ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಸ್ಪಷ್ಟನೆ : ಗೃಹಲಕ್ಷ್ಮಿ ಯೋಜನೆಯ ₹2000 ಹಣ ಕಾನೂನುಬದ್ಧ ಹಕ್ಕಲ್ಲ

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ಪಡೆಯುವ ಮಾಸಿಕ ₹2,000 ಆರ್ಥಿಕ ನೆರವು ಅವರ ‘ಕಾನೂನುಬದ್ಧ ಹಕ್ಕಲ್ಲ’ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ₹2,000 ಆರ್ಥಿಕ ನೆರವನ್ನು ಫಲಾನುಭವಿಗಳು ತಮ್ಮ ಕಾನೂನುಬದ್ಧ “ಹಕ್ಕು” ಎಂದು ಪ್ರತಿಪಾದಿಸುವಂತಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಅಧಿಕೃತವಾಗಿ ಸ್ಪಷ್ಟಪಡಿಸಿದೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣ ಬಿಡುಗಡೆಗೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಾಗ ಸರ್ಕಾರ ಈ ವಾದ ಮಂಡಿಸಿದೆ.

ರಾಜ್ಯ ಸರ್ಕಾರದ ಪರವಾಗಿ ಸ್ತ್ರೀಶಕ್ತಿ ಯೋಜನಾಧಿಕಾರಿಗಳು ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಿ, “ಈ ಯೋಜನೆಯು ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ತನ್ನ ಸ್ವಂತ ಇಚ್ಛೆಯಿಂದ ಜಾರಿಗೆ ತಂದಿರುವ ಕಲ್ಯಾಣ ಯೋಜನೆಯಾಗಿದೆ. ಇದರ ಅನುಷ್ಠಾನವು ಆಡಳಿತಾತ್ಮಕ ಅನಿವಾರ್ಯತೆ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.

ಬೆಂಗಳೂರಿನ ಕಮಲಾನಗರದ ಆರ್. ಗಂಗಾ ಹಾಗೂ ನಂದಿನಿ ಲೇಔಟ್‌ನ ಜಿ.ಡಿ. ಪವಿತ್ರಾ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ರಾಜ್ಯ ಸರ್ಕಾರವು 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಎರಡು ಕಂತುಗಳ ತಲಾ ₹2,000 ಸಹಾಯಧನವನ್ನು (ಒಟ್ಟು ಸುಮಾರು ₹5,000 ಕೋಟಿ ಬಾಕಿ) ಸುಮಾರು 1.26 ಕೋಟಿ ಮಹಿಳಾ ಫಲಾನುಭವಿಗಳಿಗೆ ವಿತರಿಸಲು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು ಎನ್ನುವ ಮಾಹಿತಿ ತಿಳಿದು ಬಂದಿದೆ.

ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ, “ಗೃಹಲಕ್ಷ್ಮಿ ಯೋಜನೆಯ ₹2,000 ಮಾಸಿಕ ಸಹಾಯಧನವನ್ನು ಫಲಾನುಭವಿಗಳು ತಮ್ಮ ಕಾನೂನುಬದ್ಧ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ” ಎಂದು ರಾಜ್ಯ ಸರ್ಕಾರ ವಿವರಣೆ ನೀಡಿದೆ.

ಹಾಗಾಗಿ, ತೀವ್ರ ಹಣಕಾಸಿನ ಮುಗ್ಗಟ್ಟು ಅಥವಾ ಬಜೆಟ್ ಕೊರತೆ ಎದುರಾದಾಗ, ಫಲಾನುಭವಿಗಳು ಕೇವಲ ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತ ಆಧರಿಸಿ ನ್ಯಾಯಾಲಯದ ಮೂಲಕ ಹಣ ಬಿಡುಗಡೆ ಮಾಡಲು ಒತ್ತಾಯಿಸುವಂತಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ. ಏತನ್ಮಧ್ಯೆ, ಸರ್ಕಾರದ ಲಿಖಿತ ಆಕ್ಷೇಪಣೆಯನ್ನು ದಾಖಲಿಸಿಕೊಂಡ ನ್ಯಾಯಪೀಠವು, ಇದಕ್ಕೆ ಪ್ರತ್ಯುತ್ತರ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post