ನವದೆಹಲಿ: ತನ್ನ ಕುಡಿಯುವ ನೀರಿನ ಮಾದರಿಯು ಕುಡಿಯಲು ಅಸುರಕ್ಷಿತವೆಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಘೋಷಿಸಿ, ಕಾನೂನು ಕ್ರಮಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ‘ಬಿಸ್ಲೆರಿ ಇಂಟರ್ನ್ಯಾಷನಲ್’ (Bisleri International) ಕಂಪನಿಯು ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದೆ. ತಮ್ಮ ಕಂಪನಿಯ ನೀರಿನ ಮಾದರಿಗಳು ಗ್ರಾಹಕರ ಬಳಕೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಸ್ವತಂತ್ರ ಪ್ರಯೋಗಾಲಯದ ವರದಿಯಲ್ಲಿ ಸುರಕ್ಷಿತ ಎಂದು ಸಾಬೀತು ಗುಣಮಟ್ಟದ ನಿಯಮಗಳ ಉಲ್ಲಂಘನೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಸ್ಲೆರಿ ಸಂಸ್ಥೆಯು, “ನಮ್ಮ ಉತ್ಪನ್ನಗಳ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯು ಅತ್ಯಂತ ಕಟ್ಟುನಿಟ್ಟಾಗಿದೆ. ಸ್ವತಂತ್ರ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಯ ವರದಿಯಲ್ಲಿ ನೀರಿನಲ್ಲಿರುವ ‘ಬ್ರೋಮೇಟ್’ (Bromate) ಪ್ರಮಾಣವು ನಿಗದಿತ ಸುರಕ್ಷತಾ ಮಿತಿಯೊಳಗೇ ಇರುವುದು ದೃಢಪಟ್ಟಿದೆ” ಎಂದು ತಿಳಿಸಿದೆ. ಕುಡಿಯುವ ನೀರಿನ ಸುರಕ್ಷತೆ ಮತ್ತು ಶುದ್ಧತೆಗೆ ತಾವು ಸದಾ ಮೊದಲ ಆದ್ಯತೆ ನೀಡುವುದಾಗಿ ಕಂಪನಿ ಪ್ರತಿಪಾದಿಸಿದೆ.
ಗೋವಾ ಘಟಕದ ಹಳೆಯ ಬ್ಯಾಚ್ಗೆ ಸಂಬಂಧಿಸಿದ ವಿವಾದ ಈ ವಿವಾದದ ಹಿನ್ನೆಲೆಯನ್ನು ವಿವರಿಸಿರುವ ಕಂಪನಿ, ಇದು 2025ರ ಸೆಪ್ಟೆಂಬರ್ ತಿಂಗಳಿನಲ್ಲಿ ಗೋವಾ ಘಟಕದಲ್ಲಿ ತಯಾರಾಗಿದ್ದ ನೀರಿನ ಬ್ಯಾಚ್ಗೆ ಸಂಬಂಧಿಸಿದ ಪ್ರಕರಣವಾಗಿದೆ ಎಂದು ಹೇಳಿದೆ. ನಿಯಮದ ಪ್ರಕಾರ ಪ್ರತಿ ಲೀಟರ್ ನೀರಿನಲ್ಲಿ 10 ಮೈಕ್ರೋಗ್ರಾಂ ಮಿತಿಯಲ್ಲಿರಬೇಕಾದ ಬ್ರೋಮೇಟ್ ಪ್ರಮಾಣವು ಆರಂಭಿಕ ಪರೀಕ್ಷೆಯ ವೇಳೆ 12 ಮೈಕ್ರೋಗ್ರಾಂ ದಾಖಲಾಗಿತ್ತು. ಆದರೆ, ಈ ಕುರಿತು ನಡೆಸಲಾದ ಸ್ವತಂತ್ರ ಪ್ರಯೋಗಾಲಯದ ಪರೀಕ್ಷಾ ವರದಿಯನ್ನು ಈಗಾಗಲೇ ಎಫ್ಎಸ್ಎಸ್ಎಐಗೆ ಸಲ್ಲಿಸಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ತನಿಖೆಗೆ ಸಂಪೂರ್ಣ ಸಹಕಾರ ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದಿರುವ ಬಿಸ್ಲೆರಿ, ಎಫ್ಎಸ್ಎಸ್ಎಐ ನಡೆಸುತ್ತಿರುವ ಪ್ರಕ್ರಿಯೆ ಹಾಗೂ ತನಿಖೆಗೆ ಕಂಪನಿಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದೆ.







ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)