ಉದ್ಯೋಗ ವಾರ್ತೆ: ಕೆಇಎಯಿಂದ 218 ಕಿರಿಯ ಎಂಜಿನಿಯರ್ ನೇಮಕಾತಿಗೆ ಅಧಿಸೂಚನೆ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ನಗರ ಯೋಜನಾ ಆಯುಕ್ತಾಲಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು‌ 218 ಕಿರಿಯ ಎಂಜಿನಿಯರ್ ಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.

ಉಳಿಕೆ ಮೂಲ ವೃಂದಕ್ಕೆ ಸೇರಿದ 187 ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ ಸೇರಿದ 31 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನ.26 ಹಾಗೂ ಶುಲ್ಕ ಪಾವತಿಗೆ ನ. 27 ಕೊನೆ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜನವರಿ ತಿಂಗಳಲ್ಲಿ ಲಿಖಿತ ಪರೀಕ್ಷೆ ಇರಲಿದೆ. ಆದರೆ ಕನ್ನಡ ಭಾಷಾ ಪರೀಕ್ಷೆ ಮಾತ್ರ ಜನವರಿ 8ರಂದು ನಡೆಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದಲ್ಲಿ ಖಾಲಿ ಇದ್ದ ಸಹಾಯಕ ನಗರ ಯೋಜಕರ ಹುದ್ದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಕೆಎಚ್ ಬಿ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ, ಅಂತರ್ಜಲ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಖನಿಜ‌ ನಿಗಮ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮ ದಲ್ಲಿನ ಕಿರಿಯ‌ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವರಗಳಿಗೆ ವೆಬ್ ಸೈಟ್ ನೋಡಿ ಎಂದು ಅವರು ಸಲಹೆ ನೀಡಿದ್ದಾರೆ.

Share it :

Leave a Reply

Your email address will not be published. Required fields are marked *