ಆರ್ಥಿಕವಾಗಿ ಸಬಲಳಾದ ಪತ್ನಿ ಪತಿಯಿಂದ ಜೀವನಾಂಶ ಪಡೆಯಲು ಅನರ್ಹಳು: ಹೈಕೋರ್ಟ್ ಆದೇಶ

ಬೆಂಗಳೂರು: ಉತ್ತಮ ಉದ್ಯೋಗದಲ್ಲಿದ್ದು, ತನ್ನ ಖರ್ಚು-ವೆಚ್ಚಗಳನ್ನು ತಾನೇ ಭರಿಸಿಕೊಳ್ಳುವಷ್ಟು ಆರ್ಥಿಕ ಶಕ್ತಿ ಹೊಂದಿರುವ ಪತ್ನಿಗೆ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಬೇರೆಯಾಗಿ ವಾಸಿಸುತ್ತಿರುವ ಪತ್ನಿಗೆ ಪ್ರತಿ ತಿಂಗಳು ₹20,000 ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲ್ಲಾಕೂರು ಸುಮಲತಾ ಅವರ ಏಕಸದಸ್ಯ ಪೀಠವು ಈ ನಿರ್ಧಾರಕ್ಕೆ ಬಂದಿದೆ. “ಆರ್ಥಿಕ ಸ್ವಾವಲಂಬನೆ, ಸ್ಥಿರ ಉದ್ಯೋಗ ಹಾಗೂ ಗೌರವಯುತ ಆದಾಯವು ಜೀವನಾಂಶ ಕೋರಿಕೆಯನ್ನು ತಿರಸ್ಕರಿಸಲು ಪ್ರಬಲ ಕಾರಣಗಳಾಗಿವೆ. ತನಗೆ ಬದುಕಲು ಯಾವುದೇ ಆದಾಯದ ದಾರಿಯಿಲ್ಲದೆ ಅಸಹಾಯಕಳಾದಾಗ ಮಾತ್ರ ಮಹಿಳೆ ಪತಿಯಿಂದ ಜೀವನಾಂಶ ಕೋರಲು ಅರ್ಹಳಾಗುತ್ತಾಳೆ” ಎಂದು ಪೀಠ ಸ್ಪಷ್ಟಪಡಿಸಿದೆ.

ಪತಿಯೊಬ್ಬನೇ ಪತ್ನಿಯನ್ನು ಸಲಹಬೇಕೆಂಬ ನಿಯಮವಿಲ್ಲ:

ಎಲ್ಲಾ ಸಂದರ್ಭಗಳಲ್ಲೂ ವಿವಾಹಿತ ಮಹಿಳೆಯನ್ನು ಆಕೆಯ ಪತಿಯೇ ಪೋಷಿಸಬೇಕು ಎಂದು ಕಾನೂನು ಹೇಳುವುದಿಲ್ಲ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಮಹಿಳೆಯೊಬ್ಬಳು ಉನ್ನತ ವಿದ್ಯಾಭ್ಯಾಸ ಪಡೆದು, ಸಮಾಜದಲ್ಲಿ ಗೌರವಾನ್ವಿತ ಜೀವನ ನಡೆಸಲು ಸಾಲುವಷ್ಟು ದುಡಿಯುತ್ತಿರುವಾಗ, ಆಕೆಯನ್ನು ‘ಪತಿಯ ಮೇಲೆ ಅವಲಂಬಿತಳು’ ಎಂದು ಯಾವುದೇ ಕಾರಣಕ್ಕೂ ಪರಿಗಣಿಸಲು ಬರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರ:

ಪ್ರತ್ಯೇಕವಾಗಿ ನೆಲೆಸಿರುವ ಪತ್ನಿಗೆ ಮಾಸಿಕ ₹20,000 ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ವೇಳೆ ಪತಿಯ ವಕೀಲರು ವಾದ ಮಂಡಿಸಿ, “ಪತ್ನಿಯು ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ ಇಂಜಿನಿಯರಿಂಗ್ ಮುಗಿಸಿದ್ದು, ಖಾಸಗಿ ಕಂಪನಿಯಲ್ಲಿ ವಾರ್ಷಿಕ ₹10 ಲಕ್ಷ ಪ್ಯಾಕೇಜ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಿಂಗಳು ₹54,700 ಸಂಬಳ ಪಡೆಯುತ್ತಿದ್ದು, ಗೌರವಯುತ ಜೀವನಕ್ಕೆ ಇದು ಸಾಕಷ್ಟು ಅನುಕೂಲಕರವಾಗಿದೆ. ಇನ್ನೊಂದೆಡೆ ಪತಿ ತಿಂಗಳಿಗೆ ₹2 ಲಕ್ಷ ದುಡಿಯುತ್ತಿದ್ದರೂ, ತೀವ್ರ ಮಧುಮೇಹದಿಂದಾಗಿ ದಿನಕ್ಕೆ 4 ಬಾರಿ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ. ಅನಾರೋಗ್ಯ ಪೀಡಿತ ವೃದ್ಧ ಪೋಷಕರು ಹಾಗೂ ತಮ್ಮ ವೈದ್ಯಕೀಯ ವೆಚ್ಚಕ್ಕೆ ತಿಂಗಳಿಗೆ ₹70,000 ಕ್ಕೂ ಅಧಿಕ ಹಣ ಖರ್ಚಾಗುತ್ತಿದೆ. ಜೊತೆಗೆ ಪತ್ನಿ ಹೂಡಿರುವ ನಾನಾ ಪ್ರಕರಣಗಳ ಕಾನೂನು ಹೋರಾಟದ ಖರ್ಚನ್ನೂ ಭರಿಸಬೇಕಿದೆ” ಎಂದು ಪೀಠಕ್ಕೆ ತಿಳಿಸಿದ್ದರು.

ಪೋಷಕರನ್ನು ಸಾಕುವವಳು ಅಸಹಾಯಕಳಲ್ಲ:

ತನ್ನ ಸಂಬಳದಲ್ಲಿ ಪ್ರತಿ ತಿಂಗಳು ಸುಮಾರು ₹35,000 ಹಣವನ್ನು ಪೋಷಕರ ನಿರ್ವಹಣೆಗೆ ನೀಡುತ್ತಿರುವುದಾಗಿ ವಿಚಾರಣೆ ವೇಳೆ ಪತ್ನಿಯು ವಾದಿಸಿದ್ದರು. ಈ ಅಂಶವನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ, “ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 144 ರ ಪ್ರಕಾರ, ಜೀವನಾಂಶ ಕೋರುವವರು ತಾವು ಸ್ವಂತ ಜೀವನ ನಿರ್ವಹಣೆಗೆ ಅಶಕ್ತರು ಎಂಬುದನ್ನು ಮೊದಲು ಸಾಬೀತುಪಡಿಸಬೇಕು. ತನ್ನ ಸಂಪಾದನೆಯಿಂದ ಸ್ವತಃ ಬದುಕಿ, ಪೋಷಕರನ್ನೂ ನೋಡಿಕೊಳ್ಳುವಷ್ಟು ಆರ್ಥಿಕ ಸಬಲತೆ ಹೊಂದಿರುವ ಮಹಿಳೆ ಪತಿಯ ಮೇಲೆ ಅವಲಂಬಿತಳಾಗಿದ್ದಾಳೆ ಎಂದು ಹೇಳಲಾಗದು” ಎಂದು ಅಭಿಪ್ರಾಯಪಟ್ಟು ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

Share it :

Leave a Reply

Your email address will not be published. Required fields are marked *