ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹಾಗೂ ಇತರ ಸಮಾನಾಂತರ ಹುದ್ದೆಗಳ (5,431 ಹುದ್ದೆ) ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ನೂತನ ಉಪಕ್ರಮಗಳನ್ನು ಈ ಬಾರಿ ಅಳವಡಿಸಿಕೊಂಡಿದೆ.
ಸಮಾನಾಂತರ ಶೈಕ್ಷಣಿಕ ಅರ್ಹತೆಯ ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಮ್ಮೆಗೇ ಪರೀಕ್ಷೆ ನಡೆಸುವುದರ ಮೂಲಕ ನೇಮಕಾತಿ ಪ್ರಕ್ರಿಯೆ ಮುಗಿಸಲು ಇದೇ ಮೊದಲ ಬಾರಿಗೆ ಕೆಇಎ ಹೆಜ್ಜೆ ಹಾಕಿದೆ. ಇದುವರೆಗೂ ಇಂತಹ ಅವಕಾಶ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮಾತ್ರ ಇತ್ತು.
ಇತ್ತೀಚೆಗೆ ರಾಜ್ಯ ಸರ್ಕಾರ, ಕೆಇಎಗೂ ನೇಮಕಾತಿ ಪ್ರಾಧಿಕಾರದ ಮಾನ್ಯತೆ ನೀಡಿರುವ ಹಿನ್ನೆಲೆಯಲ್ಲಿ ಒಟ್ಟು 33 ಇಲಾಖೆಗಳ ವಿವಿಧ ಸಮಾನಾಂತರ ಹುದ್ದೆಗಳಿಗೆ ಒಮ್ಮೆಗೇ ಪರೀಕ್ಷೆ ನಡೆಸಿ, ತ್ವರಿತವಾಗಿ ನೇಮಕಾತಿ ನಡೆಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಮೊದಲೆಲ್ಲ, ಸಮಾನಾಂತರ ಹುದ್ದೆಗಳಿದ್ದರೂ ಪ್ರತಿ ಇಲಾಖೆಗೂ ಪ್ರತ್ಯೇಕವಾದ ಅಧಿಸೂಚನೆ, ಅರ್ಜಿ ಮತ್ತು ಲಿಖಿತ ಪರೀಕ್ಷೆ ನಡೆಸಬೇಕಿತ್ತು. ಇದರಿಂದ ಅಭ್ಯರ್ಥಿಗಳಿಗೂ ಆರ್ಥಿಕ ಹೊರೆ ಅಗುತ್ತಿತ್ತು. ಈ ಸುಧಾರಣಾ ಕ್ರಮದಿಂದ ಒಂದೇ ಅರ್ಜಿ ಮತ್ತು ಒಂದೇ ಶುಲ್ಕದಲ್ಲಿ ವಿವಿಧ ಇಲಾಖೆಗಳ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ವಿಳಂಬ ಮತ್ತು ಕಿರಿಕಿರಿ ಕೂಡ ತಪ್ಪಲಿದೆ ಎಂದು ಅವರು ವಿವರಿಸಿದರು.
ಹಿಂದಿನ ಮಾಹಿತಿ ಜೋಡಣೆ!
ಈ ಹಿಂದೆ ಕೆಇಎ ನಡೆಸಿದ ಗ್ರಾಮ ಆಡಳಿತಾಧಿಕಾರಿ, ಭೂ ಮಾಪಕ, ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಮಾಹಿತಿ ಎಫ್ ಡಿಎ ಮತ್ತು ಎಸ್ ಡಿ ಎ ಅರ್ಜಿಯಲ್ಲೂ ಪ್ರತಿಬಿಂಬಿಸುವ ಹಾಗೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದು ಅಂತಹವರು ಕೇವಲ ಲಾಗಿನ್ ಆಗಿ ಶುಲ್ಕ ಪಾವತಿಸಿದರೆ ಅರ್ಜಿ ಸಲ್ಲಿಸಿದಂತಾಗುತ್ತದೆ ಎಂದು ಅವರು ವಿವರಿಸಿದರು.
