ಷತೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದರು.

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ (E20) ಕುರಿತು ಇತ್ತೀಚೆಗೆ ವ್ಯಕ್ತವಾದ ಆಕ್ಷೇಪಗಳನ್ನು ತಳ್ಳಿಹಾಕಿದ ಗಡ್ಕರಿ, ಇದನ್ನು ಹಣ ನೀಡಿ ಮಾಡಿಸಿದ ಅಪಪ್ರಚಾರ ಎಂದು ಕರೆದಿದ್ದಾರೆ.

2022ರಿಂದಲೇ ದೇಶದಲ್ಲಿ 4 ಕೋಟಿ ಕಾರುಗಳು ಮತ್ತು 20 ಕೋಟಿ ದ್ವಿಚಕ್ರ ವಾಹನಗಳು ಇ-20 ಇಂಧನದಲ್ಲಿ ಯಾವುದೇ ತೊಂದರೆಯಿಲ್ಲದೆ ಓಡಾಡುತ್ತಿವೆ. ಮೂರು ತಿಂಗಳ ಹಿಂದೆ ಎಥೆನಾಲ್ ವಿಚಾರವಾಗಿ ಭಾರೀ ಗದ್ದಲ ಎಬ್ಬಿಸಲಾಗಿತ್ತು, ಈಗ ಎಲ್ಲವೂ ಶಾಂತವಾಗಿದೆ. 2022ರಿಂದ ಬಳಸಲಾಗುತ್ತಿದ್ದರೂ ಯಾರದ್ದಾದರೂ ವಾಹನ ಕೆಟ್ಟು ನಿಂತಿದೆಯೇ? ಇದೆಲ್ಲವೂ ಸಂಪೂರ್ಣವಾಗಿ ಪ್ರಾಯೋಜಿತ ಅಪಪ್ರಚಾರವಾಗಿತ್ತು ಎಂದು ಅವರು ಕಿಡಿಕಾರಿದರು.

ಈ ವೇಗದ ಮಿತಿಗಿಂತ ಶೇ.20ರಷ್ಟು ಹೆಚ್ಚು ವೇಗದಲ್ಲಿ ಚಲಿಸುವ ವಾಹನಗಳಿಗೂ ವಿನಾಯಿತಿ ನೀಡಲು ನಿರ್ದೇಶಿಸಿರುವುದಾಗಿ ಹೇಳಿದ್ದಾರೆ.

Share it :

Leave a Reply

Your email address will not be published. Required fields are marked *