ಸಿಂಧೂ ಜಲ ಒಪ್ಪಂದದ ಕುರಿತು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧವಿದ್ದೇವೆ : ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್

ಪಾಕಿಸ್ತಾನ — ಸಿಂಧೂ ಜಲ ಒಪ್ಪಂದದ ಕುರಿತು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧವಿದ್ದೇವೆ : ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್

ನವದೆಹಲಿ: ಸಿಂಧೂ ಜಲ ಒಪ್ಪಂದದ ಕುರಿತು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧವಿದ್ದೇವೆ. ಆದರೆ, ಇದಕ್ಕಾಗಿ ಭಾರತವೇ ಅಧಿಕೃತವಾಗಿ ಆಹ್ವಾನ ನೀಡಬೇಕು ಎಂದು ಪಾಕಿಸ್ತಾನದ ಹವಾಮಾನ ಬದಲಾವಣೆ ಮತ್ತು ಪರಿಸರ ಸಮನ್ವಯ ಸಚಿವ ಮುಸಾದಿಕ್ ಮಸೂದ್ ಮಲಿಕ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಶಾಂಘೈ ಸಹಕಾರ ಸಂಘಟನೆಯ (SCO) ನಾಗರಿಕತೆಯ ಸಂವಾದ ವೇದಿಕೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸುತ್ತಿರುವ ಮಲಿಕ್, ಸುದ್ದಿಗಾರರೊಂದಿಗೆ ಮಾತನಾಡಿದರು.

1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಹಿಯಾಗಿದ್ದ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ನಿರ್ಧಾರವನ್ನು ಮುಸಾದಿಕ್ ಮಲಿಕ್ ಈ ಹಿಂದೆ ತೀವ್ರವಾಗಿ ಟೀಕಿಸಿದ್ದರು.

ಕಳೆದ ಜೂನ್‌ನಲ್ಲಿ ಮಾತನಾಡಿದ್ದ ಅವರು, ಪಾಕಿಸ್ತಾನದ ಪಾಲಿನ ನೀರನ್ನು ಕಸಿಯಲು ಪ್ರಯತ್ನಿಸುವ ಕೈಯನ್ನೇ ಕತ್ತರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಭಾರತ ನೀರನ್ನು ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಅಸ್ತ್ರವಾಗಿ ಬಳಸುತ್ತಿದೆ ಎಂದೂ ಆರೋಪಿಸಿದ್ದರು.

ಸಿಂಧೂ ಜಲ ಒಪ್ಪಂದದ ಕುರಿತು ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ಸ್ಪಷ್ಟಪಡಿಸಿದ್ದರು.

“ಒಪ್ಪಂದದ ಬಗ್ಗೆ ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಅವರು ಹೇಳಿದ್ದರು.

ಆದರೆ, ಭಾನುವಾರದ ಮಾತುಕತೆಯಲ್ಲಿ ಈ ಹಿಂದಿನ ಹೇಳಿಕೆಗಳ ಬಗ್ಗೆ ನೇರವಾಗಿ ಪ್ರತಿಕ್ರಿಯಿಸುವುದನ್ನು ಅವರು ತಪ್ಪಿಸಿದರು.

ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಒಪ್ಪಂದದ ಕುರಿತು ಚರ್ಚಿಸಲು ನೀವು ಆಹ್ವಾನಿಸಿದರೆ ಖಂಡಿತವಾಗಿಯೂ ಮಾತುಕತೆ ನಡೆಸುತ್ತೇವೆ. ಆದರೆ, ಸದ್ಯಕ್ಕೆ ಭಾರತ ಅಂತಹ ಯಾವುದೇ ಆಹ್ವಾನ ನೀಡಿಲ್ಲ” ಎಂದರು.

ಈ ಹಿಂದೆ ಭಾರತಕ್ಕೆ ಎಚ್ಚರಿಕೆ ನೀಡಿದ್ದ ಹೇಳಿಕೆಗಳ ಬಗ್ಗೆ ಕೇಳಿದಾಗಲೂ ಅವರು ನೇರ ಉತ್ತರ ನೀಡಲಿಲ್ಲ. ಭಾರತ ದ್ವಿಪಕ್ಷೀಯ ಮಾತುಕತೆಗೆ ಆಹ್ವಾನಿಸಿದರೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದಾಗಿ ತಿಳಿಸಿದರು.

💬 ಕಾಮೆಂಟ್ • Comments (0)

💬 ಓದುಗರ ಕಾಮೆಂಟ್‌ಗಳು • Reader Comments (0)

ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post