ಅಕ್ಟೋಬರ್ 28 ಬಂದರೆ, ಭಾರತದ ಮಣ್ಣು ಒಂದು ಅಸಾಮಾನ್ಯ ಹೆಣ್ಣುಮಗಳನ್ನು ನೆನೆಯುತ್ತದೆ,ಅವಳ ಹೆಸರು ಸೋದರಿ ನಿವೇದಿತಾ.ಮೂಲ ಹೆಸರು ಮಾರ್ಗರೇಟ್ ಎಲಿಜಬೆತ್ ನೋಬಲ್ ಹುಟ್ಟಿದ್ದು ಐರ್ಲೆಂಡಿನಲ್ಲಿ. ಬೆಳೆದದ್ದು ಕ್ರೈಸ್ತ ಸಂಸ್ಕೃತಿಯಲ್ಲಿ ಆದರೆ, ಬದುಕಿದ್ದು, ಬದುಕನ್ನು ಮುಡಿಪಾಗಿಟ್ಟದ್ದು ಭಾರತಕ್ಕಾಗಿ ಒಬ್ಬ ವಿದೇಶಿ ಮಹಿಳೆ ಭಾರತದ ತಾಯಿಯಾಗಬಹುದೆಂದು ಅವಳು ತೋರಿಸಿಕೊಟ್ಟಳು. ಅದಕ್ಕಾಗಿಯೇ ಅವಳು ಇಂದಿಗೂ ಪ್ರಸ್ತುತ ಅವಳ ಜನ್ಮದಿನ ಕೇವಲ ಹುಟ್ಟುಹಬ್ಬವಲ್ಲ, ಅದು ತ್ಯಾಗ, ಸೇವೆ ಮತ್ತು ಸ್ತ್ರೀ ಶಕ್ತಿಯ ಹಬ್ಬ.
ಮಾರ್ಗರೇಟ್ ಬಾಲ್ಯದಿಂದಲೂ ಪ್ರಶ್ನೆ ಕೇಳುವ ಹುಡುಗಿ. ದೇವರು ಎಲ್ಲಿದ್ದಾನೆ? ದುಃಖ ಏಕೆ? ಹೆಣ್ಣು ಏಕೆ ಹಿಂದೆ ಉಳಿದಿದ್ದಾಳೆ? ಎಂಬ ಪ್ರಶ್ನೆಗಳು ಅವಳನ್ನು ಕಾಡುತ್ತಿದ್ದವು. ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಅವಳು, ಲಂಡನ್ನಿನಲ್ಲಿ ಸ್ವಾಮಿ ವಿವೇಕಾನಂದರ ಉಪನ್ಯಾಸ ಕೇಳಿದರು. ಆ ಒಂದು ಕ್ಷಣ ಅವಳ ಜೀವನದ ದಿಕ್ಕನ್ನೇ ಬದಲಿಸಿತು, ವಿವೇಕಾನಂದರು ಭಾರತದ ಆತ್ಮವನ್ನು, ವೇದಾಂತದ ವಿಶಾಲತೆಯನ್ನು, ಮಾನವ ಸೇವೆಯೇ ಮಾಧವ ಸೇವೆ ಎಂಬ ಸತ್ಯವನ್ನು ಅವಳ ಮುಂದೆ ತೆರೆದಿಟ್ಟರು. ಮಾರ್ಗರೇಟ್ ಅದನ್ನು ಕೇವಲ ಕೇಳಲಿಲ್ಲ ಅದನ್ನು ಬದುಕಲು ನಿರ್ಧರಿಸಿದಳು. ಗುರು ಬೇಕೆಂದರೆ, ಶಿಷ್ಯೆ ತನ್ನನ್ನೇ ಅರ್ಪಿಸ ಬೇಕು ಎಂದು ಅರಿತರು.