ಈ ಹಿಂದಿನ ಯೂಸರ್ ನೇಮ್, ಪಾಸ್ ವರ್ಡ್ ಮೂಲಕವೇ ಲಾಗಿನ್ ಆಗಬಹುದು. ಬಳಿಕ ಅಗತ್ಯಬಿದ್ದರೆ ಏನಾದರೂ ತಿದ್ದುಪಡಿ ಮಾಡಿಕೊಳ್ಳಬಹುದು. ನಂತರ ಶುಲ್ಕ ಪಾವತಿಸಿ ಸಬ್ ಮಿಟ್ ಮಾಡಿದರೆ ಅರ್ಜಿ ಸಲ್ಲಿಸಿದಂತಾಗುತ್ತದೆ. ಯಾರು ಇದುವರೆಗೂ ನೋಂದಣಿ ಮಾಡಿಕೊಂಡಿಲ್ಲವೊ ಅಂತಹವರು ಮಾತ್ರ ಆಧಾರ್ ದೃಢೀಕರಣದ ಮೂಲಕ ಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಕೌನ್ಸೆಲಿಂಗ್ ಮಾದರಿಯಲ್ಲಿ ನೇಮಕಾತಿ
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಮೆರಿಟ್ ಹಾಗೂ ವಿವಿಧ ಮೀಸಲಾತಿಗಳ ಆಧಾರದ ಮೇಲೆ ನೇಮಕಾತಿ ಪಟ್ಟಿಯನ್ನೂ ಪ್ರಕಟಿಸಲಾಗುವುದು. ಹೇಗೆ ಕಾಲೇಜು/ಕೋರ್ಸ್ ಆಯ್ಕೆಗೆ ಆದ್ಯತಾ ಕ್ರಮದಲ್ಲಿ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆಯೊ ಅದೇ ರೀತಿ ಅಭ್ಯರ್ಥಿಗಳು ತಮಗೆ ಬೇಕಾದ ಇಲಾಖೆ/ ಹುದ್ದೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬೇಕು. ನಂತರ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆಗಳು ಹಂಚಿಕೆಯಾಗಲಿವೆ. ಒಟ್ಟಿನಲ್ಲಿ ಒಬ್ಬರಿಗೆ ಒಂದು ಹುದ್ದೆ ಹಂಚಿಕೆಯಾಗಲಿದೆ ಎಂದು ಅವರು ವಿವರಿಸಿದರು.
ನೇಮಕಾತಿ ಕೌನ್ಸೆಲಿಂಗ್ ನಲ್ಲೂ ಸೀಟು ಹಂಚಿಕೆ ಕೌನ್ಸೆಲಿಂಗ್ ರೀತಿಯಲ್ಲೇ ಅಣಕು ಫಲಿತಾಂಶ ಪ್ರಕಟಿಸಿ, ಆದ್ಯತೆಗಳನ್ನು ಬದಲು ಬದಲು ಮಾಡಿಕೊಳ್ಳಲು ಸಮಯ ನೀಡಲಾಗುವುದು. ಅದರ ನಂತರ ತಾತ್ಕಾಲಿಕ ಹಾಗೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಹೀಗೆ ಮಾಡುವುದರಿಂದ ಒಮ್ಮೆಗೇ ಎಲ್ಲ 5,431 ಹುದ್ದೆಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಂತಾಗಲಿದೆ. ಇಲ್ಲದಿದ್ದರೆ ಮೆರಿಟ್ ಅಭ್ಯರ್ಥಿಗಳು ಕೆಲವೊಮ್ಮೆ ಒಂದಕ್ಕಿಂತ ಹೆಚ್ವು ಹುದ್ದೆಗಳಿಗೆ ಆಯ್ಕೆಯಾಗಿ, ನಂತರ ತಮಗೆ ಬೇಕಾದ ಒಂದು ಹುದ್ದೆ ಸೇರಲು ಹೆಚ್ಚು ಸಮಯ ಹಿಡಿಯುತ್ತಿತ್ತು. ಅಲ್ಲದೆ, ಅಂತಹವರಿಂದ ತೆರವಾಗುವ ಹುದ್ದೆಗಳಿಗೆ ಪುನಃ ಆಯ್ಕೆ ಪ್ರಕ್ರಿಯೆ ನಡೆಸುವುದರ ಬದಲು ಇಚ್ಛೆ/ಆಯ್ಕೆಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಒಳ್ಳೆಯದು ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಫಲಿತಾಂಶದ ಬಳಿಕ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದರು.
ವರ್ಷಕ್ಕೆ ಎರಡು ಪರೀಕ್ಷೆ
ಸಮಾನಾಂತರ ಹುದ್ದೆಗಳಿಗೆ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ಇದೆ. ಉದಾಹರಣೆಗೆ ಜನವರಿಯಿಂದ ಜೂನ್ ವರೆಗೂ ವಿವಿಧ ಇಲಾಖೆಗಳ ನೇಮಕಾತಿ ಕೋರಿಕೆಗಳಿಗೆ ಒಮ್ಮೆಗೆ ಅರ್ಜಿ ಕರೆದು ಪರೀಕ್ಷೆ ನಡೆಸುವುದು. ಅದರ ನಂತರ ಬರುವ ಇಲಾಖೆಗಳ ಕೋರಿಕೆಗಳಿಗೆ ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಸಿ, ನೇಮಕಾತಿ ಪಟ್ಟಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಸನ್ನ ಅವರು ವಿವರಿಸಿದರು.





