ನಾಳೆಯ ಕೆಇಎ ನೇಮಕಾತಿ ಪರೀಕ್ಷೆಗೆ ಕೊಠಡಿಗೆ ಇಬ್ಬರು ಮೇಲ್ವಿಚಾರಕರ ನೇಮಕ

ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಪೌರಾಡಳಿತ ಇಲಾಖೆಯಲ್ಲಿನ ಎಲೆಕ್ಟ್ರೀಷಿಯನ್ ಗ್ರೇಡ್-1 ಮತ್ತು 2, ಫಾರ್ಮಸಿ ಮತ್ತು ನರ್ಸಿಂಗ್ ಇತ್ಯಾದಿ ಹುದ್ದೆಗಳಿಗೆ ನ.6ರಿಂದ ಮೂರು ದಿನ ಲಿಖಿತ ಪರೀಕ್ಷೆ ನಡೆಯಲಿದ್ದು, ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆಗಳನ್ನು ಕೈಗೆತ್ತಿಕೊಂಡಿದೆ.

ಅಕ್ರಮ ತಡೆಯಲು ಹಲವು ಕಠಿಣ ಕ್ರಮಗಳ ಜತೆಗೆ ಕೊಠಡಿಗೆ ಇಬ್ಬರು ಪರೀಕ್ಷಾ ಮೇಲ್ವಿಚಾರಕರನ್ನು ನಿಯೋಜಿಸುವ ತೀರ್ಮಾನವನ್ನು ಇದೇ ಮೊದಲ ಬಾರಿಗೆ ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಒಬ್ಬರು ಮೇಲ್ವಿಚಾರಕರು ಕೊಠಡಿಯಲ್ಲೇ ಮುಂಭಾಗದಲ್ಲಿ ಇದ್ದರೆ, ಮತ್ತೊಬ್ಬರು ಹಿಂಭಾಗದಲ್ಲಿ ನಿಂತು ನಿಗಾ ವಹಿಸಲು ಸೂಚಿಸಲಾಗಿದೆ. ಜಾಮರ್ ಕಾರ್ಯನಿರ್ವಹಣೆಯನ್ನು ಕೂಡ ಖಾತರಿಪಡಿಸಿಕೊಳ್ಳಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ನ.6ರಂದು ಬೆಂಗಳೂರಿನ ಎರಡು ಕೇಂದ್ರಗಳಲ್ಲಿ ಎಂಟು ಎಲೆಕ್ಟ್ರೀಷಿಯನ್ ಹುದ್ದೆಗಳ‌ ನೇಮಕಕ್ಕೆ ಪರೀಕ್ಷೆ ನಡೆಯಲಿದ್ದು, 1,015 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ನ.7ರಂದು ಫಾರ್ಮಸಿ ಹಾಗೂ ನ.14ರಂದು ಒಟ್ಟು 205 ನೀರು ಸರಬರಾಜು ಆಪರೇಟರ್, ಸಹಾಯಕ ನೀರು ಸರಬರಾಜು ಆಪರೇಟರ್ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗತ್ತದೆ ಎಂದು ಅವರು ವಿವರಿಸಿದ್ದಾರೆ.

ಪೊಲೀಸ್ ಮತ್ತು ಗೃಹ ರಕ್ಷಕ ದಳದ ನೆರವಿನಿಂದ ತೀವ್ರ ತಪಾಸಣೆ ನಡೆಸಿಯೇ ಅಭ್ಯರ್ಥಿಗಳ ನ್ನು ಒಳಗೆ ಬಿಡಲಾಗುತ್ತದೆ. ಎರಡನೇ ಹಂತದಲ್ಲಿ ಕೊಠಡಿ ಒಳಗೂ ತಪಾಸಣೆ ಮಾಡಲು ತೀರ್ಮಾನಿಸಲಾಗಿದೆ. ಒಟ್ಟಿನಲ್ಲಿ ಅಕ್ರಮಕ್ಕೆ ಅವಕಾಶ ಇಲ್ಲದಂತೆ ತೀವ್ರ ನಿಗಾ ಇಡಲು ವೆಬ್ ಕಾಸ್ಟಿಂಗ್ ನೆರವು ಕೂಡ ಪಡೆಯಲಾಗುವುದು ಎಂದು ಹೇಳಿದರು.

Share it :

Leave a Reply

Your email address will not be published. Required fields are marked *