1898ರಲ್ಲಿ ಭಾರತಕ್ಕೆ ಬಂದಿಳಿದರು ಅಂದಿನ ಭಾರತ ಗುಲಾಮಗಿರಿಯ ಸಂಕೋಲೆಯಲ್ಲಿ, ಬಡತನದಲ್ಲಿ, ಅನಕ್ಷರತೆಯಲ್ಲಿ ನರಳುತ್ತಿತ್ತು. ಅದರಲ್ಲೂ ಹೆಣ್ಣುಮಕ್ಕಳ ಸ್ಥಿತಿ ಇನ್ನೂ ಶೋಚನೀಯವಾಗಿತ್ತು. ಶಾಲೆಗೆ ಹೋಗುವುದು ಅಪರಾಧವೆಂಬಂತೆ ಕಾಣುತ್ತಿದ್ದ ಕಾಲ ಅಂತಹ ಕಾಲದಲ್ಲಿ ನಿವೇದಿತಾ, ಕಲ್ಕತ್ತಾದ ಬಾಗ್ಬಜಾರ್ನ ಕಿರಿದಾದ ಬೀದಿಯಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದಳು. ಪುಸ್ತಕ, ಸ್ಲೇಟು, ಪೆನ್ಸಿಲ್ ಕೊಟ್ಟಳು. ಅಕ್ಷರ ಕಲಿಸಿದರು. ಅಡುಗೆ, ಹೊಲಿಗೆ, ಸ್ವಚ್ಛತೆ, ಆರೋಗ್ಯ, ದೇಶಪ್ರೇಮ ಎಲ್ಲವನ್ನೂ ಕಲಿಸಿದರು. ಅವಳಿಗೆ ಶಾಲೆ ಎಂದರೆ ಕೇವಲ ಕಟ್ಟಡವಲ್ಲ, ಅದು ದೇವಾಲಯ ಹೆಣ್ಣುಮಗು ಎಂದರೆ ಕೇವಲ ವಿದ್ಯಾರ್ಥಿನಿಯಲ್ಲ, ಅವಳು ಭವಿಷ್ಯದ ಭಾರತದ ತಾಯಿ.
ನಿವೇದಿತಾಳನ್ನು ವಿವೇಕಾನಂದರು ಸುಮ್ಮನೆ ನಿವೇದಿತಾ ಎಂದು ಕರೆಯಲಿಲ್ಲ ನಿವೇದಿತಾ ಎಂದರೆ ಸಮರ್ಪಿತಳಾದವಳು. ತನ್ನ ದೇಶ, ತನ್ನ ಸಂಬಂಧ, ತನ್ನ ಸುಖ, ತನ್ನ ಭವಿಷ್ಯ ಎಲ್ಲವನ್ನೂ ಭಾರತದ ಮಣ್ಣಿಗೆ ನಿವೇದನೆ ಮಾಡಿದವಳು. ಅವಳು ಸೀರೆ ಉಟ್ಟಳು, ಭಾರತೀಯ ಆಚಾರ ಕಲಿತಳು,ಬಂಗಾಳಿ ಕಲಿತಳು ಭಾರತೀಯರಂತೆ ಬದುಕಿದಳು. ಆದರೆ, ಅವಳ ಮನಸ್ಸು ಮಾತ್ರ ವಿಶ್ವದಷ್ಟು ವಿಶಾಲವಾಗಿತ್ತು. ರಾಗ ದ್ವೇಷಗಳ ಮೀರಿದ ತ್ಯಾಗಮಯಿ ಎಂದು ಅವಳನ್ನು ಕರೆಯುವುದು ಅದಕ್ಕಾಗಿಯೇ ಅವಳಲ್ಲಿ ದ್ವೇಷವಿರಲಿಲ್ಲ. ಬ್ರಿಟಿಷರ ವಿರುದ್ಧವೂ ಅವಳಿಗೆ ದ್ವೇಷವಿರಲಿಲ್ಲ, ಅನ್ಯಾಯದ ವಿರುದ್ಧ ಮಾತ್ರ ಹೋರಾಟವಿತ್ತು ಅವಳು ಪ್ರೀತಿಯಿಂದಲೇ ಕ್ರಾಂತಿ ಮಾಡಿದರು.
ಪ್ಲೇಗ್ ರೋಗ ಕಲ್ಕತ್ತಾವನ್ನು ಆವರಿಸಿದಾಗ ನಿವೇದಿತಾಳ ನಿಜವಾದ ರೂಪ ಜಗತ್ತು ಕಂಡಿತು. ಜನರು ಮನೆ ಬಿಟ್ಟು ಓಡುತ್ತಿದ್ದಾಗ, ಅವರು ಬೀದಿ ಬೀದಿಗೆ ಹೋಗಿ ರೋಗಿಗಳನ್ನು ಸ್ವಚ್ಛಗೊಳಿಸಿದರು. ಮನೆಗಳನ್ನು ತೊಳೆದರು, ಔಷಧಿ ಕೊಟ್ಟು ಧೈರ್ಯ ತುಂಬಿದರು ಒಬ್ಬ ಸನ್ಯಾಸಿನಿಯಂತೆ, ಒಬ್ಬ ತಾಯಿಯಂತೆ, ಒಬ್ಬ ಸೇವಕಿಯಂತೆ ಸೇವೆಗೆ ನಿಂತರು. ಆಗ ಜನರು ಅರಿತರು ಸೇವೆ ಎಂದರೆ ಭಾಷಣವಲ್ಲ, ಅದು ಕೈಯಲ್ಲಿ ಪೊರಕೆ ಹಿಡಿಯುವುದು, ರೋಗಿಯ ಹಣೆ ಮುಟ್ಟುವುದು ಎಂದು. ಇಂದಿನ ಕೋವಿಡ್ ಕಾಲದ ಸೇವಕಿಯರಿಗೆ, ನರ್ಸ್ಗಳಿಗೆ, ಆಶಾ ಕಾರ್ಯಕರ್ತೆಯರಿಗೆ ನಿವೇದಿತಾ ಮೊದಲ ಆದರ್ಶ.
