ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಭಾನುವಾರ (ನವೆಂಬರ್ 1, 2026) ಭೀಕರ ಖಾಸಗಿ ವಿಮಾನ ದುರಂತ ಸಂಭವಿಸಿದ್ದು, ವಿಮಾನದಲ್ಲಿದ್ದ ಎಲ್ಲಾ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಟೆಕ್ಸಾಸ್‌ನಿಂದ ಬಹಾಮಾಸ್‌ಗೆ ತೆರಳುತ್ತಿದ್ದ ಲಿಯರ್‌ಜೆಟ್ 60 (Learjet 60) ಮಾದರಿಯ ಬಿಸಿನೆಸ್ ಜೆಟ್ ವಿಮಾನವು ನಿಯಂತ್ರಣ ತಪ್ಪಿ ಪಾಮ್ ಬೀಚ್ ಕೌಂಟಿಯ ಜನವಸತಿ ಪ್ರದೇಶದ ಸಮೀಪ ಪತನಗೊಂಡಿದೆ.
ಮೆರಿಕದ ದಕ್ಷಿಣ ಫ್ಲೋರಿಡಾದ ಜನನಿಬಿಡ ವಸತಿ ಪ್ರದೇಶದ ಬಳಿ ಭೀಕರ ವಿಮಾನ ಅಪಘಾತವೊಂದು ಭಾನುವಾರ ಸಂಭವಿಸಿದೆ.
ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಧ್ಯಾಹ್ನ 12.50ಕ್ಕೆ ಪಾಮ್ ಬೀಚ್ ಕೌಂಟಿಯಲ್ಲಿ ಲಿಯರ್‌ಜೆಟ್ 60 ವಿಮಾನ ಪತನಗೊಂಡಿದೆ. ಇದೊಂದು ಭೀಕರ ದುರಂತ ಎಂದು ಹೇಳಿದ್ದಾರೆ.
ಅಪಘಾತದ ತನಿಖೆಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ (ಎನ್‌ಟಿಎಸ್‌ಬಿ) ನೆರವು ನೀಡಲು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತಂಡವನ್ನು ಕಳುಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಮಾತನಾಡಿ, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದು, ರಸ್ತೆಯಲ್ಲಿದ್ದ ಯಾರಿಗೂ ಗಾಯವಾಗಿರುವ ಅಥವಾ ಮೃತಪಟ್ಟಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ ಎಂದು ಹೇಳಿದ್ದಾರೆ.
ಇದೊಂದು ಭೀಕರ ವಿಮಾನ ದುರಂತ. ಕ್ಷಿಪಣಿಯೊಂದು ಕೆಳಕ್ಕೆ ಧಾವಿಸಿದಂತೆ ವಿಮಾನ ಕಾಣುತ್ತಿತ್ತು. ರಸ್ತೆಯ ಬದಿಯಲ್ಲಿ ಬೃಹತ್ ಕುಳಿಯೊಂದು ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಹಾರಾಟ ನಡೆಸುತ್ತಿದ್ದ ಖಾಸಗಿ ಬಿಸಿನೆಸ್ ಜೆಟ್ ವಿಮಾನವೊಂದು ಹಠಾತ್ತನೆ ನಿಯಂತ್ರಣ ತಪ್ಪಿ ನೇರವಾಗಿ ನೆಲಕ್ಕೆ ಅಪ್ಪಳಿಸಿ, ಬೆಂಕಿಯ ಉಂಡೆಯಾಗಿ ಸ್ಫೋಟಗೊಂಡಿದೆ. ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ.
ಜನನಿಬಿಡ ರಸ್ತೆಯ ಸಮೀಪ ಈ ದುರಂತ ಸಂಭವಿಸಿದ್ದು, ವಿಮಾನವು ಮನೆಗಳ ಮೇಲೆ ಬೀಳುವ ಸ್ವಲ್ಪದರಲ್ಲೇ ರಸ್ತೆಯ ಪಕ್ಕದಲ್ಲಿ ಅಪ್ಪಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರು ರೆಕಾರ್ಡ್ ಮಾಡಿರುವ ದೃಶ್ಯಗಳಲ್ಲಿ, ಆಕಾಶದಿಂದ ವೇಗವಾಗಿ ಕೆಳಕ್ಕೆ ಧಾವಿಸಿದ ವಿಮಾನ ರಸ್ತೆಯ ಸಮೀಪ ಅಪ್ಪಳಿಸಿ ಭಾರೀ ಸ್ಫೋಟದೊಂದಿಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ.
