ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮುಂಬರುವ 10 ಮತ್ತು 12ನೇ ತರಗತಿಯ ವಾರ್ಷಿಕ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು(CBSE Board Exam Schedule) ಅಧಿಕೃತವಾಗಿ ಪ್ರಕಟಿಸಿದೆ.
ಪ್ರಕಟಿತ ದಿನಾಂಕಗಳ ಪ್ರಕಾರ, 2027ರ ಫೆಬ್ರವರಿ 16ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಆದರೆ, 12ನೇ ತರಗತಿಯ ಪ್ರಮುಖ ಐದು ವಿಷಯಗಳ ಪರೀಕ್ಷೆಗಳು ಹೋಳಿ ಹಬ್ಬದ ದಿನವೇ ನಿಗದಿಯಾಗಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಗೊಂದಲ ಮತ್ತು ಆತಂಕವನ್ನು ಸೃಷ್ಟಿಸಿದೆ.
ಪರೀಕ್ಷಾ ದಿನಾಂಕಗಳ ವಿವರ
ನವೆಂಬರ್ 6ರಂದು ಸಿಬಿಎಸ್ಇ ಈ ವೇಳಾಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿದೆ. 10ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 16ರಿಂದ ಆರಂಭವಾಗಿ ಮಾರ್ಚ್ 9, 2027ರೊಳಗೆ ಮುಕ್ತಾಯಗೊಳ್ಳಲಿವೆ. ಇನ್ನು 12ನೇ ತರಗತಿ ಪರೀಕ್ಷೆಗಳು ಕೂಡ ಫೆಬ್ರವರಿ 16ರಿಂದಲೇ ಶುರುವಾಗಲಿದ್ದು, ಏಪ್ರಿಲ್ 9, 2027ರವರೆಗೆ ನಡೆಯಲಿವೆ.
ಹೋಳಿ ಹಬ್ಬದಂದೇ ಪರೀಕ್ಷೆ: ಪೋಷಕರ ಕಳವಳ
ವೇಳಾಪಟ್ಟಿಯ ಪ್ರಕಾರ, 2027ರ ಮಾರ್ಚ್ 22ರ ಸೋಮವಾರದಂದು ಹೋಳಿ ಹಬ್ಬವಿದೆ. ಆದರೆ, ಅದೇ ದಿನ 12ನೇ ತರಗತಿಯ ಐದು ವಿಷಯಗಳ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಹಬ್ಬದ ದಿನವೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕೇ ಅಥವಾ ಮಂಡಳಿಯು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಿದೆಯೇ ಎಂಬ ಪ್ರಶ್ನೆ ಪೋಷಕರಲ್ಲಿ ಮೂಡಿದೆ. ಸದ್ಯಕ್ಕೆ ಮಂಡಳಿಯು ವೇಳಾಪಟ್ಟಿ ಬದಲಾವಣೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಅಧಿಕೃತ ಅಪ್ಡೇಟ್ಗಳನ್ನು ಮಂಡಳಿಯ ಜಾಲತಾಣವಾದ cbse.gov.in ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಮಾರ್ಚ್ 22ರಂದು ನಡೆಯಲಿರುವ ಪರೀಕ್ಷೆಗಳು
ಮಾರ್ಚ್ 22ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಈ ಕೆಳಗಿನ ವಿಷಯಗಳನ್ನು ನಿಗದಿಪಡಿಸಲಾಗಿದೆ:
- ನಾಲೆಡ್ಜ್ ಟ್ರೆಡಿಷನ್ಸ್ ಅಂಡ್ ಪ್ರಾಕ್ಟಿಸಸ್ ಆಫ್ ಇಂಡಿಯಾ (Knowledge Traditions and Practices of India)
- ಭೋಟಿಯಾ (Bhoti)
- ಕೊಕ್ಬೊರೊಕ್ (Kokborok)
- ಬ್ಯಾಂಕಿಂಗ್ (Banking)
- ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ (Electronics Technology)
2025ರಲ್ಲೂ ನಡೆದಿತ್ತು ಇದೇ ರೀತಿಯ ಘಟನೆ
ಹೋಳಿ ಹಬ್ಬದ ದಿನವೇ ಪರೀಕ್ಷೆ ನಿಗದಿಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆ 2025ರ ಮಾರ್ಚ್ 15ರಂದು ಹೋಳಿ ಹಬ್ಬದಂದೇ 12ನೇ ತರಗತಿಯ ಹಿಂದಿ ಪರೀಕ್ಷೆ ನಿಗದಿಯಾಗಿತ್ತು. ಆ ಸಂದರ್ಭದಲ್ಲಿ, ಹಬ್ಬದ ಕಾರಣದಿಂದ ನಿಗದಿತ ದಿನದಂದು ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ನಂತರದ ದಿನಗಳಲ್ಲಿ ಪರೀಕ್ಷೆ ಬರೆಯಲು ಸಿಬಿಎಸ್ಇ ವಿಶೇಷ ಅವಕಾಶ ಕಲ್ಪಿಸಿತ್ತು. ಈ ಬಾರಿಯೂ ಮಂಡಳಿಯು ಅದೇ ರೀತಿಯ ವಿನಾಯಿತಿ ನೀಡಲಿದೆಯೇ ಅಥವಾ ಪರೀಕ್ಷಾ ದಿನಾಂಕವನ್ನೇ ಮುಂದೂಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.