ಅವಳು ಕೇವಲ ಸೇವಕಿಯಾಗಿರಲಿಲ್ಲ, ಕ್ರಾಂತಿಕಾರಿಯೂ ಆಗಿದ್ದರು. ಭಾರತದ ಸ್ವಾತಂತ್ರ್ಯ ಚಳವಳಿಗೆ ಅವಳು ಬುದ್ಧಿ, ಶಕ್ತಿ, ಹಣ, ಸಂಪರ್ಕ ಎಲ್ಲವನ್ನೂ ಕೊಟ್ಟು ಯುವಕರಿಗೆ ದೇಶಪ್ರೇಮ ಕಲಿಸಿದರು. ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರ ಸಂಶೋಧನೆಗೆ ನೆರವಾಗಿದ್ದುದ್ದಲ್ಲದೆ ಕಲಾವಿದರಿಗೆ ಭಾರತೀಯ ಕಲೆಯ ಹೆಮ್ಮೆ ಮೂಡಿಸಿದರು. ರವೀಂದ್ರನಾಥ ಟ್ಯಾಗೋರ್, ಶ್ರೀ ಅರವಿಂದ, ಗೋಖಲೆ ಎಲ್ಲರಿಗೂ ಅವಳು ಸ್ಫೂರ್ತಿಯಾಗಿದ್ದರು ಒಬ್ಬ ಮಹಿಳೆ ಬಯಸಿದರೆ, ಶಾಲೆಯಿಂದ ಹಿಡಿದು ಸ್ವಾತಂತ್ರ್ಯ ಚಳವಳಿಯವರೆಗೆ ಎಲ್ಲವನ್ನೂ ಮುನ್ನಡೆಸಬಹುದು ಎಂದು ಸಾಬೀತುಪಡಿಸಿದರು.
ಇಂದು ವಿಶ್ವಕ್ಕೆ ನಿವೇದಿತಾಳ ಸಂದೇಶ ಏನು? ಮೊದಲ ಸಂದೇಶವೆಂದರೆ, ಹೆಣ್ಣು ದುರ್ಬಲಳಲ್ಲ,ಹೆಣ್ಣು ಶಕ್ತಿ. ಹೆಣ್ಣಿಗೆ ಅಕ್ಷರ ಕೊಟ್ಟರೆ, ಅವಳು ಕುಟುಂಬವನ್ನು, ಸಮಾಜವನ್ನು, ದೇಶವನ್ನು ಬೆಳಗುತ್ತಾಳೆ. ಎರಡನೇ ಸಂದೇಶವೆಂದರೆ, ದೇಶ ಎಂದರೆ ಗಡಿಯಲ್ಲ ದೇಶ ಎಂದರೆ ಮನುಷ್ಯತ್ವ. ಐರ್ಲೆಂಡಿನಲ್ಲಿ ಹುಟ್ಟಿದವಳು ಭಾರತದ ತಾಯಿಯಾಗಲು ಸಾಧ್ಯವಾದರೆ, ಜಗತ್ತಿನ ಯಾವ ಹೆಣ್ಣೂ ಯಾವ ಗಡಿಗೂ ಕಟ್ಟುಬಿದ್ದವಳಲ್ಲ. ಮೂರನೇ ಸಂದೇಶವೆಂದರೆ, ಧರ್ಮ ಎಂದರೆ ಜಗಳವಲ್ಲ, ಧರ್ಮ ಎಂದರೆ ಸೇವೆ. ನಿವೇದಿತಾ ಕ್ರೈಸ್ತಳಾಗಿ ಹುಟ್ಟಿ ಹಿಂದೂ ಸಂಸ್ಕೃತಿಯನ್ನು ಪ್ರೀತಿಸಿ ಅವರ ಬದುಕು ಧರ್ಮಗಳ ನಡುವೆ ಸೇತುವೆಯಾಯಿತು. ಇಂದಿನ ಜಗತ್ತಿಗೆ ಇದು ಅತ್ಯಂತ ಅಗತ್ಯವಾದ ಪಾಠ.