ವಿಮಾನ ಪತನಗೊಂಡ ಸ್ಥಳದಲ್ಲಿ ಬೃಹತ್ ಕುಳಿ ನಿರ್ಮಾಣವಾಗಿದ್ದು, ಸುತ್ತಮುತ್ತಲಿನ ರಸ್ತೆಯ ಕಾಂಕ್ರೀಟ್ ತುಣುಕುಗಳ ನಡುವೆ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು. ಮನೆಗಳು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಕೆಲವೇ ಅಡಿಗಳ ಅಂತರದಲ್ಲಿ ವಿಮಾನ ಪತನಗೊಂಡಿರುವುದನ್ನು ಕಂಡು ಸ್ಥಳೀಯರು ಆಘಾತ ವ್ಯಕ್ತಪಡಿಸಿದ್ದಾರೆ.
ಭಾನುವಾರ ಫ್ಲೋರಿಡಾದಾದ್ಯಂತ ಭಾರೀ ಮಳೆಯಾಗುತ್ತಿತ್ತು. ಅತಿಯಾದ ಮಳೆಯ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದವರೆಗೆ ಪ್ರವಾಹದ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿತ್ತು.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಟೆಕ್ಸಾಸ್‌ನ ಆಸ್ಟಿನ್-ಬರ್ಗ್‌ಸ್ಟ್ರಾಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಈ ವಿಮಾನ ಬಹಾಮಾಸ್‌ಗೆ ತೆರಳುತ್ತಿತ್ತು. ವಿಮಾನದಲ್ಲಿ ಯಾರೆಲ್ಲ ಪ್ರಯಾಣಿಸುತ್ತಿದ್ದರು ಮತ್ತು ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಅಧಿಕಾರಿಗಳು ತಕ್ಷಣಕ್ಕೆ ಬಹಿರಂಗಪಡಿಸಿಲ್ಲ.
ವಿಮಾನವು ಸಮುದ್ರ ಮಟ್ಟದಿಂದ ಸುಮಾರು 35,000 ಅಡಿ ಎತ್ತರದಲ್ಲಿ ಪೂರ್ವ ದಿಕ್ಕಿಗೆ ಹಾರಾಟ ನಡೆಸುತ್ತಿದ್ದಾಗ ಪೈಲಟ್‌ಗಳು ಪ್ರಕ್ಷುಬ್ಧ ಹವಾಮಾನ, ವಿಮಾನದ ಮೇಲೆ ಮಂಜುಗಡ್ಡೆ ರೂಪುಗೊಳ್ಳುತ್ತಿರುವುದು ಹಾಗೂ ಮಳೆಯ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ಇನ್ನೂ 2,000 ಅಡಿ ಎತ್ತರಕ್ಕೆ ಹಾರಲು ಅನುಮತಿ ಕೋರಿದ್ದರು.
ಆದರೆ, ಕೆಲವೇ ಕ್ಷಣಗಳಲ್ಲಿ ವಿಮಾನವು ತೀವ್ರವಾಗಿ ಕೆಳಮುಖವಾಗಿ ಧಾವಿಸಲು ಆರಂಭಿಸಿತು. ಪ್ರತಿ ನಿಮಿಷಕ್ಕೆ 10,000 ಅಡಿ ವೇಗದಲ್ಲಿ ಕೆಳಗಿಳಿಯುತ್ತಿದ್ದ ವಿಮಾನದ ವೇಗ ಬಳಿಕ 20,000 ಅಡಿ ಹಾಗೂ ಗರಿಷ್ಠ 30,000 ಅಡಿಗೆ ಏರಿತ್ತು. ಇದರಿಂದ ವಿಮಾನವು ಅದರ ವಿನ್ಯಾಸದ ಮಿತಿಯನ್ನೂ ಮೀರಿತ್ತು ಎಂದು ವಾಯು ಸಂಚಾರ ನಿಯಂತ್ರಣದ ಧ್ವನಿಮುದ್ರಿಕೆಗಳು ಹಾಗೂ ವಿಮಾನ ಹಾರಾಟದ ದತ್ತಾಂಶ ತಿಳಿಸಿವೆ.





