ಅಗ್ನಿವೀರರ ಸೇವಾ ಅವಧಿ ಮತ್ತೆ 2 ವರ್ಷ ವಿಸ್ತರಣೆ

ನವದೆಹಲಿ: ಭಾರತೀಯ ಸೇನೆಯಲ್ಲಿ ‘ಅಗ್ನಿಪಥ’ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿವೀರರಿಗೆ(Agniveer) ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅವರ ಕಾರ್ಯಾವಧಿಯನ್ನು ಹೆಚ್ಚುವರಿಯಾಗಿ ಎರಡು ವರ್ಷ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಮಹತ್ವದ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ, “ಭಾರತೀಯ ರಕ್ಷಣಾ ವಲಯ ಮತ್ತು ಅಗ್ನಿವೀರರ(Agniveer service) ದೃಷ್ಟಿಯಿಂದ ಇದೊಂದು ಐತಿಹಾಸಿಕ ದಿನ. ನಾಲ್ಕು ವರ್ಷಗಳ ಸೇವಾವಧಿ ಪೂರ್ಣಗೊಳಿಸಿ ನಿರ್ಗಮಿಸಬೇಕಿದ್ದ ಮೊದಲ ಬ್ಯಾಚ್‌ನ ಶೇಕಡ 75ರಷ್ಟು ಯೋಧರಿಗೆ ಸೇನೆಯಲ್ಲಿ ಮುಂದುವರಿಯಲು ಹೊಸ ಅವಕಾಶ ಸಿಕ್ಕಂತಾಗಿದೆ” ಎಂದು ತಿಳಿಸಿದರು.

ನಿಯಮಿತ ಸೇವೆಗೆ ಅವಕಾಶ:

2022ರ ಜೂನ್‌ನಲ್ಲಿ ಅಗ್ನಿಪಥ್ ಯೋಜನೆ ಜಾರಿಗೆ ತಂದಾಗಲೇ, ಸೈನಿಕರ ದಕ್ಷತೆ ಆಧರಿಸಿ ನಿಯಮಗಳನ್ನು ಕಾಲಕಾಲಕ್ಕೆ ಮರುಪರಿಶೀಲಿಸಲಾಗುವುದು ಎಂದು ತಿಳಿಸಲಾಗಿತ್ತು. ಪ್ರಸ್ತುತ ಮೊದಲ ತಂಡವು 4 ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಮುಗಿಸುವ ಹಂತದಲ್ಲಿದ್ದು, ಅವರ ಕಾರ್ಯವೈಖರಿ ಅತ್ಯಂತ ತೃಪ್ತಿಕರವಾಗಿದೆ. ಈ ಹಿನ್ನೆಲೆಯಲ್ಲಿ, ಮೊದಲೇ ನಿಗದಿಯಾಗಿದ್ದಂತೆ ಶೇ. 25ರಷ್ಟು ಅಗ್ನಿವೀರರು ನೇರವಾಗಿ ಕಾಯಂ ಸೇವೆಗೆ ಸೇರ್ಪಡೆಗೊಳ್ಳಲಿದ್ದಾರೆ.

ಉಳಿದ ಶೇ. 75ರಷ್ಟು ಮಂದಿಗೂ ಬಾಗಿಲು ಮುಕ್ತ:

ಹಳೆಯ ನಿಯಮದಂತೆ ಉಳಿದ ಶೇ. 75ರಷ್ಟು ಯೋಧರು ನಾಲ್ಕು ವರ್ಷಗಳ ನಂತರ ಸೇನೆಯಿಂದ ಹೊರಬರಬೇಕಿತ್ತು. ಆದರೆ ನೂತನ ಪರಿಷ್ಕರಣೆಯ ಪ್ರಕಾರ, ಇವರಿಗೂ ಹೆಚ್ಚುವರಿಯಾಗಿ 2 ವರ್ಷಗಳ ಸೇವಾ ವಿಸ್ತರಣೆ ನೀಡಲಾಗುತ್ತದೆ. ಈ ಹೆಚ್ಚುವರಿ ಅವಧಿಯ ಬಳಿಕ, ನಿಗದಿತ ಮಾನದಂಡಗಳು ಹಾಗೂ ಅರ್ಹತೆಗಳನ್ನು ಪೂರೈಸುವ ಮತ್ತು ಆಸಕ್ತಿ ಹೊಂದಿರುವ ಯೋಧರನ್ನು ಕಾಯಂ ಆಗಿ ಸಶಸ್ತ್ರ ಪಡೆಗಳಿಗೆ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸಿಡಿಎಸ್ ಸ್ಪಷ್ಟಪಡಿಸಿದ್ದಾರೆ.

Share it :

Leave a Reply

Your email address will not be published. Required fields are marked *