ಇಂದಿನ ಮಹಿಳೆಗೆ ನಿವೇದಿತಾ ಹೇಳುವ ಮಾತು ಸ್ಪಷ್ಟವಾಗಿದೆ ಹೆದರಬೇಡ,ಕಲಿ,ಕಲಿಸು. ನಿನ್ನ ಮನೆಯಿಂದಲೇ ಬದಲಾವಣೆ ಆರಂಭಿಸು ನಿನ್ನ ಮಗಳು ಶಾಲೆಗೆ ಹೋಗಬೇಕು. ನಿನ್ನ ಮಗಳು ಪ್ರಶ್ನೆ ಕೇಳಬೇಕು, ನಿನ್ನ ಮಗಳು ಸ್ವಾವಲಂಬಿಯಾಗಬೇಕು, ಸೌಂದರ್ಯವೆಂದರೆ ಮುಖದ ಅಲಂಕಾರವಲ್ಲ, ಅದು ಮನಸ್ಸಿನ ತ್ಯಾಗ. ಸ್ವಾತಂತ್ರ್ಯವೆಂದರೆ ಕೇವಲ ಬಟ್ಟೆ, ಉದ್ಯೋಗವಲ್ಲ, ಅದು ಭಯವಿಲ್ಲದೆ ಬದುಕುವ ಧೈರ್ಯ. ನಿವೇದಿತಾ ಬದುಕಿದ್ದು ಕೇವಲ 43 ವರ್ಷ. ಆದರೆ, ಆ 43 ವರ್ಷದಲ್ಲಿ ಅವಳು ನೂರು ವರ್ಷಗಳ ಕೆಲಸ ಮಾಡಿ,ಆಯಸ್ಸು ದೊಡ್ಡದಲ್ಲ, ಅರ್ಪಣೆ ದೊಡ್ಡದು ಎಂದು ತೋರಿಸಿದರು.
ಕನ್ನಡ ನಾಡಿನ ಹೆಣ್ಣುಮಕ್ಕಳಿಗೂ ನಿವೇದಿತಾ ವಿಶೇಷ ಸ್ಫೂರ್ತಿ,ಕಿತ್ತೂರು ಚೆನ್ನಮ್ಮ, ಅಕ್ಕಮಹಾದೇವಿ, ಒನಕೆ ಓಬವ್ವ, ಕುವೆಂಪು ಕಂಡ ಕನ್ನಡದ ತಾಯಿಯ ಪರಂಪರೆಯಲ್ಲಿ ನಿವೇದಿತಾ ಕೂಡ ಸೇರುತ್ತಾರೆ. ಕನ್ನಡ ರಾಜ್ಯೋತ್ಸವದ ಈ ದಿನಗಳಲ್ಲಿ ನಾವು ನಿವೇದಿತಾಳನ್ನು ನೆನೆಯುವುದು ಕೇವಲ ಭಾವುಕತೆಯಲ್ಲ ಅದು ಪ್ರತಿಜ್ಞೆ. ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುವ ಪ್ರತಿಜ್ಞೆ,ನಮ್ಮ ಶಾಲೆಗಳನ್ನು ದೇವಾಲಯವಾಗಿಸುವ ಪ್ರತಿಜ್ಞೆ ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಪ್ರೀತಿಸುವ ಪ್ರತಿಜ್ಞೆ.
ಆದ್ದರಿಂದ, ಅಕ್ಟೋಬರ್ 28ರಂದು ನಾವು ಕೇವಲ ಹೂವು ಹಾಕಿ ನಮನ ಸಲ್ಲಿಸಬಾರದು. ಒಬ್ಬ ಹೆಣ್ಣುಮಗುವಿಗೆ ಪುಸ್ತಕ ಕೊಡೋಣ,ಒಬ್ಬ ಹೆಣ್ಣಿಗೆ ಧೈರ್ಯ ಕೊಡೋಣ, ಒಬ್ಬ ತಾಯಿಗೆ ಗೌರವ ಕೊಡೋಣ. ನಿವೇದಿತಾ ಹೇಳಿದಂತೆ, ಭಾರತದ ಭವಿಷ್ಯ ಹೆಣ್ಣಿನ ಕೈಯಲ್ಲಿದೆ,ಹೆಣ್ಣು ಎದ್ದರೆ ಜಗತ್ತು ಎದ್ದಂತೆ,ಹೆಣ್ಣು ಬೆಳಗಿದರೆ ವಿಶ್ವ ಬೆಳಗಿದಂತೆ. ಅದೇ ಸೋದರಿ ನಿವೇದಿತಾ ವಿಶ್ವಕ್ಕೆ ಕೊಟ್ಟ ಮಹಿಳಾ ಸಂದೇಶ. ಜೈ ನಿವೇದಿತಾ, ಜೈ ಭಾರತಾಂಬೆ ಎಂದು ಹೆಚ್. ಜೆ. ಶೀಲಾ ತಿಳಿಸಿದ್ದಾರೆ.




