ನವದೆಹಲಿ: ಟಾಟಾ ಸಮೂಹದೊಳಗಿನ ವಿವಾದ ರಾಜಕೀಯ ಸಂಘರ್ಷಕ್ಕೆ ತಿರುಗಿದ್ದು, ಕೇಂದ್ರ ಸರ್ಕಾರವು ಭಾರತೀಯ ಉದ್ಯಮಗಳನ್ನು ತನ್ನ ‘ಆಟದ ವಸ್ತು’ಗಳಂತೆ ಪರಿಗಣಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ಕಾನೂನು ಸಂಬಂಧಿತ ವಿಷಯಗಳನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸುವಂತೆ ರಾಹುಲ್ ಅವರಿಗೆ ಸೂಚಿಸಿದ್ದಾರೆ.
‘ಟಾಟಾ ಸಮೂಹವನ್ನು ಅಪರಾಧಪೂರಿತ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ. ಆದರೆ, ಈ ಬಗ್ಗೆ ಧ್ವನಿ ಎತ್ತಲು ಯಾವುದೇ ಉದ್ಯಮ ನಾಯಕರು ಧೈರ್ಯ ಮಾಡುತ್ತಿಲ್ಲ’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಭಾರತೀಯ ಕೈಗಾರಿಕೆಗಳು ಮತ್ತು ಉದ್ಯಮಿಗಳ ಸಾಧನೆಗಳನ್ನು ರಾಹುಲ್ ಗಾಂಧಿ ಪದೇ ಪದೇ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈಗ ನಮ್ಮ ಉದ್ಯಮ ನಾಯಕರನ್ನೂ ನಿಮ್ಮೊಂದಿಗೆ ಸೇರಿಸಿಕೊಂಡು ಅಪನಂಬಿಕೆ ಮತ್ತು ವಿಷಕಾರಿ ವಾತಾವರಣವನ್ನು ಹರಡಲು ಪ್ರಚೋದಿಸಲು ಪ್ರಯತ್ನಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಟಾಟಾ ಟ್ರಸ್ಟ್ ಮತ್ತು ಟಾಟಾ ಸನ್ಸ್ನ ಪ್ರತಿನಿಧಿಗಳಿಗೆ ಅಮಿತ್ ಶಾ ಅವರ ನಿವಾಸದಲ್ಲಿ ಆತಿಥ್ಯ ನೀಡುವ ಅಗತ್ಯ ಉಂಟುಮಾಡಿದ ಆ ಕಾನೂನು ಮತ್ತು ವಾಣಿಜ್ಯ ಸಂಬಂಧಿತ ವಿಷಯ ಯಾವುದು ಎಂದು ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ.
ಸರ್ಕಾರದ ಆಪ್ತ ಉದ್ಯಮಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವ್ಯಕ್ತಿ ಈ ಆಟಕ್ಕೆ ಯಾವಾಗ ಪ್ರವೇಶಿಸಲಿದ್ದಾರೆ, ಟಾಟಾ ಸಮೂಹದ ಯಾವ್ಯಾವ ಭಾಗಗಳು ಅವರ ಪಾಲಾಗಲಿವೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಕಾಂಗ್ರೆಸ್ ಸಂಸದರು ಪ್ರಶ್ನಿಸಿದ್ದಾರೆ.
ನಿಮ್ಮ ಆಪ್ತರಾಗಿರುವ ಮೂರ್ನಾಲ್ಕು ಉದ್ಯಮಿಗಳನ್ನು ಹೊರತುಪಡಿಸಿ ಉಳಿದ ಭಾರತೀಯ ಉದ್ಯಮಿಗಳು ಈಗಾಗಲೇ ಸರ್ಕಾರವನ್ನು ವಿರೋಧಿಸುತ್ತಿದ್ದಾರೆ. ಅವರನ್ನು ಪ್ರಚೋದಿಸುವ ಅಗತ್ಯವೇ ಇಲ್ಲ ಎಂದು ರಾಹುಲ್ ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಉದ್ಯಮಗಳನ್ನು ಉದ್ಯೋಗ ಸೃಷ್ಟಿಯ ಮೂಲಗಳಾಗಿ ಹಾಗೂ ಆರ್ಥಿಕ ಬೆಳವಣಿಗೆಯ ಚಾಲಕಶಕ್ತಿಗಳಾಗಿ ಪರಿಗಣಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಉದ್ಯಮಶೀಲತೆಗೆ ಉತ್ತೇಜನ ನೀಡಲು, ಕೈಗಾರಿಕೆಗಳಿಗೆ ಬೆಂಬಲ ಒದಗಿಸಲು ಹಾಗೂ ಹೂಡಿಕೆಯನ್ನು ಪ್ರೋತ್ಸಾಹಿಸಲು ಅನುಕೂಲವಾಗುವಂತೆ ನಮ್ಮ ಸರ್ಕಾರ ನೀತಿಗಳನ್ನು ರೂಪಿಸಿದೆ ಎಂದು ತಿಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ಟಾಟಾ ಟ್ರಸ್ಟ್ ಮತ್ತು ಟಾಟಾ ಸನ್ಸ್ನ ಪ್ರತಿನಿಧಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದೇಕೆ ಎಂದು ಪ್ರಶ್ನಿಸುವ ಮೂಲಕ ವಾಕ್ಸಮರವನ್ನು ಮತ್ತಷ್ಟು ತೀವ್ರಗೊಳಿಸಿದರು. ಈ ವಿವಾದದಿಂದ ಸರ್ಕಾರದ ಆಪ್ತ ಉದ್ಯಮಿಯೊಬ್ಬರಿಗೆ ಲಾಭವಾಗಬಹುದು ಎಂದೂ ಅವರು ಆರೋಪಿಸಿದರು.
ರಾಹುಲ್ ಅವರ ಆರೋಪಕ್ಕೆ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ‘ವಿರೋಧ ಪಕ್ಷದ ನಾಯಕರಾಗಿರುವ ನೀವು ಪ್ರತಿಯೊಂದು ವಿಷಯವನ್ನೂ ರಾಜಕೀಯಗೊಳಿಸುವುದರಿಂದ ದೂರವಿರಬೇಕು ಎಂದು ಸಲಹೆ ನೀಡುತ್ತೇನೆ. ವಾಣಿಜ್ಯ ಮತ್ತು ಕಾನೂನು ಸಂಬಂಧಿತ ವಿಷಯಗಳನ್ನು ಯಾವುದೇ ಆಧಾರವಿಲ್ಲದೆ ಅಪರಾಧ ಕೃತ್ಯಗಳೆಂದು ಬಿಂಬಿಸುವುದು ಸ್ವೀಕಾರಾರ್ಹವಲ್ಲ’ ಎಂದು ಹೇಳಿದ್ದಾರೆ.




